ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಫ್ರೂಟ್ಸ್‌ ನೋಂದಣಿ: ಶೇ 23 ಬಾಕಿ

ರಾಘವೇಂದ್ರ ಎಂ.ವಿ.
Published 15 ಫೆಬ್ರುವರಿ 2024, 6:31 IST
Last Updated 15 ಫೆಬ್ರುವರಿ 2024, 6:31 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ‘ಫ್ರೂಟ್ಸ್‌’ (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ತಂತ್ರಾಂಶದಲ್ಲಿ ನೋಂದಣಿಗೆ ಸರ್ಕಾರ ಈಗಾಗಲೇ ಹಲವಾರು ಬಾರಿ ಗಡುವು ನೀಡಿದ್ದರೂ ಜಿಲ್ಲೆಯಲ್ಲಿ ಇನ್ನೂ ಶೇ 23ರಷ್ಟು ಬಾಕಿ ಉಳಿದಿದೆ. ಶೇ 77.30ರಷ್ಟು ಪ್ರಗತಿ ಸಾಧಿಸಲಾಗಿದೆ.

ಜಿಲ್ಲೆಯ 9 ತಾಲ್ಲೂಕುಗಳು ತೀವ್ರ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿವೆ. ರೈತರು ಬೆಳೆ ನಷ್ಟ ಪರಿಹಾರವನ್ನು ಪಡೆಯಲು ‘ಫ್ರೂಟ್ಸ್‌’ ತಂತ್ರಾಂಶದಲ್ಲಿ ನೋಂದಣಿ ಅಗತ್ಯವಾಗಿದೆ. ಆದರೆ, ಹಲವರು ನೋಂದಣಿ ಮಾಡಿಸದೇ ಇರುವುದರಿಂದ ಅವರು ಪರಿಹಾರದಿಂದ ದೂರಾಗುತ್ತಿದ್ದಾರೆ.

ರೈತರು ತಮ್ಮ ಜಮೀನುಗಳ ಎಲ್ಲ ಸರ್ವೆ ನಂಬರ್‌ಗಳ ಮಾಹಿತಿಯನ್ನು ‘ಫ್ರೂಟ್ಸ್‌’ನಲ್ಲಿ ದಾಖಲಿಸಬೇಕು. ಸರ್ಕಾರ ಬರ ಪರಿಹಾರವನ್ನು ವಿತರಿಸುವಾಗ ತಂತ್ರಾಂಶದಲ್ಲಿ ಲಭ್ಯವಿರುವ ಮಾಹಿತಿಗಳ ಅನ್ವಯ ನಷ್ಟ ಪರಿಹಾರವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಿದೆ ಎಂದು ಸರ್ಕಾರ ತಿಳಿಸಿದೆ.

ಜಿಲ್ಲೆಯಲ್ಲಿ ಫೆ.13ರ ಅಂತ್ಯಕ್ಕೆ 10.07 ಲಕ್ಷ ರೈತರ ಪ್ಲಾಟ್‌ಗಳಲ್ಲಿ, 7.78 ಲಕ್ಷ ಪ್ಲಾಟ್‌ಗಳು ನೋಂದಣಿಯಾಗಿವೆ. ಇನ್ನೂ 2.28 ಲಕ್ಷ ಪ್ಲಾಟ್‌ಗಳನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಾಯಿಸಬೇಕಿದೆ.

ಪಿರಿಯಾಪಟ್ಟಣ ತಾಲ್ಲೂಕು ಶೇ 81.55ರಷ್ಟು ಪ್ರಗತಿಯಲ್ಲಿ ಮುನ್ನಡೆ ಸಾಧಿಸಿದೆ. ಹುಣಸೂರು ಶೇ 78.35, ಎಚ್‌.ಡಿ. ಕೋಟೆ ಶೇ 78.46, ಸರಗೂರು ಶೇ 78.16, ತಿ.ನರಸೀಪುರ ಶೇ 77.08, ನಂಜನಗೂಡು ಶೇ 76.48, ಕೆ.ಆರ್‌. ನಗರ ಶೇ 75.72, ಸಾಲಿಗ್ರಾಮ ಶೇ 74.66, ಮೈಸೂರು ಶೇ 73.96ರಷ್ಟು ಪ್ರಗತಿ ಸಾಧಿಸಿದೆ.

‘ವಿಮೆ, ಬೆಳೆ ನಷ್ಟ ಪರಿಹಾರ ಸೇರಿದಂತೆ ಸರ್ಕಾರದ ಹಲವು ಯೋಜನೆಗಳ ಪ್ರಯೋಜನಕ್ಕಾಗಿ ಪ್ರತಿ ರೈತರು ಫ್ರೂಟ್ಸ್‌ ಐ.ಡಿ. ಮಾಡಿಸುವುದು ಕಡ್ಡಾಯ. ರೈತರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಜಮೀನು ನೋಂದಣಿ ಆಗಿದೆಯೇ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್.

‘ಬೆಳೆ ನಷ್ಟ ಅನುಭವಿಸಿರುವ ರೈತರು ಫ್ರೂಟ್ಸ್‌ ಐಡಿ ಹೊಂದಿಲ್ಲದಿದ್ದರೆ, ಅವರ ಖಾತೆಗೆ ಪರಿಹಾರದ ಹಣ ಜಮೆ ಆಗುವುದಿಲ್ಲ. ನೋಂದಣಿ ಕುರಿತು ಗ್ರಾಮ ಮಟ್ಟದಲ್ಲಿ ಈಗಾಗಲೇ ಅನೇಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.

ನೋಂದಣಿ ಪ್ರಕ್ರಿಯೆ: ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಇಲ್ಲವೇ ತೋಟಗಾರಿಕೆ, ಕಂದಾಯ, ಪಶುಪಾಲನೆ, ರೇಷ್ಮೆ ಇಲಾಖೆ ಕಚೇರಿ ಇಲ್ಲವೇ ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ನೋಂದಣಿ ಮಾಡಬಹುದು. ನೋಂದಣಿ ಸಂದರ್ಭ ರೈತರ ಆಧಾರ್ ಕಾರ್ಡ್‌ ಪ್ರತಿ, ಬ್ಯಾಂಕ್‌ ಖಾತೆ ಪುಸ್ತಕದ ಪ್ರತಿ, ತಮ್ಮ ಹೆಸರಿನಲ್ಲಿ ಇರುವ ಪಹಣಿ, ಮೊಬೈಲ್ ಸಂಖ್ಯೆ ಹಾಗೂ ಜಾತಿ ಪ್ರಮಾಣಪತ್ರದ ಪ್ರತಿ ಸಲ್ಲಿಸಬೇಕು.

ಸರ್ಕಾರದ ಯೋಜನೆಯ ಲಾಭ: ನೋಂದಣಿಯಿಂದ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆಗಳಲ್ಲಿ ಸಿಗುವ ಯೋಜನೆಯ ಲಾಭವನ್ನು ರೈತರು ಪಡೆಯಬಹುದು. ಪಿಎಂ–ಕಿಸಾನ್‌ ಕಾರ್ಡ್‌ ಅನ್ವಯ ಸಾಲ ಪಡೆಯಲು ಹಾಗೂ ನೆರವು ಪಡೆಯಲು ಫ್ರೂಟ್ಸ್ ಐಡಿ ಬಹಳ ಮುಖ್ಯವಾಗಿದೆ. ಕೃಷಿ ಇಲಾಖೆಯಿಂದ ಬರ ಪರಿಹಾರ, ಸಹಾಯಧನ ಹಣ ಬಿಡುಗಡೆ, ಕೃಷಿ ಉಪಕರಣ ಖರೀದಿ, ರಸಗೊಬ್ಬರ, ಬೀಜ ವಿತರಣೆ,
ಕೀಟನಾಶಕ, ಔಷಧಗಳ ವಿತರಣೆಯಲ್ಲಿಯೂ ಇದು ಕಡ್ಡಾಯವಾಗಿದೆ.

ಕೃಷಿ ಇಲಾಖೆಯಿಂದ ಕ್ರಮ ನೋಂದಣಿಗೆ ಮುಂದಾಗದ ರೈತರು ಪಿರಿಯಾಪಟ್ಟಣದಲ್ಲಿ ಹೆಚ್ಚು ಪ್ರಗತಿ
ಫ್ರೂಟ್ಸ್‌ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿದ ರೈತರ ಖಾತೆಗಳಿಗೆ ಮಾತ್ರ ಸರ್ಕಾರದ ಪರಿಹಾರ ಹಣ ಜಮೆಯಾಗಲಿದೆ
ಬಿ.ಎಸ್. ಚಂದ್ರಶೇಖರ್ ಜಂಟಿ ನಿರ್ದೇಶಕ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT