ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ | ಹೋರಾಟ ಮುಂದುವರಿಸಿ: ಬಡಗಲಪುರ ನಾಗೇಂದ್ರ

Published 28 ಏಪ್ರಿಲ್ 2024, 4:57 IST
Last Updated 28 ಏಪ್ರಿಲ್ 2024, 4:57 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯ ಸರ್ಕಾರ ₹18 ಸಾವಿರ ಕೋಟಿ ಬರ ಪರಿಹಾರ ಕೇಳಿದ್ದರೂ ಕೇಂದ್ರವು ಸುಪ್ರೀಂ ಕೋರ್ಟ್ ಒತ್ತಡದ ಬಳಿಕ ಕೇವಲ ₹3,454 ಕೋಟಿ ಬಿಡುಗಡೆಗೊಳಿಸಿದೆ. ಇದು ಭಿಕ್ಷೆ ರೂಪದ ಪರಿಹಾರವಾಗಿದ್ದು, ರಾಜ್ಯವು ನ್ಯಾಯಾಲಯದಲ್ಲಿನ ಹೋರಾಟವನ್ನು ಮುಂದುವರಿಸಬೇಕು’ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರದ ಎನ್‌ಡಿಆರ್‌ಎಫ್ ಮಾನದಂಡದ ಅಡಿಯಲ್ಲಿ ಪರಿಹಾರ ಕೇಳಲಾಗಿತ್ತು. ಆದರೆ, ಅತಿ ಕಡಿಮೆ ಪ್ರಮಾಣದಲ್ಲಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆ ಮುಂದುವರೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತ ಸಂಘವು ಲೋಕಸಭೆ ಚುನಾವಣೆ ವೇಳೆ ಹಮ್ಮಿಕೊಂಡಿರುವ ‘ಬಿಜೆಪಿ ಮೈತ್ರಿ ಪಕ್ಷ ಸೋಲಿಸಿ, ರೈತರನ್ನು ಉಳಿಸಿ’ ಅಭಿಯಾನದಿಂದಾಗಿ ಮೊದಲನೇ ಹಂತದ ಚುನಾವಣೆ ವೇಳೆ ಸುಮಾರು ಶೇ 4ರಷ್ಟು ರೈತರ ಮತಗಳು ಮೈತ್ರಿ ಪಕ್ಷದ ವಿರುದ್ಧ ಚಲಾವಣೆ ಆಗಿರುವ ಸಾಧ್ಯತೆ ಇದೆ. ಉತ್ತರ ಕರ್ನಾಟಕ ಭಾಗದ ಎರಡನೇ ಹಂತದ ಚುನಾವಣೆಗೆ ಏ.28ರಿಂದ ಅಭಿಯಾನ ಮುಂದುವರಿಯಲಿದೆ. ರಾಯಚೂರಿನಿಂದ ‌ಆರಂಭವಾಗಲಿದ್ದು, ಮೂರು ತಂಡವಾಗಿ ಸಂಚರಿಸಿ ಪ್ರಚಾರ ಮಾಡುತ್ತೇವೆ. ಈ ಬಾರಿ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವರು ತಮ್ಮ ಸ್ಥಾನ ಕಳೆದುಕೊಳ್ಳುವರು’ ಎಂದು ಭವಿಷ್ಯ ನುಡಿದರು.

‘ಬರಗಾಲದಿಂದಾಗಿ ಪಂಪ್‌ಸೆಟ್ ಆಧರಿಸಿ ಕೃಷಿ ಮಾಡುತ್ತಿರುವವರಿಗೆ ಸಮರ್ಪಕ ವಿದ್ಯುತ್ ಸರಬರಾಜಾಗುತ್ತಿಲ್ಲ. ಈ ನಡುವೆ ₹28 ಸಾವಿರ ಇದ್ದ ವಿದ್ಯುತ್ ಸಂಪರ್ಕ ಶುಲ್ಕ ₹2.5 ಲಕ್ಷಕ್ಕೆ ಏರಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಪದಾಧಿಕಾರಿ ಗಳಾದ ಹೊಸೂರು ಕುಮಾರ್, ಪಿ.ಮರಂಕಯ್ಯ, ಕಲ್ಲಹಳ್ಳಿ ಜಯಣ್ಣ, ಹೊಸಕೋಟೆ ಬಸವರಾಜ, ನೇತ್ರಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT