ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಭ್ರೂಣ ಲಿಂಗ ಪತ್ತೆ ಪ್ರಕರಣ: 17 ಮಂದಿ ವಿರುದ್ಧ ಎಫ್‌ಐಆರ್‌

Published 29 ಏಪ್ರಿಲ್ 2024, 4:21 IST
Last Updated 29 ಏಪ್ರಿಲ್ 2024, 4:21 IST
ಅಕ್ಷರ ಗಾತ್ರ

ಮೈಸೂರು: ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಉದಯಗಿರಿ ಪೊಲೀಸ್‌ ಠಾಣೆಯಲ್ಲಿ 17 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ನೀಡಿದ ದೂರು ಆಧರಿಸಿ ಮಾತಾ ಆಸ್ಪತ್ರೆ, ಆಯುರ್ವೇದಿಕ್‌ ಪೈಲ್ಸ್‌ ಡೇ ಕೇರ್‌ ಕೇಂದ್ರ ಹಾಗೂ ಚಾಮುಂಡೇಶ್ವರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯೂ ಈ ಆರೋಪಿಗಳ ಪಟ್ಟಿಯಲ್ಲಿದ್ದಾರೆ.

ಪ್ರಮುಖ ಆರೋಪಿಗಳಾದ ಶಿವನಂಜೇಗೌಡ, ನಯನ್‌ ಕುಮಾರ್, ಸುನಂದಾ ಎಂಬುವರು ಲ್ಯಾಬ್‌ಗಳಿಗೆ ಪರೀಕ್ಷೆಗೆಂದು ಬರುತ್ತಿದ್ದ ಗರ್ಭಿಣಿಯರನ್ನು ಸಂಪರ್ಕಿಸಿ ಮಧ್ಯವರ್ತಿಗಳಾದ ಡಾ.ತುಳಸೀರಾಮ್, ಸಿದ್ದೇಶ್‌, ಪುಟ್ಟರಾಜು, ಎ.ಎಲ್‌.ಸತ್ಯ, ಅಭಿಷೇಕ್‌ ಗೌಡ, ಧನಂಜಯಗೌಡ ಎಂಬುವರ ಮೂಲಕ ಮಂಡ್ಯ ತಾಲ್ಲೂಕಿನ ಹಾಡ್ಯ ಗ್ರಾಮದ ಆಲೆಮನೆಯೊಂದರಲ್ಲಿ ಸ್ಕ್ಯಾನಿಂಗ್ ಯಂತ್ರ ಬಳಸಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದರು.

ಬಳಿಕ ಮೈಸೂರಿನ ಈ ಮೂರು ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರ ಗರ್ಭಪಾತ ಮಾಡಿಸಿ ಭ್ರೂಣಗಳನ್ನು ವಿಲೇವಾರಿ ಮಾಡುತ್ತಿದ್ದರು ಎಂದು ದೂರಲಾಗಿದೆ.

ವೈದ್ಯ ಚಂದನ್ ಬಲ್ಲಾಳ್, ಸಿಬ್ಬಂದಿ ಮೀನಾ, ರಿಜ್ಮಾ ಖಾನಂ, ನಿಸಾರ್‌ ಅಹಮದ್‌, ಮಂಜುಳಾ, ಉಷಾರಾಣಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. 

ಗರ್ಭಪಾತ ಮಾಡಿಸಿಕೊಂಡ ಮಹಿಳೆಯರ ಸಂಬಂಧಿಗಳು ನೀಡುತ್ತಿದ್ದ ಕಮಿಷನ್‌ ಅನ್ನು ನೇರವಾಗಿ ಮಧ್ಯವರ್ತಿಗಳ ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

‘ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಾಖಲಾಗಿರುವ ಪ್ರಕರಣವು ಠಾಣೆಗೆ ವರ್ಗಾವಣೆಯಾಗಿದೆ. ಕುಟುಂಬ ಕಲ್ಯಾಣಾಧಿಕಾರಿ ನೀಡಿದ ದೂರು ಆಧರಿಸಿ ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಉದಯಗಿರಿ ಪೊಲೀಸರು ತಿಳಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆದೇಶಿಸಲಾಗಿತ್ತು. ಇದೀಗ ಆ ವರದಿ ಬಂದಿದ್ದು ಅದರ ಆಧಾರದ ಮೇಲೆ ಆರೋಗ್ಯ ಇಲಾಖೆ ಕೇಂದ್ರ ಕಚೇರಿಯಿಂದ ನೀಡಿದ ನಿರ್ದೇಶನದಂತೆ 17 ಮಂದಿ ವಿರುದ್ಧ ಎಫ್‌ಐಆರ್ ಮಾಡಿಸಿದ್ದೇವೆ’ ಎಂದು ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT