ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಜಪ್ತಿಯಾದ ₹42 ಕೋಟಿ ಹಣದ ಮೂಲ ಬಹಿರಂಗಪಡಿಸಲು ಒತ್ತಾಯ

Published 14 ಅಕ್ಟೋಬರ್ 2023, 7:51 IST
Last Updated 14 ಅಕ್ಟೋಬರ್ 2023, 7:51 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯದ ಎರಡು ಗುತ್ತಿಗೆ ಕಂಪನಿಗಳು ಹಾಗೂ ಗುತ್ತಿಗೆದಾರರಿಗೆ ಸಂಬಂಧಪಟ್ಟ 45ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿ, ಜಪ್ತಿ ಮಾಡಿರುವ ₹42 ಕೋಟಿ ನಗದು ಯಾರಿಗೆ ಸೇರಿದ್ದು ಹಾಗೂ ಅದರ ಮೂಲವೇನು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಒತ್ತಾಯಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನನಗಿರುವ ಮಾಹಿತಿಯ ಪ್ರಕಾರ, ಆ ಹಣವು ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ್ದಾಗಿದೆ. ಹಿಂದಿನ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದವರು ಅವರು. ಆ ಹಣವನ್ನು ಎಲ್ಲಿಗೆ ಸಾಗಿಸುತ್ತಿದ್ದರು? ಅಲ್ಲಿಗೆ ಬಂದಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಜನರಿಗೆ ಹಕ್ಕಿದೆ. ತಿಳಿಸುವ ಕೆಲಸವನ್ನು ಐಟಿ ಮಾಡಬೇಕು’ ಎಂದು ಆಗ್ರಹಿಸಿದರು.

‘ಜಪ್ತಿಯಾದ ಹಣ ಅಕ್ರಮದ್ದಾ ಅಥವಾ ಸಕ್ರಮವಾದುದಾ, ಯಾರದ್ದು ಎಂಬುದನ್ನು ಐಟಿ ಬಹಿರಂಗಪಡಿಸಿಲ್ಲ. ಹೀಗಿದ್ದರೂ ಬಿಜೆಪಿ ಹಾಗೂ ಜೆಡಿಎಸ್‌ನವರು ಹಿಟ್ ಅಂಡ್ ರನ್ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮುಖಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಎಲ್ಲಿ ನಮ್ಮ ಹೆಸರು ಬಯಲಾಗುತ್ತದೆಯೋ ಎಂಬ ಭಯದಿಂದಾಗಿ ಬಿಜೆಪಿಯವರು, ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ನನಗಿರುವ ಮಾಹಿತಿ ಪ್ರಕಾರ, ಶುಕ್ರವಾರ ನಡೆಸಿದ ದಾಳಿಯಲ್ಲಿ ₹ 200 ಕೋಟಿಗೂ ಜಾಸ್ತಿ ಜಪ್ತಿ ಮಾಡಲಾಗಿದೆ. ಅದು ಯಾವ ಪಕ್ಷದವರಿಗೆ ಸೇರಿದ್ದು ಎಂಬುದು ಬಹಳ ಮಹತ್ವದ್ದಾಗುತ್ತದೆ. ಹೀಗಾಗಿ, ಅದನ್ನು ತಿಳಿಸಬೇಕಾಗುತ್ತದೆ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದೇಶದ ವಿವಿಧೆಡೆ 4 ಸಾವಿರ ದಾಳಿ ನಡೆಸಿದೆ. ಅದರಲ್ಲಿ 3,256 ದಾಳಿಗಳು ವಿರೋಧ ಪಕ್ಷಗಳ ಮೇಲೆಯೇ ಆಗಿದೆ. 37 ಮಾತ್ರ ಬಿಜೆಪಿಯವರ ಮೇಲೆ ಆಗಿರುವಂಥದ್ದು. ಐಟಿಯು 2,700 ದಾಳಿ ನಡೆಸಿದ್ದು, ಅದರಲ್ಲಿ ಶೇ 90ರಷ್ಟು ವಿರೋಧ ‌ಪಕ್ಷದವರ ಮೇಲಿನವೇ ಆಗಿವೆ. ಈ ಸರ್ಕಾರವು ಐಟಿ, ಇಡಿ ಹಾಗೂ ಸಿಬಿಐ ಮೂಲಕ ವಿರೋಧ ಪಕ್ಷದವರನ್ನು ಬೆದರಿಸುವ ಕೆಲಸವನ್ನು ಮಾಡುತ್ತಿದೆ. ಅದಕ್ಕಾಗಿಯೇ ಅವುಗಳನ್ನು ಬಳಸಿಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಾಗತಿಕ ಹಸಿವು ಸೂಚ್ಯಂಕ ವಿವರವನ್ನು ಬಿಡುಗಡೆ ಮಾಡಲಾಗಿದ್ದು, ಭಾರತವು 111ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವ ಗುರು ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ದೇಶಕ್ಕೆ ಈ ಪರಿಸ್ಥಿತಿ ಬಂದಿದೆ. ಬಿಜೆಪಿಯವರು ಈ ಬಗ್ಗೆ ಮಾತನಾಡುತ್ತಿಲ್ಲವೇಕೆ?’ ಎಂದು ಕೇಳಿದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್‌. ಮೂರ್ತಿ, ಪದಾಧಿಕಾರಿಗಳಾದ ಶಿವಣ್ಣ, ಗಿರೀಶ್, ಮಹೇಶ್ ಹಾಗೂ ಮುಖಂಡ ಬಿ.ಎಂ. ರಾಮು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT