ಮೈಸೂರು: ‘ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪಷ್ಪಾ ಅಮರನಾಥ್, ‘ರಾಜ್ಯ ಸರ್ಕಾರ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಅದೇ ರೀತಿ ಅಂಗನವಾಡಿ ಕೇಂದ್ರಗಳಿಗೂ ಒದಗಿಸಬೇಕು’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ‘ಇಡೀ ರಾಜ್ಯದಲ್ಲಿ ಎಷ್ಟು ಅಂಗನವಾಡಿಗಳಿವೆ, ವಿದ್ಯುತ್‌ಗೆಂದು ಎಷ್ಟು ವೆಚ್ಚ ತಗುಲುತ್ತಿದೆ ಎನ್ನುವ ಬಗ್ಗೆ ವರದಿಯನ್ನು ಸಲ್ಲಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪದಾರ್ಥ ತಲುಪುತ್ತಿದೆಯೇ, ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡಲಾಗುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆಡಿಪಿ ಸಭೆಯು ಸಂಜೆ 5.30ರ ನಂತರವೂ ಮುಂದುವರಿದಿದೆ. ಈ ವೇಳೆ ಮೆಣಸಿನಕಾಯಿ ಬಜ್ಜಿಯನ್ನು ಸಂಜೆಯ ಉಪಾಹಾರವಾಗಿ ಕೊಡಲಾಯಿತು. ಅದನ್ನು ನೀಡಲು ಬಂದವರಿಗೆ, ‘ಈರುಳ್ಳಿ ಬಜ್ಜಿ ಇಲ್ವಾ? ಇದ್ದರೆ ಕೊಡು’ ಎಂದು ಮುಖ್ಯಮಂತ್ರಿ ಕೇಳಿದರು. ಇಲ್ಲವೆಂದು ಗೊತ್ತಾದ್ದರಿಂದ ಮೆಣಸಿನಕಾಯಿ ಬಜ್ಜಿಯನ್ನೇ ತಿಂದರು.