ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ‘ಕೈ’ನಿಂದ ಮರಿತಿಬ್ಬೇಗೌಡ ಕಣಕ್ಕೆ

ದಕ್ಷಿಣ ಶಿಕ್ಷಕರ ಕ್ಷೇತ್ರ: ಸತತ 4 ಬಾರಿ ಆಯ್ಕೆಯಾಗಿರುವ ಅನುಭವಿ
Published 13 ಮೇ 2024, 5:07 IST
Last Updated 13 ಮೇ 2024, 5:07 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಸತತ 4 ಬಾರಿ ಆಯ್ಕೆಯಾಗಿರುವ ಮರಿತಿಬ್ಬೇಗೌಡ ಅವರು ಮತ್ತೊಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಸಜ್ಜಾಗಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾದರೂ ಅಥವಾ ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಯಾದರೂ ಗೆಲುವನ್ನೇ ಕಂಡಿರುವ ಅವರು 5ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಅವರಿಗೆ ಭಾನುವಾರ ಅಧಿಕೃತವಾಗಿ ಆ ಪಕ್ಷದ ಹೈಕಮಾಂಡ್‌ ಟಿಕೆಟ್‌ ಘೋಷಿಸಿದೆ. ಜೂನ್‌ 3ರಂದು ಚುನಾವಣೆ ನಡೆಯಲಿದ್ದು, ಅವರು ಮೇ 14ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯ ಲೀಲಾ ಚೆನ್ನಯ್ಯ ಕಲ್ಯಾಣಮಂಟಪದಲ್ಲಿ ಪ್ರಚಾರ ಸಭೆಯನ್ನೂ ಆಯೋಜಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ಇದರೊಂದಿಗೆ, ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್‌ ಸಜ್ಜಾಗಿದೆ.

ಕ್ಷೇತ್ರದಲ್ಲಿ ಸತತ 24 ವರ್ಷಗಳಿಂದ ಏಕವ್ಯಕ್ತಿಯದ್ದೇ (ಮರಿತಿಬ್ಬೇಗೌಡ)ರದ್ದೇ ಹಿಡಿತ ಕಂಡುಬಂದಿದೆ. ಅವರು ಶಿಕ್ಷಕ ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾ ಬಂದಿದ್ದಾರೆ.

ಈಚೆಗೆ ಕಾಂಗ್ರೆಸ್ ಸೇರ್ಪಡೆ: ಅವರು ಮಾರ್ಚ್‌ 21ರಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಮಾರ್ಚ್‌ 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಸೇರಿದ್ದರು.

ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು 4 ಬಾರಿ ಪ್ರತಿನಿಧಿಸಿರುವ ಅವರು ಈ ಭಾಗದ ಪ್ರಭಾವಿ ಮುಖಂಡರು. ಒಕ್ಕಲಿಗ ಸಮಾಜದ‌‌‌‌ ಅವರು, ಮೊದಲ ಬಾರಿ ಕಾಂಗ್ರೆಸ್‌ನಿಂದ (2000), ಒಮ್ಮೆ ಪಕ್ಷೇತರರಾಗಿ (2006) ಹಾಗೂ 2 ಬಾರಿ (2012 ಹಾಗೂ 2018) ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಮೊದಲಿಗೆ ಆಯ್ಕೆಯಾಗಿದ್ದ ಕಾಂಗ್ರೆಸ್‌ನಿಂದಲೇ ಈಗ ಐದನೇ ಬಾರಿಗೆ ಕಣಕ್ಕಿಳಿಯುತ್ತಿದ್ದಾರೆ.

ಜೆಡಿಎಸ್‌ನಿಂದ ಸತತ 2 ಬಾರಿ ಆಯ್ಕೆಯಾಗಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. 2022ರಲ್ಲಿ ನಡೆದ ಪದವೀಧರ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆಯಲ್ಲಿ ಹಾಗೂ ಹೋದ ವರ್ಷ (2023) ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. ಆ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲೂ ತೊಡಗಿಕೊಂಡಿದ್ದರು.

ಕಳೆದ ಚುನಾವಣೆಯಲ್ಲಿ: ವಿಧಾನಪರಿಷತ್‌ನ ಉಪಸಭಾಪತಿಯೂ ಆಗಿದ್ದ ಅವರ ಗೆಲುವಿಗೆ ಬ್ರೇಕ್‌ ಹಾಕಲು, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ.ಲಕ್ಷ್ಮಣ ಹಾಗೂ ಬಿಜೆಪಿಯ ಬಿ.ನಿರಂಜನಮೂರ್ತಿ ತಂತ್ರಗಾರಿಕೆ ರೂಪಿಸಿದ್ದರು. ಆದರೆ, ಆಗ 18 ವರ್ಷಗಳಿಂದ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದ ಮರಿತಿಬ್ಬೇಗೌಡರು ಮತದಾರರ ಮನಸ್ಸು ಗೆಲ್ಲುವಲ್ಲಿ ಮತ್ತೊಮ್ಮೆ ಸಫಲರಾಗಿದ್ದರು. ಈ ಬಾರಿ, ಮತ್ತೊಮ್ಮೆ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾದ ಈ.ಸಿ. ನಿಂಗರಾಜ್ ಗೌಡ ಅವರ ಪ್ರತಿಸ್ಪರ್ಧಿ.

ಮಳವಳ್ಳಿ ತಾಲ್ಲೂಕಿನ ಅಂಚೆದೊಡ್ಡಿ ಗ್ರಾಮದ ಮರಿತಿಬ್ಬೇಗೌಡ, ಎರಡು ಬಾರಿ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರೂ ಆಗಿದ್ದವರು.

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ಈ ಕ್ಷೇತ್ರವು 29 ವಿಧಾನಸಭಾ ಕ್ಷೇತ್ರಗಳು, ನಾಲ್ಕು ಲೋಕಸಭಾ ಕ್ಷೇತ್ರಗಳು, 26 ತಾಲ್ಲೂಕುಗಳು ಹಾಗೂ 2,365 ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿದೆ.‌

20 ವರ್ಷ ವಿರೋಧ ಪಕ್ಷದಲ್ಲೇ ಕೆಲಸ ಮಾಡಿದ್ದೆ. ಶಿಕ್ಷಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಈ ಬಾರಿ ಆಡಳಿತ ಪಕ್ಷದಿಂದ ಅಭ್ಯರ್ಥಿ ಆಗಿರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಸಹಾಯವಾಗಲಿದೆ

–ಮರಿತಿಬ್ಬೇಗೌಡ ಕಾಂಗ್ರೆಸ್‌ ಅಭ್ಯರ್ಥಿ

‘ಶಿಕ್ಷಕರನ್ನು ಎಂದಿಗೂ ಬಿಟ್ಟುಕೊಡಲಾರೆ’

ಮೈಸೂರು: ‘ಅವಕಾಶ ನೀಡಿದ ವರಿಷ್ಠರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪ್ರಚಾರಕ್ಕೆ ಸಮಯ ಕಡಿಮೆ ಇದೆ. ನಾಲ್ಕು ಜಿಲ್ಲೆಗಳಲ್ಲೂ ಪಕ್ಷದ ಶಾಸಕರು ಮುಖಂಡರು ಹಾಗೂ ಕಾರ್ಯಕರ್ತರನ್ನು ಬಳಸಿಕೊಂಡು ಶಿಕ್ಷಕರನ್ನು ಭೇಟಿಯಾಗುವ ಪ್ರಯತ್ನ ಮಾಡಲಿದ್ದೇನೆ’ ಎಂದು ಮರಿತಿಬ್ಬೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘24 ವರ್ಷಗಳಿಂದ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ವೈಯಕ್ತಿಕವಾಗಿ ಬಹಳಷ್ಟು ಮಂದಿಯೊಂದಿಗೆ ಸ್ನೇಹ– ವಿಶ್ವಾಸವಿದೆ. ಕ್ಷೇತ್ರದ ಪಾವಿತ್ರ್ಯ ಉಳಿಸುವ ಕೆಲಸ ಮಾಡಿದ್ದೇನೆ. ಮೂರು ವರ್ಷಗಳವರೆಗೆ ಉಪ ಸಭಾಪತಿಯಾಗಿ ಸದನದ ಘನತೆಯನ್ನು ಎತ್ತಿ ಹಿಡಿದಿದ್ದೇನೆ. ಶಿಕ್ಷಕರನ್ನು ಎಂದಿಗೂ ಬಿಟ್ಟು ಕೊಟ್ಟಿಲ್ಲ. ವಿಷಯಾಧಾರಿತವಾಗಿ ಶಾಸನಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಇದೆಲ್ಲವೂ ನನಗೆ ನೆರವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT