ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತಗಟ್ಟೆ: ಸೌಕರ್ಯದೊಂದಿಗೆ ಆಕರ್ಷಿಸುವಂತಿರಲಿ

ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ
Published 7 ಮಾರ್ಚ್ 2024, 5:46 IST
Last Updated 7 ಮಾರ್ಚ್ 2024, 5:46 IST
ಅಕ್ಷರ ಗಾತ್ರ

ಮೈಸೂರು: ‘ಮತಗಟ್ಟೆಗಳನ್ನು ಮೂಲಸೌಕರ್ಯಗಳ ಜೊತೆಗೆ ಮತದಾರರನ್ನು ಆಕರ್ಷಿಸುವಂತೆ ರೂಪಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದರು.

ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳಿಗೆ ಬುಧವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ಮತಗಟ್ಟೆಗಳು ಕಂಗೊಳಿಸುವಂತಿರಬೇಕು. ಇದರಿಂದ ಜನರಲ್ಲಿ ಹಕ್ಕು ಚಲಾಯಿಸುವ ಆಸಕ್ತಿ ಹೆಚ್ಚಾಗಿ ಈ ಮೂಲಕವೂ ಮತದಾನ ಪ್ರಮಾಣ ಜಾಸ್ತಿಯಾಗಲು ಸಾಧ್ಯವಾಗಲಿದೆ. ಇದಕ್ಕಾಗಿ ಮತಗಟ್ಟೆಗಳನ್ನು ಸುಣ್ಣ– ಬಣ್ಣ, ರಂಗೋಲಿ ಮೊದಲಾದವುಗಳಿಂದ ಸಿಂಗರಿಸಬೇಕು’ ಎಂದರು.

ಚುನಾವಣೆ ಘೋಷಣೆಯಾದ 24 ಗಂಟೆಯೊಳಗೆ ಸರ್ಕಾರದ ಜಾಹೀರಾತು, 48 ಗಂಟೆಯೊಳಗೆ ಸರ್ಕಾರಿ ಸಾಮ್ಯದ ನಿಗಮ– ಮಂಡಳಿಗಳು ಹಾಗೂ 72 ಗಂಟೆಯೊಳಗೆ ಖಾಸಗಿ ವಲಯದ ನೀತಿ ಸಂಹಿತೆಗೆ ವಿರುದ್ಧವಾದ ಜಾಹೀರಾತುಗಳನ್ನು ತೆಗೆಯಬೇಕಾಗುತ್ತದೆ. ಹೊಸ ಕಾಮಗಾರಿಗಳನ್ನು ಆರಂಭಿಸುವಂತಿಲ್ಲ, ಹೊಸ ಮಂಜೂರಾತಿ ನೀಡುವಂತಿಲ್ಲ. ಈಗಾಗಲೇ ಆರಂಭ ಆಗಿರುವುದಕ್ಕೆ ಈ ನಿಯಮ ಅನ್ವಯಿಸುವುದಿಲ್ಲ. ಪ್ರಚಾರ ಹಾಗೂ ಸಾಮಗ್ರಿಗಳ ಬಳಕೆಗೆ ಅನುಮತಿ‌ ನೀಡುವಾಗ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡಬಾರದು’ ಎಂದು ತಿಳಿಸಿದರು.

‘ಪ್ರಚಾರ ಕಾರ್ಯಕ್ಕೆ ಅಭ್ಯರ್ಥಿಗೆ ₹ 95 ಲಕ್ಷ ವೆಚ್ಚ ಮಾಡಲು ಅನುಮತಿ ಇದೆ. ಅವರ ಪರವಾಗಿ ಮಾಡುವ ವೆಚ್ಚವನ್ನೂ ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುತ್ತದೆ. ಪರವಾಗಿ ಮಾಡಿದ ವೆಚ್ಚಕ್ಕೆ ಅಭ್ಯರ್ಥಿಯ ಅನುಮತಿ ಇರಬೇಕು. ಇಲ್ಲದಿದ್ದಲ್ಲಿ ಪ್ರಚಾರ ಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ಎಸ್ಪಿ ಸೀಮಾ ಲಾಟ್ಕರ್ ಮಾತನಾಡಿ, ‘ಚುನಾವಣೆ ಘೋಷಣೆಯಾದ ತಕ್ಷಣ ಎಲ್ಲರೂ ಆಯೋಗದ ವ್ಯಾಪ್ತಿಗೆ ಬರುತ್ತೇವೆ. ನಮ್ಮ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಯಾವುದೇ ಅನುಮತಿಗಳನ್ನು ನೀಡುವಾಗ ನಿಬಂಧನೆಗಳನ್ನು ಕರಾರುವಕ್ಕಾಗಿ ವಿಧಿಸಿ, ದಿನಾಂಕ, ವೇಳೆಯನ್ನು ಸರಿಯಾಗಿ ನಮೂದಿಸಬೇಕು. ನೀತಿಸಂಹಿತೆ ಜಾರಿ ಆದಾಗಿನಿಂದ ₹ 50ಸಾವಿರಕ್ಕಿಂತ ಹೆಚ್ಚು ನಗದು ಹಾಗೂ ₹ 10ಸಾವಿರಕ್ಕಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ಒಯ್ಯವಂತಿಲ್ಲ’ ಎಂದು ತಿಳಿಸಿದರು.

ಜಿ.ಪಂ ಸಿಇಒ ಕೆ.ಎಂ.ಗಾಯಿತ್ರಿ, ಉಪ ಕಾರ್ಯದರ್ಶಿ ಕೃಷ್ಣರಾಜು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಪಿಡಿಒಗಳು ಪಾಲ್ಗೊಂಡಿದ್ದರು.

‘ತಾಲ್ಲೂಕಿನ 3 ಮತಗಟ್ಟೆಗಳಿಗೆ ಪ್ರಶಸ್ತಿ’

‘ಜಿಲ್ಲೆಯಲ್ಲಿ 2915 ಮತಗಟ್ಟೆಗಳಿವೆ. ಅವುಗಳಲ್ಲಿ ಸಕಲ ಸೌಲಭ್ಯಗಳೊಂದಿಗೆ ಸುಂದರವಾಗಿ ಕಾಣುವ ಪ್ರತಿ ತಾಲ್ಲೂಕಿನ 3 ಮತಗಟ್ಟೆಗಳಿಗೆ ಪ್ರಶಸ್ತಿಪತ್ರ ಹಾಗೂ ಬಹುಮಾನ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಘೋಷಿಸಿದರು. ‘ಈಗಾಗಲೇ ಗುರುತಿಸಿರುವ ಮತಗಟ್ಟೆಗಳಲ್ಲಿ ಸಣ್ಣ ಪ್ರಮಾಣದ ದುರಸ್ತಿ ಅಗತ್ಯವಿದ್ದರೆ ತಕ್ಷಣ ಮಾಡಿಸಬೇಕು. ನೀತಿಸಂಹಿತೆಗೂ ಮುನ್ನ ಮತಗಟ್ಟೆಗಳು ಶೇ.100ರಷ್ಟು ಸಿದ್ಧವಿರಬೇಕು. ಯಾವುದಾದರೂ ಮತಗಟ್ಟೆಯಲ್ಲಿ ತೊಂದರೆ ಕಂಡುಬಂದರೆ ಸಂಕಷ್ಟಕ್ಕೆ ಸಿಲುಕುತ್ತೀರಿ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT