ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ಆನೆಗಳ ತೂಕ ಪರೀಕ್ಷೆ: ‘ಸುಗ್ರೀವ’ ಬಲಶಾಲಿ

ಭಾರದಲ್ಲಿ ‘ಅಭಿಮನ್ಯು’ ನಂತರದ ಸ್ಥಾನ; 4.91 ಟನ್ ತೂಗಿದ ‘ಮಹೇಂದ್ರ’
Published : 6 ಸೆಪ್ಟೆಂಬರ್ 2024, 14:19 IST
Last Updated : 6 ಸೆಪ್ಟೆಂಬರ್ 2024, 14:19 IST
ಫಾಲೋ ಮಾಡಿ
Comments

ಮೈಸೂರು: ದುಬಾರೆ ಆನೆ ಶಿಬಿರದ ‘ಸುಗ್ರೀವ’ 5,190 ಕೆ.ಜಿ ತೂಗುವ ಮೂಲಕ ದಸರಾ ಆನೆಗಳಲ್ಲೇ 2ನೇ ಹೆಚ್ಚು ತೂಕದ ಆನೆಯಾಗಿ ಹೊರಹೊಮ್ಮಿದನು. ಈ ಹಿಂದೆ ಅಂಬಾರಿ ಆನೆ ‘ಅಭಿಮನ್ಯು’ 5,560 ಕೆ.ಜಿ ತೂಗಿದ್ದನು.

ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ಎರಡನೇ ತಂಡದ 5 ದಸರಾ ಆನೆಗಳ ತೂಕ ಪರೀಕ್ಷೆಯು ನಗರದ ಧನ್ವಂತರಿ ರಸ್ತೆಯಲ್ಲಿರುವ ‘ಎಲೆಕ್ಟ್ರಾನಿಕ್‌ ವ್ಹೇಬ್ರಿಡ್ಜ್‌’ನಲ್ಲಿ ಶುಕ್ರವಾರ ನಡೆಯಿತು.

ಕಳೆದ ವರ್ಷದ ತೂಕ ಪರೀಕ್ಷೆಯಲ್ಲಿ 5,035 ಕೆ.ಜಿ ತೂಕವಿದ್ದ ‘ಸುಗ್ರೀವ’ (42), ಈ ಬಾರಿ 155 ಕೆ.ಜಿ.ಯಷ್ಟು ತೂಕ ಹೆಚ್ಚಿಸಿಕೊಂಡಿದ್ದಾನೆ. ಗಜಪಡೆಯ ಎರಡನೇ ತಂಡದ ನೇತೃತ್ವ ವಹಿಸಿದ್ದ ಹಾಗೂ ಶ್ರೀರಂಗಪಟ್ಟಣ ದಸರೆಯಲ್ಲಿ ಅಂಬಾರಿ ಹೊತ್ತಿದ್ದ ಮತ್ತಿಗೋಡು ಆನೆ ಶಿಬಿರದ 41 ವರ್ಷದ ‘ಮಹೇಂದ್ರ’ 4,910 ಕೆ.ಜಿ ತೂಗಿದನು. ಈ ಮೂಲಕ ತೂಕದಲ್ಲಿ 6ನೇ ಸ್ಥಾನ ಪಡೆದಿದ್ದಾನೆ.

ದುಬಾರೆ ಆನೆ ಶಿಬಿರದ, ದಸರಾ ಆನೆಗಳಲ್ಲೇ ಎತ್ತರದ ಆನೆ 51 ವರ್ಷದ ‘ಪ್ರಶಾಂತ’ 4,875 ಕೆ.ಜಿ, ದೊಡ್ಡಹರವೆ ಶಿಬಿರದ 53 ವರ್ಷದ ಲಕ್ಷ್ಮಿ 3,485 ಕೆ.ಜಿ ಹಾಗೂ ರಾಮಪುರ ಶಿಬಿರದ 47 ವರ್ಷದ ಹಿರಣ್ಯ 2,930 ಕೆ.ಜಿ ತೂಗಿದವು.

ತೂಕ ಪರೀಕ್ಷೆಯಲ್ಲಿ ಡಿಸಿಎಫ್ ಐ.ಬಿ.ಪ್ರಭುಗೌಡ, ಪಶುವೈದ್ಯ ಮುಜೀಬ್‌, ಆರ್‌ಎಫ್‌ಒ ಸಂತೋಷ್ ಹೂಗಾರ್ ಹಾಜರಿದ್ದರು.

ಒಟ್ಟಿಗೆ ಬಂದ ಆನೆಗಳು: ಎರಡನೇ ತಂಡದ 5 ಆನೆಗಳು ತೂಕ ಪರೀಕ್ಷೆಗೆ ಬೆಳಿಗ್ಗೆ 7ಕ್ಕೆ ಗಜಪಡೆಯ ಮೊದಲ ತಂಡದ ‘ಅಭಿಮನ್ಯು’ ನೇತೃತ್ವದ 8 ಆನೆಗಳೊಂದಿಗೆ ಹೊರಟವು. ಅದರಿಂದ ಆಲ್ಪರ್ಟ್‌ ವಿಕ್ಟರ್‌ ರಸ್ತೆ, ಸಯ್ಯಾಜಿರಾವ್‌ ರಸ್ತೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

‘ಅಭಿಮನ್ಯು’ ಸಾರಥ್ಯದಲ್ಲಿ ‘ಲಕ್ಷ್ಮಿ’, ‘ಭೀಮ’, ‘ಏಕಲವ್ಯ’, ‘ರೋಹಿತ್‌’, ‘ಗೋಪಿ’, ‘ಧನಂಜಯ’, ‘ಸುಗ್ರೀವ’, ‘ಮಹೇಂದ್ರ’, ‘ಪ್ರಶಾಂತ’, ‘ದೊಡ್ಡಹರವೆ ಲಕ್ಷ್ಮಿ’ ಹಾಗೂ ‘ಹಿರಣ್ಯ’ ಆನೆಗಳು ಅರಮನೆಯ ಬಲರಾಮ ದ್ವಾರದಿಂದ ಹೊರಬಂದು ಚಾಮರಾಜ ವೃತ್ತ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿದವು. ಅಲ್ಲಿಯವರೆಗೂ 12 ಆನೆಗಳು ಸಾಲಾಗಿ ಹೆಜ್ಜೆ ಹಾಕಿದವು.

ತೂಕ ಪರೀಕ್ಷೆಗಾಗಿ ಎರಡನೇ ತಂಡದ 5 ಆನೆಗಳು ಧನ್ವಂತರಿ ರಸ್ತೆಯತ್ತ ತಿರುವು ಪಡೆದರೆ, ಉಳಿದ 7 ಆನೆಗಳು ಸರ್ಕಾರಿ ಆಯುರ್ವೇದ ಕಾಲೇಜು ವೃತ್ತದ ಮೂಲಕ ಹಳೇ ಆರ್‌ಎಂಸಿ ವೃತ್ತದವರೆಗೂ ಸಾಗಿದವು. ಬಳಿಕ ಕೆಲ ಸಮಯ ವಿಶ್ರಾಂತಿ ಪಡೆದು ಅರಮನೆಯತ್ತ ಹೆಜ್ಜೆ ಹಾಕಿದವು. ಅಷ್ಟರಲ್ಲಿ ತೂಕ ಪರೀಕ್ಷೆ ಮಾಡಿಸಿಕೊಂಡ ಎರಡನೇ ತಂಡದ ಆನೆಗಳು ಜೆ.ಕೆ. ಮೈದಾನ, ಇರ್ವಿನ್ ರಸ್ತೆ ಮೂಲಕ ಆಯುರ್ವೇದ ಕಾಲೇಜು ವೃತ್ತದ ಬಳಿ ಅವುಗಳನ್ನು ಸೇರಿಕೊಂಡವು.

ಆನೆಗಳ ಸಾಲು ಉದ್ದವಿದ್ದರಿಂದ ನಾಗರಿಕರು, ವಾಹನ ಸವಾರರು ಆನೆಗಳನ್ನು ಕಂಡು ಸಂಭ್ರಮಿಸಿದರು. ಕಾಲುನೋವಿನಿಂದ ಚೇತರಿಸಿಕೊಳ್ಳುತ್ತಿರುವ ‘ಕಂಜನ್‌’ ಹಾಗೂ ‘ವರಲಕ್ಷ್ಮಿ’ ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ.

4910 ಕೆ.ಜಿ ತೂಗಿದ ‘ಮಹೇಂದ್ರ’
4910 ಕೆ.ಜಿ ತೂಗಿದ ‘ಮಹೇಂದ್ರ’
4875 ಕೆ.ಜಿ ತೂಗಿದ ‘ಪ್ರಶಾಂತ’
4875 ಕೆ.ಜಿ ತೂಗಿದ ‘ಪ್ರಶಾಂತ’
2930 ಕೆ.ಜಿ ತೂಗಿದ ‘ಹಿರಣ್ಯ’
2930 ಕೆ.ಜಿ ತೂಗಿದ ‘ಹಿರಣ್ಯ’
3485 ಕೆ.ಜಿ ತೂಗಿದ ‘ದೊಡ್ಡಹರವೆ ಲಕ್ಷ್ಮಿ’
3485 ಕೆ.ಜಿ ತೂಗಿದ ‘ದೊಡ್ಡಹರವೆ ಲಕ್ಷ್ಮಿ’
ಎರಡನೇ ತಂಡದ 5 ಆನೆಗಳಿಗೂ ತೂಕ ಪರೀಕ್ಷೆ ಮಾಡಿಸಿದ್ದು ಆರೋಗ್ಯದಿಂದಿವೆ. ಎಲ್ಲ ಆನೆಗಳು ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿವೆ. ಆರೋಗ್ಯದ ಮೇಲೆ ನಿಗಾ ಇಡಲಾಗಿದೆ
-ಐ.ಬಿ.ಪ್ರಭುಗೌಡ ಡಿಸಿಎಫ್ (ವನ್ಯಜೀವಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT