ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಗಂಗೋತ್ರಿ ಬಡಾವಣೆ: ನಾಲೆಯೇ ಕಾಣೆ

ಪಾರ್ಕಿಂಗ್‌ ಸ್ಥಳವಾದ ಪೂರ್ಣಯ್ಯ ನಾಲೆ ಜಾಗ: ಕಾಂಪೌಂಡ್‌ ನಿರ್ಮಾಣ
ಮೋಹನ್‌ ಕುಮಾರ ಸಿ.
Published 30 ನವೆಂಬರ್ 2023, 6:31 IST
Last Updated 30 ನವೆಂಬರ್ 2023, 6:31 IST
ಅಕ್ಷರ ಗಾತ್ರ

ಮೈಸೂರು: ಗಂಗೋತ್ರಿ ಬಡಾವಣೆಯಿಂದಲೇ ಪೂರ್ಣಯ್ಯ ನಾಲೆ ಒತ್ತುವರಿಯ ಓಟ ಆರಂಭವಾಗುತ್ತದೆ. ನಗರಕ್ಕೆ ಉಸಿರು ನೀಡುವ ಕುಕ್ಕರಹಳ್ಳಿ ಕೆರೆಗೆ ನೀರು ಹೋಗುತ್ತಿತ್ತೆಂದು ತೊಣಚಿಕೊ‍‍ಪ್ಪಲಿನವರಷ್ಟೇ ಅಲ್ಲ, 4 ಕಿಮೀ ದೂರದ ಹಿನಕಲ್‌ ನಿವಾಸಿಗಳೂ ಮಾತನಾಡುತ್ತಾರೆ.

‘ಚಾಕನಕಟ್ಟೆ, ದೇವಯ್ಯನ ಕೆರೆಯ ನೀರು ಕುಕ್ಕರಹಳ್ಳಿ ಕೆರೆಗೆ ಹೋಗುತ್ತಿತ್ತು. ಬೇಸಿಗೆಯಲ್ಲೂ ನೀರು ಹರಿಯುತ್ತಿತ್ತು. ಆಗೆಲ್ಲ, ಕುರಿ, ದನ, ಎಮ್ಮೆಗಳನ್ನು ನಾಲೆಯ ಬದುವಿನಲ್ಲಿ ಮೇಯಿಸುತ್ತಿದ್ದೆವು. ಈಗೆಲ್ಲ ಬರೀ ರೋಡು, ಆರ್‌ಸಿಸಿ ಮನೆಗಳು. ಆಗಿನ ಕಾಲ ಈಗಿಲ್ಲ ಬುಡಿ’ ಎನ್ನುತ್ತಾರೆ ಹಿನಕಲ್‌ ಗ್ರಾಮದ ಮಹದೇವ ನಾಯ್ಕ.

ನಾಲೆಯಲ್ಲಿ ಮಳೆಗಾಲದಲ್ಲಿ ಸೊಂಟದ ಮಟ್ಟ ನೀರು ಹರಿಯುತ್ತಿತ್ತು. ಮನೆಗಳಿಗೂ ನುಗ್ಗುತ್ತಿತ್ತು ಎಂದು ಬೋಗಾದಿ, ತೊಣಚಿಕೊಪ್ಪಲು ಗ್ರಾಮದ ನಿವಾಸಿಗಳು ಸ್ಮರಿಸುತ್ತಾರೆ. ಬಿಸಿಲುಮಾರಮ್ಮ ದೇವಾಲಯದಿಂದ ಹರ್ಷ ಬಾರ್‌ ವರೆಗಿನ ನಾಲೆಯ ಭಾಗದಲ್ಲಿ ನೀರು ತುಂಬಿ ಹರಿಯುತ್ತಿತ್ತು. ಬೋಗಾದಿ ಎರಡನೇ ಹಂತ ಅಭಿವೃದ್ಧಿಯಾದಾಗ ಒತ್ತುವರಿ ನಡೆಯಿತು.

ದಶಕದ ಹಿಂದೆ ಪಿ.ಎಸ್‌.ವಸ್ತ್ರದ್‌ ಜಿಲ್ಲಾಧಿಕಾರಿ ಹಾಗೂ ಸಿ.ಜಿ.ಬೆಟ್‌ಸೂರಮಠ ಮುಡಾ ಆಯುಕ್ತರಾಗಿದ್ದಾಗ ಅಕ್ರಮವಾಗಿ ಕಟ್ಟಿದ್ದ ಮನೆಗಳನ್ನು ಅವರೇ ನಿಂತು ತೆರವುಗೊಳಿಸಿದ್ದರು. ಮನೆಗಳ ಪಾಯ, ಇಟ್ಟಿಗೆಗಳನ್ನು ಈಗಲೂ ಇಲ್ಲಿ ಕಾಣಸಿಗುತ್ತವೆ. ದಶಕದಿಂದ ಹಳ್ಳದ ಭಾಗದಲ್ಲಿ ಕಟ್ಟಡ ತ್ಯಾಜ್ಯ ತುಂಬಿ ಮುಚ್ಚಲಾಗುತ್ತಿದೆ. ಪಾರ್ಕಿಂಗ್‌ ತಾಣವನ್ನಾಗಿ ಮಾಡಿಕೊಳ್ಳಲಾಗಿದೆ. ‌

‘ಆಗ ಜಿಲ್ಲಾಧಿಕಾರಿಗಳು ಬೆಳ್‌ಬೆಳಿಗ್ಗೆಯೇ ಬಂದು ನಿಂತು ಒಡೆಸಿ ಹಾಕಿದರು. ಅದರಿಂದ ಈಗಿನ ಜಾಗ ನೋಡುತ್ತಿದ್ದೀರಿ. ಮುಂದೆ ಇದೂ ಇರುವುದಿಲ್ಲ’ ಎಂದು ಟಿ.ಕೆ.ಬಡಾವಣೆ ನಿವಾಸಿ, ಸಿಮೆಂಟ್‌ ವ್ಯಾಪಾರಿ ಲಿಂಗಣ್ಣ ‘ಪ್ರಜಾವಾಣಿ’ಗೆ ಹೇಳಿದರು.

‘25 ವರ್ಷದ ಹಿಂದೆ ಇಲ್ಲಿಗೆ ಬಂದೆ, ದಿವಾನರ ನಾಲೆಯಲ್ಲಿ ನೀರು ಹರಿಯುತ್ತಿತ್ತು. ಈಗೆಲ್ಲ ನೋಡಿ, ಕಾವ್ಲಿ ಎಲ್ಲಿದೆ. ಬರಿ ಒಡೆದ ಮನೆಗಳ ಇಟ್ಟಿಗೆ–ಸಿಮೆಂಟ್‌ ಕಲ್ಲುಗಳು. ನಾಲೆಯ ಖಾಲಿ ಜಾಗವನ್ನು ಸಂಘ– ಸಂಸ್ಥೆಯವರಿಗೆ ನೀಡಲಾಗಿದೆ’ ಎಂದರು.

ಒತ್ತುವರಿ ಎಲ್ಲೆಲ್ಲಿ: ಜನತಾನಗರ, ಟಿ.ಕೆ.ಬಡಾವಣೆ, ಗಂಗೋತ್ರಿ ಬಡಾವಣೆಗಳ ಸರ್ವೆ ನಂ 130, 129, 128, 193, 127, 126, 125, 122, 198ರವರೆಗೂ ಒತ್ತುವರಿ ಎಗ್ಗಿಲ್ಲದ  ಮುಂದುವರಿದಿದೆ. 122ರಲ್ಲಿ ಕಾಲುವೆಗೆ ಕಾಂಪೌಂಡ್‌ ಹಾಕಿಕೊಳ್ಳಲಾಗಿದೆ. ರಸ್ತೆ, ಕಟ್ಟಡ ತ್ಯಾಜ್ಯವನ್ನು ಸುರಿಯಲಾಗಿದ್ದು, ಈ ಜಾಗವು ಕುಕ್ಕರಹಳ್ಳಿಯ ಖಾಸಗಿ ಮಾಲೀಕರಿಗೆ ಸೇರಿದ್ದೆಂಬ ಫಲಕವನ್ನು ಹಾಕಲಾಗಿದೆ. ನಾಲೆಯಿರುವ ಕುರುಹಾಗಿ ಹಸಿರು ಮರಗಳು ಕಾಣುತ್ತವೆ.

ಒತ್ತುವರಿ ಎಗ್ಗಿಲ್ಲದೆ ಮುಂದುವರಿದರೂ ಯಾವುದೇ ಕ್ರಮವನ್ನು ದಶಕದಿಂದ ಯಾರೂ ಕೈಗೊಂಡಿಲ್ಲ. ಗಂಗೋತ್ರಿ ಕಾಲೇಜಿನ ದಕ್ಷಿಣ ಭಾಗದಲ್ಲಿ ನಾಲೆಯೇ ರಸ್ತೆಯಾಗಿದೆ. ಅದರಿಂದ ಸ್ವಲ್ಪ ಮುಂದೆ ಹೋದರೆ ಪೀಟರ್‌ ಚರ್ಚ್‌ ಇದ್ದು, ಅದರ ದಕ್ಷಿಣ ಭಾಗದಲ್ಲಿ ನಾಲೆ ಸಂಪೂರ್ಣ ಮುಚ್ಚಿಹೋಗಿದೆ.

ದಶಕದ ಹಿಂದೆಯೂ ಇಲ್ಲಿ ಹಳ್ಳದ ಭಾಗವಿತ್ತು. ಕಟ್ಟಡ ತ್ಯಾಜ್ಯವನ್ನು ತುಂಬಿ ಪಾರ್ಕಿಂಗ್‌ ತಾಣವನ್ನಾಗಿ ಮಾಡಿಕೊಳ್ಳಲಾಗಿದೆ. ಇಲ್ಲಿಂದ  ಹರ್ಷ ಬಾರ್‌ವರೆಗಿನ ಬೋಗಾದಿ ಮುಖ್ಯ ರಸ್ತೆಯಲ್ಲಿ ಬಲಭಾಗದಲ್ಲಿ ಬುಧವಾರವೂ ಕಟ್ಟಡ ತ್ಯಾಜ್ಯ ಸುರಿಯುವುದು ಕಂಡು ಬಂತು. ದೇವಿ ನರ್ಸಿಂಗ್‌ ಹೋಂ ಮುಂಭಾಗದಲ್ಲಿ ಮಾತ್ರ ನಾಲೆಯ ಗೋಚರವಾಗುತ್ತದೆ. ಅಲ್ಲಿ ಗಿಡ–ಮರಗಳಿದ್ದು, ಹಸಿರಿನ ತಾಣವಾಗಿದೆ. ಅದಕ್ಕೂ ಪಾರ್ಕಿಂಗ್‌ಗಾಗಿ ಒತ್ತುವರಿ ಮಾಡಲಾಗಿದೆ.

ಹರ್ಷ ಬಾರ್‌ ಸೇರಿದಂತೆ ಇರುವ ಅಷ್ಟೂ ಜಾಗ ದಿಶಾಂಕ್‌ ಆ್ಯ‍ಪ್‌ನಲ್ಲಿ ‘ನಾಲಾ ಜಾಗ’ವೆಂದೇ ಕಾಣುತ್ತದೆ. ನೀಲಿ ಬಣ್ಣದ ಹಳ್ಳದ ಜಾಗದಲ್ಲಿ ‘ಕೋಸ್ಟಲ್‌ ಜ್ಯುವೆಲ್‌’ ಹೋಟೆಲ್‌ ಇದೆ. ಇವೆಲ್ಲ ಒತ್ತುವರಿ ತೆರವುಗೊಳಿಸಿದರೆ ಕುಕ್ಕರಹಳ್ಳಿ ಕೆರೆಯ ಜೀವಂತಿಕೆಗೆ ಮತ್ತಷ್ಟು ಕಳೆ ಬರಲಿದೆ.

ದಿಶಾಂಕ್‌ ಆ್ಯಪ್‌ನಲ್ಲಿ ಗಂಗೋತ್ರಿ ಬಡಾವಣೆ ಹಾಗೂ ಟಿ.ಕೆ.ಬಡಾವಣೆಯಲ್ಲಿ ಸಾಗುವ ಪೂರ್ಣಯ್ಯ ನಾಲೆ
ದಿಶಾಂಕ್‌ ಆ್ಯಪ್‌ನಲ್ಲಿ ಗಂಗೋತ್ರಿ ಬಡಾವಣೆ ಹಾಗೂ ಟಿ.ಕೆ.ಬಡಾವಣೆಯಲ್ಲಿ ಸಾಗುವ ಪೂರ್ಣಯ್ಯ ನಾಲೆ
ಟಿ.ಕೆ.ಬಡಾವಣೆಯಲ್ಲಿ ನಾಲೆಯೇ ರಸ್ತೆಯಾಗಿದೆ
ಟಿ.ಕೆ.ಬಡಾವಣೆಯಲ್ಲಿ ನಾಲೆಯೇ ರಸ್ತೆಯಾಗಿದೆ

ಟಿ.ಕೆ.ಬಡಾವಣೆಯಲ್ಲಿ ಒತ್ತುವರಿ ಕಟ್ಟಡ ತ್ಯಾಜ್ಯ ತುಂಬಿ ಪಾರ್ಕಿಂಗ್ ನಾಲೆ ಜಾಗ ಖಾಸಗಿಯವರ ಪಾಲು

‘ಕುಕ್ಕರಹಳ್ಳಿ ಕೆರೆಗೆ ಶೇ 30ರಷ್ಟು ನೀರು’ ‘ರಾಜರ ಕಾಲದಲ್ಲಿ ಕಟ್ಟಿರುವ ಪೂರ್ಣಯ್ಯ ಕಾಲುವೆಯು 10 ಮೀಟರ್‌ನಿಂದ 50 ಮೀಟರ್‌ವರೆಗೂ ಅಗಲವಿದೆ. ಕುಕ್ಕರಹಳ್ಳಿ ಕೆರೆಯಿಂದ ಎಸ್‌ಜಿಸಿಇ ಕಾಲೇಜಿನ ಹಿಂಭಾಗದವೆಗಿನ 2.5 ಕಿ.ಮೀ ನಾಲೆಯ ಒತ್ತುವರಿ ತೆರವುಗೊಳಿಸುವ ಇಚ್ಛಾಶಕ್ತಿಯನ್ನು ಜಿಲ್ಲಾಡಳಿತ ಪ್ರದರ್ಶಿಸಬೇಕು. ಶೇ 30ರಷ್ಟು ಶುದ್ಧ ನೀರು ಕುಕ್ಕರಹಳ್ಳಿಗೆ ಬರುತ್ತದೆ. ತೆರವಿನಿಂದ 20 ಎಕರೆಯಷ್ಟು ಭೂಮಿ ಸಿಗಲಿದೆ’ ಎಂದು ಪರಿಸರ ತಜ್ಞ ಯು.ಎನ್‌.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಎರಡೆರಡು ವರ್ಷಕ್ಕೆ ಎಷ್ಟೆಷ್ಟು ಒತ್ತುವರಿಯಾಗಿದೆ ಎಂಬುದು ಗೂಗಲ್‌ ಇಮೇಜ್‌ನಲ್ಲಿ ಸಿಗುತ್ತದೆ. ನಾಲೆಯು ಮುಚ್ಚಿರುವುದರಿಂದ ಜನತಾನಗರದಲ್ಲಿ ಮಳೆ ನೀರು ಪ್ರವಾಹದಂತೆ ನುಗ್ಗುತ್ತಿದೆ. ನಾಲೆಗೆ ಜೀವ ಕೊಡುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

‘ಸಾರ್ವಜನಿಕ ಆಸ್ತಿ ಉಳಿಸಬೇಕು’ ‘ಪೂರ್ಣಯ್ಯ ನಾಲೆ ಒತ್ತುವರಿಯನ್ನು ದಶಕದ ಹಿಂದೆ ಟಿ.ಕೆ.ಬಡಾವಣೆ ಬೋಗಾದಿ ಎರಡನೇ ಹಂತ ಗಂಗೋತ್ರಿ ಬಡಾವಣೆ ಕಡೆ ತೆರವು ಮಾಡಲಾಗಿತ್ತು. ಸರ್ಕಾರಿ ಆಸ್ತಿ ಉಳಿಸುವುದು ಆಡಳಿತ ನಡೆಸುವವರ ಕರ್ತವ್ಯ. ಅಲ್ಲಷ್ಟೇ ಅಲ್ಲ ದೇವರಾಜ ಮಾರುಕಟ್ಟೆ ಗರುಡಾ ಮಾಲ್ ಸಯ್ಯಾಜಿರಾವ್ ರಸ್ತೆ ಜೆಎಲ್‌ಬಿ ರಸ್ತೆಯಲ್ಲೂ ಸಾರ್ವಜನಿಕ ಆಸ್ತಿ ಉಳಿಸಲಾಗಿತ್ತು’ ಎಂದು ನಿವೃತ್ತ ಕೆಎಎಸ್‌ ಅಧಿಕಾರಿ ಸಿ.ಜಿ.ಬೆಟ್‌ಸೂರಮಠ ಸ್ಮರಿಸಿದರು. ‘ನಾವು ಮಾಡುವ ಒಳ್ಳೆಯ ಕೆಲಸಗಳಲ್ಲಿ ಜನರಲ್ಲಿ ಉಳಿಯುತ್ತದೆ. ಬಡವರು ಒತ್ತುವರಿ ಮಾಡಿದ್ದರೆ ಅವರಿಗೆ ತಿಳಿವಳಿಕೆ ಹೇಳಬಹುದು. ದೊಡ್ಡವರಿಗೆ ಹಣವಿದ್ದವಿರಿಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬೇಕು. ನಾಲೆ ಕೆರೆ ಹಿರಿಯರು ಉಳಿಸಿ ನಮಗೆ ಕೊಟ್ಟಿದ್ದಾರೆ. ಅದನ್ನು ನಾವು ಮುಂದಿನವರಿಗೆ ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT