ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್ಮೋಹನ ಅರಮನೆಯಲ್ಲಿ ನವರಾತ್ರಿಗೆ ಲಕ್ಷ ಬೊಂಬೆ ವಿಶೇಷ

ದಸರೆ ಅಂಗವಾಗಿ ವಿಶೇಷ ಬೊಂಬೆ ಪ್ರದರ್ಶನ
Last Updated 9 ಅಕ್ಟೋಬರ್ 2018, 9:34 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿ ಲಕ್ಷ ಬೊಂಬೆಗಳು ನವರಾತ್ರಿ ಆಚರಣೆಗಾಗಿ ಕಾದು ಕುಳಿತಿವೆ. ದೇಶದ ನಾನಾ ಭಾಗಗಳಿಂದ ಬಂದಿರುವ ಈ ಬೊಂಬೆಗಳು ತಮ್ಮ ಸಂಸ್ಕೃತಿಯನ್ನು ಸಾರಿ ಹೇಳಲಿವೆ. ದಸರೆ ಎಂದರೆ ಬೊಂಬೆ ಕೂರಿಸುವ ಪರಂಪರೆ ಬಹು ವಿಶೇಷವಾದುದು. ಅಂತಹ ವಿಶೇಷವನ್ನು ಕಣ್ತುಂಬಿಕೊಳ್ಳುವ ಅವಕಾಶ ಮೈಸೂರಿಗರದೂ ಆಗಿದೆ; ಪ್ರವಾಸಿಗರಿಗೂ ಸಿಗಲಿದೆ.

ಇಲ್ಲಿನ ಜಗನ್ಮೋಹನ ಅರಮನೆಯಲ್ಲಿ ಆಂಧ್ರಪ್ರದೇಶದ ಗಾಯತ್ರಿ ಸೇವಾ ಟ್ರಸ್ಟ್‌ ವತಿಯಿಂದ ಜಯಚಾಮರಾಜೇಂದ್ರ ಕಲಾ ಗ್ಯಾಲರಿ ಟ್ರಸ್ಟ್‌ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಪ್ರತಿಷ್ಠಾನದ ಸಹಯೋದಲ್ಲಿ ಈ ಬೊಂಬೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಗಾಯತ್ರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ.ಅರುಮಂಡ ರವಿ ಕಲ್ಯಾಣ ಚಕ್ರವರ್ತಿ ಅವರು ಈ ಪ್ರದರ್ಶನದ ರೂವಾರಿ. ಅವರ ಸಂಗ್ರಹದ ಅದ್ಭುತ ಬೊಂಬೆಗಳ ಲೋಕ ಇಲ್ಲಿ ತೆರೆದುಕೊಂಡಿದೆ.

ಎ.ಆರ್‌.ಕೆ.ಚಕ್ರವರ್ತಿ ಅವರು ದೇಶದಾದ್ಯಂತ ಸಂಚರಿಸಿ ಬೊಂಬೆಗಳನ್ನು ಸಂಗ್ರಹಿಸಿದ್ದಾರೆ. ಚರ್ಮ, ಮರ, ಗಾಜು, ಲೋಹ, ಬೊಂಬು, ಮಣ್ಣು, ಪಿಂಗಾಣಿ, ಕಲ್ಲು ಹಾಗೂ ಇತರ ಸಾಮಗ್ರಿಗಳಿಂದ ರಚಿಸಿರುವ ಸುಮಾರು 35ಕ್ಕೂ ಹೆಚ್ಚು ವಿಷಯ ಕ್ಷೇತ್ರಗಳನ್ನು ಆಧರಿಸಿದ ಬೊಂಬೆಗಳನ್ನು ಸಂಗ್ರಹಿಸಿದ್ದಾರೆ. ವಿನಾಯಕ, ಶಿವನಿಂದ ಆರಂಭವಾಗಿ, ರಾಮಾಯಣ, ಮಹಾಭಾರತ, ಗ್ರಾಮಾಂತರ ಜೀವನ, ಜಾನಪದ ಕಲೆ, ವೃತ್ತಿಯಾಧಾರಿತ ವ್ಯಕ್ತಿಗಳು ಇತ್ಯಾದಿ ವಿಷಯಗಳ ಮೇಲೆ ಬೊಂಬೆಗಳನ್ನು ಜೋಡಿಸಲಾಗಿದೆ.

‘ನಮ್ಮ ದೇಶದ ಕಲೆ, ಸಂಸ್ಕೃತಿಯನ್ನು ಬೊಂಬೆಗಳ ಮೂಲಕ ಪ್ರಚಾರ ಮಾಡುವುದು ನನ್ನ ಉದ್ದೇಶ. ಅದಕ್ಕಾಗಿ 2 ವರ್ಷಗಳಿಂದ ಬೊಂಬೆಗಳನ್ನು ಸಂಹ್ರಹಿಸುತ್ತಿರುವೆ. ಅಲ್ಲದೇ, ನಮ್ಮ ಟ್ರಸ್ಟಿನಲ್ಲಿ ವೃದ್ಧರು ಹಾಗೂ ನಿರ್ಗತಿಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಈ ಪ್ರದರ್ಶನದ ಮೂಲಕ ಸಂಗ್ರಹವಾಗುವ ಹಣವನ್ನು ಇವರ ಅನುಕೂಲಕ್ಕೆ ಬಳಸಲಾಗುವುದು’ ಎಂದು ಚರ್ಕವರ್ತಿ ಹೇಳಿದರು.

ಅ. 10ರಿಂದ ನ. 10ರವರೆಗೆ ಪ್ರದರ್ಶನ ಇರಲಿದೆ. ವಯಸ್ಕರಿಗೆ ₹ 25 ಮತ್ತು ಮಕ್ಕಳಿಗೆ ₹ 15 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT