ಮೈಸೂರು: ಇಲ್ಲಿನ ಕೂರ್ಗಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಅಳಿವಿನಂಚಿನ ‘ಸಿಂಗಳೀಕ’ (ಸಿಂಹಬಾಲದ ಕೋತಿ) ಮರಿ ಹುಟ್ಟಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೃಗಾಲಯದಲ್ಲಿ ಸಿಂಗಳೀಕಗಳ ಸಂತಾನೋತ್ಪತ್ತಿ ಯಶಸ್ವಿಯಾಗಿದೆ.
ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ‘ತಳಿ ಅಭಿವೃದ್ಧಿ ಯೋಜನೆ’ಯಡಿ 2015ರಿಂದ ಅವುಗಳ ತಳಿ ಸಂರಕ್ಷಣೆ, ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆದಿತ್ತು. ಎರಡು ತಿಂಗಳ ಹಿಂದೆ ಮರಿ ಹುಟ್ಟಿದ್ದು, ಸಂಖ್ಯೆ ಮೂರಕ್ಕೇರಿದೆ.
ಜೀವವೈವಿಧ್ಯದ ಸಮತೋಲನ ಕಾಯ್ದುಕೊಳ್ಳಲು ಅಳಿವಿನಂಚಿನ ಪ್ರಾಣಿಗಳ ಸಂರಕ್ಷಣೆಗಾಗಿ ಮೃಗಾಲಯ ಗಳಲ್ಲಿ ತಳಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ಕಾಡಿಗೆ ಬಿಡುವ ಯೋಜನೆ ಇದು.
‘ತಳಿ ಅಭಿವೃದ್ಧಿ ಕೇಂದ್ರಗಳು ಮೈಸೂರು, ಚೆನ್ನೈ ಸೇರಿದಂತೆ ದೇಶದ ವಿವಿಧೆಡೆಯಿದ್ದು, ಕೇಂದ್ರೀಯ ಮೃಗಾಲಯ ಪ್ರಾಧಿಕಾರವೇ ಯಾವ ತಳಿ ಅಭಿವೃದ್ಧಿ ಪಡಿಸಬೇಕೆಂದು ಮೃಗಾಲಯಗಳಿಗೆ ನಿರ್ದೇಶನ ನೀಡುತ್ತದೆ. ಅದರಂತೆ ಮೈಸೂರು ಮೃಗಾಲಯಕ್ಕೆ ಸಿಂಗಳೀಕ ತಳಿ ಅಭಿವೃದ್ಧಿ ಜವಾಬ್ದಾರಿ ನೀಡಿತ್ತು’ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್ ಕುಮಾರ್ ‘ಪ್ರಜಾವಾಣಿ’ಗೆ ಜೊತೆ ಸಂತಸ ಹಂಚಿ
ಕೊಂಡರು.
‘ಯಾವ ಅರಣ್ಯದಲ್ಲಿ ತಳಿಗಳ ಸಂಖ್ಯೆ ಕಡಿಮೆ ಆಗಿರುತ್ತದೆಯೋ ಅಲ್ಲಿಗೆ ಅವುಗಳನ್ನು ಮರು ಪರಿಚಯಿಸುವುದೇ ತಳಿ ಅಭಿವೃದ್ಧಿ ಯೋಜನೆಯ ಮುಖ್ಯ ಗುರಿ. ದೇಶದಲ್ಲಿ ಸುಮಾರು 2 ಸಾವಿರ ಸಿಂಗಳೀಕಗಳಿವೆ. ಹೀಗಾಗಿ, ಹುಲಿಗಳ ಸಂರಕ್ಷಣೆಯಷ್ಟೇ ಮಹತ್ವದ ಕಾರ್ಯ ಇದು’ ಎಂದರು.
‘ಸಿಂಗಳೀಕವಲ್ಲದೇ ತೋಳ, ಕಾಡೆಮ್ಮೆ, ಸೀಳು ನಾಯಿಗಳ ತಳಿಗಳ ಅಭಿವೃದ್ಧಿ ಕಾರ್ಯವೂ 9 ವರ್ಷ ಗಳಿಂದ ನಡೆಯುತ್ತಿದೆ. ನೀಲಗಿರಿ ಲಂಗೂರ್, ಮಲಬಾರ್ ಅಳಿಲು, ಬೂದು ಕಾಡುಕೋಳಿ ಪ್ರಭೇದಗಳು ಯೋಜನೆಯ ವ್ಯಾಪ್ತಿಯಲ್ಲಿವೆ’ ಎಂದು ತಿಳಿಸಿದರು.
ಕೆಂಪುಪಟ್ಟಿಯಲ್ಲಿ ಸ್ಥಾನ ಸಿಂಗಳೀಕ ವಿನಾಶದಂಚಿನಲ್ಲಿದ್ದು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಐಯುಸಿಎನ್) ಅದನ್ನು ಕೆಂಪು ಪಟ್ಟಿಯಲ್ಲಿ ಸೇರಿಸಿದೆ. ಈ ಪ್ರಭೇದವು ಜಗತ್ತಿನಲ್ಲಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುತ್ತದೆ. ಕನ್ಯಾಕುಮಾರಿ ಅಗಸ್ತ್ಯ ಮಲೈನಿಂದ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶರಾವತಿ ಅಘನಾಶಿನಿ ನದಿ ಕಣಿವೆವರೆಗೆ ಇವುಗಳ ಆವಾಸಸ್ಥಾನವಿದೆ. ರಾಜ್ಯದ ಶರಾವತಿ ವನ್ಯಜೀವಿ ಅಭಯಾರಣ್ಯ ಸೇರಿದಂತೆ ಶಿರಸಿ ಹೊನ್ನಾವರ ಭಾಗದಲ್ಲಿ ಅರಣ್ಯ ನಾಶ ಒತ್ತುವರಿ ಮರಗಳ ಕಳ್ಳಸಾಗಣೆ ಜಲವಿದ್ಯುತ್ ಯೋಜನೆಗಳಿಂದ ಆವಾಸಸ್ಥಾನ ಕಿರಿದಾಗುತ್ತಿದೆ. ಹೀಗಾಗಿ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.