ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ದಸರೆಗೆ ‘ಗಜಪಯಣ’ ಸೆ.1ರಂದು, 14 ಆನೆಗಳು ಭಾಗಿ

Published 7 ಆಗಸ್ಟ್ 2023, 14:14 IST
Last Updated 7 ಆಗಸ್ಟ್ 2023, 14:14 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯುವ ‘ಗಜಪಯಣ’ ಕಾರ್ಯಕ್ರಮ ಸೆ.1ರಂದು ನಡೆಯಲಿದೆ.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಈ ಮಾಹಿತಿ ನೀಡಿದರು.

‘ಈ ಬಾರಿಯೂ ಒಟ್ಟು 14 ಆನೆಗಳನ್ನು ವಿವಿಧ ಶಿಬಿರಗಳಿಂದ ಕರೆತರಲಾಗುತ್ತದೆ. ಮೊದಲ ತಂಡಕ್ಕೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಗುವುದು. ಬಳಿಕ ಅರಮನೆ ಆವರಣಕ್ಕೆ ಸಂಭ್ರಮದಿಂದ ಬರಮಾಡಿಕೊಳ್ಳಲಾಗುತ್ತದೆ. ಅವುಗಳಿಗೆ ತಾಲೀಮು ನೀಡಲಾಗುತ್ತದೆ’ ಎಂದು ತಿಳಿಸಿದರು.

‘ದಸರಾಗೆ ವಿಶೇಷ ಅನುದಾನ ಕೇಳಿಲ್ಲ. ಅದ್ಧೂರಿ ನಾಡಹಬ್ಬ ಆಚರಣೆಗೆ ಬೇಕಾಗುವಷ್ಟು ಅನುದಾನವನ್ನು ನಮ್ಮ ಸರ್ಕಾರ ಕೊಡಲಿದೆ’ ಎಂದು ಪ್ರತಿಕ್ರಿಯಿಸಿದರು.

‘ದಸರಾ ಉದ್ಘಾಟನೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಡಲಾಗಿದೆ. ಅವರೇ ತೀರ್ಮಾನಿಸಲಿದ್ದಾರೆ. ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಈ ಬಾರಿಯ ದಸರಾ ಅ.15ರಿಂದ 24ರವರೆಗೆ ನಡೆಯಲಿದೆ. ಅ.15ರಂದು ಚಾಮುಂಡಿಬೆಟ್ಟದಲ್ಲಿ ಚಾಲನೆ ದೊರೆಯಲಿದೆ. ಅ.23ರಂದು ಆಯುಧಪೂಜೆ ಹಾಗೂ ಅ.24ರಂದು ವಿಜಯದಶಮಿ ಮೆರವಣಿಗೆ ನಡೆಯಲಿದೆ.

ಶಿವಮೊಗ್ಗದಿಂದಲೂ ಕರೆತರುವ ಸಾಧ್ಯತೆ: ಈ ಬಾರಿ ನಾಲ್ಕು ಹೆಣ್ಣಾನೆಗಳು ದಸರಾ ಗಜಪಡೆಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಅವುಗಳ ‘ಗರ್ಭಧಾರಣೆ ಪರೀಕ್ಷೆ’ಯ ವರದಿ ಇನ್ನೂ ಬಂದಿಲ್ಲದ ಕಾರಣ ಆಯ್ಕೆ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ ಎಂದು ಇಲಾಖೆಗಳು ಮೂಲಗಳು ಮಾಹಿತಿ ನೀಡಿವೆ.

ಕಳೆದ ಬಾರಿ ಬಂಡೀಪುರದ ರಾಂಪುರ ಶಿಬಿರದಿಂದ ಕರೆತರಲಾಗಿದ್ದ ಲಕ್ಷ್ಮಿ ಆನೆಯು ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡಿತ್ತು. ಹೀಗಾಗಿ, ಈ ಬಾರಿ 6 ಹೆಣ್ಣಾನೆಗಳ ಗರ್ಭಧಾರಣೆ ಪರೀಕ್ಷೆಗೆ ರಕ್ತ ಹಾಗೂ ಮೂತ್ರದ ಮಾದರಿಯನ್ನು ದೆಹಲಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 6ರಲ್ಲಿ 4ನ್ನು ಆಯ್ಕೆ ಮಾಡಲಾಗುತ್ತದೆ.

ಈ ಬಾರಿ ಶಿವಮೊಗ್ಗದಿಂದಲೂ ಆನೆಗಳನ್ನು ಕರೆತರುವ ಸಾಧ್ಯತೆ ಇದೆ. ಇದಕ್ಕಾಗಿ ಅಧಿಕಾರಿಗಳ ತಂಡ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರಕ್ಕೂ ಭೇಟಿ ನೀಡಿ ಮಾಹಿತಿ ಪಡೆದಿದೆ ಎಂದು ತಿಳಿದುಬಂದಿದೆ.

ವಿವಿಧೆಡೆ ಪರಿಶೀಲನೆ
ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು ನಾಗರಹೊಳೆಯ ಬಳ್ಳೆ ಹಾಗೂ ಬಂಡೀಪುರದ ರಾಂಪುರ ಶಿಬಿರಕ್ಕೆ ಮೈಸೂರು ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಅಲ್ಲಿರುವ 4 ಆನೆಗಳ ಆರೋಗ್ಯದ ಕುರಿತು ಮಾಹಿತಿ ಪಡೆದಿದೆ. ಮತ್ತಿಗೋಡು ಭೀಮನಕಟ್ಟೆ ದುಬಾರೆ ಆನೆ ಶಿಬಿರಕ್ಕೂ ಭೇಟಿ ನೀಡಲಾಗಿತ್ತು. ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿರುವ ಡಿ.ಬಿ.ಕುಪ್ಪೆ ವಲಯದ ಬಳ್ಳೆ ಕ್ಯಾಂಪ್‌ನಲ್ಲಿರುವ ಗಜಪಡೆಯ ಮಾಜಿ ಕ್ಯಾಪ್ಟನ್‌ ‘ಅರ್ಜುನ’ ಆನೆ ಹಾಗೂ ಬಂಡೀಪುರ ಅರಣ್ಯ ವ್ಯಾಪ್ತಿಯ ಮಾರಿಗುಡಿ ವಲಯಕ್ಕೆ ಸೇರಿದ ರಾಂಪುರ ಶಿಬಿರದಲ್ಲಿರುವ ಕುಮ್ಕಿ ಆನೆ ಚೈತ್ರಾ ರೋಹಿತ ಹಾಗೂ ಪಾರ್ಥಸಾರಥಿ ಆನೆಯನ್ನು ಅರಣ್ಯಾಧಿಕಾರಿಗಳ ತಂಡ ಪರಿಶೀಲಿಸಿದೆ. ಆರ್‌ಎಫ್‌ಒ ಸಂತೋಷ್ ಹೂಗಾರ್ ಪಶು ವೈದ್ಯ ಡಾ.ಮುಜೀಬ್ ನೇತೃತ್ವದ ತಂಡ ಆನೆಗಳನ್ನು ಪರಿಶೀಲಿಸಿತು. ಅವುಗಳ ಸ್ವಭಾವ ಮಾವುತರ ಆಜ್ಞೆ ಪಾಲಿಸುತ್ತವೆಯೇ ಎಂಬುದರ ಮಾಹಿತಿ ಪಡೆಯಿತು.
ಶಿಬಿರಗಳಲ್ಲೇ ಪರೀಕ್ಷೆ
ಆನೆಗಳಿಗೆ ಶಿಬಿರಗಳಲ್ಲೇ ಪಟಾಕಿ ಸಿಡಿಸಿ ಭಾರಿ ಶಬ್ದಕ್ಕೆ ಬೆದರದಂತೆ ಅಣಿಗೊಳಿಸುವ ಕೆಲಸ ನಡೆಯುತ್ತಿದೆ. ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ 57 ವರ್ಷ ವಯಸ್ಸಾಗಿದ್ದು ಇನ್ನೂ ಮೂರು ವರ್ಷ ಅಂಬಾರಿ ಹೊರಬಹುದಾಗಿದೆ. ನಂತರ ವಯೋನಿವೃತ್ತಿ ನೀಡಲಾಗುತ್ತದೆ. ಬಳಿಕ ‘ಅಂಬಾರಿ’ ಹೊರುವ ಆನೆಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಈ ಬಾರಿ ದಸರಾ ಗಜಪಡೆಯಲ್ಲಿ ಹೊಸ ಆನೆಗಳಿಗೆ ಮಣೆ ಹಾಕಲು ಅರಣ್ಯ ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕಳೆದ ಬಾರಿಯಂತೆ ಈ ಬಾರಿಯೂ ‘ಅರ್ಜುನ’ ಆನೆ ನಿಶಾನೆ ಆನೆಯಾಗಿ ಜಂಬೂಸವಾರಿ ಮೆರವಣಿಯ ಮುಂಚೂಣಿಯಲ್ಲಿ ಸಾಗಲಿದೆ ಎಂದು ತಿಳಿದುಬಂದಿದೆ. ಕೆಲವೇ ದಿನಗಳಲ್ಲಿ ಆನೆಗಳ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆ ಇದೆ. 2–3 ಆನೆಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲು ಉದ್ದೇಶಿಸಲಾಗಿದೆ.
ನಾಡಹಬ್ಬದ ಜಂಬೂಸವಾರಿಗಾಗಿ ಯಾವ್ಯಾವ ಆನೆಗಳನ್ನು ಕರೆತರಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ಪ್ರಕ್ರಿಯೆ ನಡೆಯುತ್ತಿದೆ
-ಮಾಲತಿ ಪ್ರಿಯಾ, ಸಿಸಿಎಫ್‌ ಮೈಸೂರು ವೃತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT