ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಕೃಪೆ, ಬೊಮ್ಮಾಯಿ ಅವಕೃಪೆಯಿಂದ ಸಾಧನೆ:ಅಡ್ಡಂಡ ಕಾರ್ಯಪ್ಪ

‘ಟಿಪ್ಪುನಿಜಕನಸುಗಳು’– ಪ್ರದರ್ಶನದ ಸುವರ್ಣ ಸಂಭ್ರಮದಲ್ಲಿ ಅಡ್ಡಂಡ ಕಾರ್ಯಪ್ಪ
Last Updated 19 ಮಾರ್ಚ್ 2023, 15:32 IST
ಅಕ್ಷರ ಗಾತ್ರ

ಮೈಸೂರು: ‘ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಿದ ಸಿದ್ದರಾಮಯ್ಯ ಸರ್ಕಾರದ ಕೃಪೆ, ಅನುದಾನ ಕೇಳಿದರೂ ಸ್ಪಂದಿಸದ ನಮ್ಮದೇ ಸರ್ಕಾರದ (ಬಸವರಾಜ ಬೊಮ್ಮಾಯಿ) ಅವಕೃಪೆ, ಕೃತಿ ರಚಿಸಿ, ರಂಗಪ್ರಯೋಗದ ವೇಳೆ ‘ಲಾಟ್‌ಪುಟ್‌’ ನಿರ್ದೇಶಕ ಎಂಬ ಟೀಕೆಗಳು ‘ಟಿಪ್ಪು ನಿಜ ಕನಸುಗಳು’ ನಾಟಕದ 50ನೇ ಪ್ರದರ್ಶನದ ಸಂಭ್ರಮಕ್ಕೆ ಕಾರಣವಾಗಿವೆ’ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

ಇಲ್ಲಿನ ‘ರಂಗಾಯಣ’ದ ‘ಭೂಮಿಗೀತ’ ರಂಗಮಂದಿರದಲ್ಲಿ ಭಾನುವಾರ ನಡೆದ ‘ಟಿಪ್ಪು ನಿಜಕನಸುಗಳು’ ನಾಟಕ ಸುವರ್ಣ ಪ‍್ರದರ್ಶನದ ಸಂಭ್ರಮ’ದಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸದಿದ್ದರೆ ಕೊಡಗಿನಲ್ಲಿ ಗದ್ದಲ ಆಗುತ್ತಿರಲಿಲ್ಲ, ಕುಟ್ಟಪ್ಪ ಸಾಯುತ್ತಿರಲಿಲ್ಲ. ನಾನು ಕೃತಿ ರಚಿಸುತ್ತಿರಲಿಲ್ಲ; ಇದು ಸಿದ್ದರಾಮಯ್ಯ ಅವರ ಕೃಪೆ. ಚಾಮುಂಡಿ ದೇಗುಲ ಕೆಡವಿದ ಟಿಪ್ಪು ಅಭಿಮಾನಿ ಆದ್ದರಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ. ಟಿಪ್ಪು ಅಂದರೆ ಇಂದಿಗೂ ಆಂತರ್ಯದಲ್ಲಿ ನಡುಗುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ರಂಗಾಯಣ 20 ನಾಟಕಗಳನ್ನು ಪ್ರದರ್ಶಿಸಿದೆ. ನಾಟಕಗಳಿಗೆ ಸರ್ಕಾರ ತಲಾ ₹1 ಕೋಟಿಯಷ್ಟು ಅನುದಾನ ನೀಡಿದೆ. ಹೀಗಾಗಿ ‘ಟಿಪ್ಪು ನಿಜಕನಸುಗಳು’ ನಾಟಕಕ್ಕೆ ಅನುದಾನ ಬೇಕೆಂದು ನಾನು ನಿರಂತರವಾಗಿ ಬರೆದೆ. ಏನೂ ಸಿಗಲಿಲ್ಲ. ನಾನೇ ನಾಟಕ ನಿರ್ದೇಶಿಸುತ್ತೇನೆಂದು ಹೇಳಿದಾಗ ರಂಗಾಯಣದ ಹಿರಿಯ ಕಲಾವಿದೆಯೊಬ್ಬರು ‘ನಾವು 30 ವರ್ಷ ಕಲಾ ಸೇವೆ ಮಾಡಿದ್ದೇವೆ, ಯಾರೋ ನಿರ್ದೇಶನ ಮಾಡೋದಾ?’ ಎಂದು ಟೀಕಿಸಿದರು. ನಾನು ಹೆಸರಾಂತ ಗಿರೀಶ್‌ ಕಾರ್ನಾಡ್‌, ಬಸವರಾಜಯ್ಯ ಅವರಂತಹ ನಿರ್ದೇಶಕನಲ್ಲ ಲಾಟ್‌ಪುಟ್‌ ಎಂಬಂತಿತ್ತು. 20 ನಾಟಕ ಬರೆದು ನಿರ್ದೇಶಿಸಿದ್ದರೂ ಈ ನಾಟಕದ ಬಗ್ಗೆ ಅವರ ಟೀಕೆ ಕೀಳರಿಮೆ ತುಂಬಿಸಿತ್ತು. ಅಂಥ ಲಾಟ್‌ಪುಟ್‌ ನಿರ್ದೇಶಕನ ನಾಟಕ 20 ಜಿಲ್ಲೆ, 45 ಸಾವಿರ ವೀಕ್ಷಕರ ಬೆಂಬಲದೊಂದಿಗೆ 50 ಪ್ರದರ್ಶನ ಕಾಣುತ್ತಿರುವುದು ಸಂಭ್ರಮವಲ್ಲದೆ ಮತ್ತೇನು?’ ಎಂದರು.

ಸಂಭ್ರಮಾಚರಣೆ ಉದ್ಘಾಟಿಸಿದ ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಮಾತನಾಡಿ, ‘ರಂಗಾಯಣ, ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿರುವುದು ಸಂತೋಷದ ವಿಷಯ. ಧರ್ಮ, ಸಮುದಾಯಗಳನ್ನು ಟೀಕಿಸದೆ, ಯಾವ ಐತಿಹಾಸಿಕ ವ್ಯಕ್ತಿಯ ಬಗ್ಗೆ ಕಲಾ–ಕೃತಿ ರಚಿಸಲು ಕಲಾವಿದರಿಗೆ ಅವಕಾಶವಿದೆ. ಉತ್ಪ್ರೇಕ್ಷೆ, ಕಾಲ್ಪನಿಕತೆ ಸೇರಿಸಿದರೂ ತಪ್ಪೇನಿಲ್ಲ’ ಎಂದರು.

ಪತ್ರಕರ್ತ ರವೀಂದ್ರ ಜೋಶಿ, ಶಿಕ್ಷಣ ತಜ್ಞ ಅಶೋಕ್‌ ಕುಮಾರ್‌ ಎಂ. ಅತಿಥಿಗಳಾಗಿದ್ದರು.

‘ಟಿಪ್ಪು ನಿಜಕನಸುಗಳು’ ಸಾಗಿದ ಹಾದಿ ಚಿತ್ರಣ, ಮಾಧ್ಯಮ ಪ್ರತಿಕ್ರಿಯೆಗಳ ಭಿತ್ತಿಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.

‘ಒಕ್ಕಲಿಗರನ್ನು ಲೀಸ್‌ಗೆ ಕೊಟ್ಟಿದ್ದಾರಾ?’

‘ಟಿಪ್ಪುವನ್ನು ಕೊಂದ ಉರಿಗೌಡ– ನಂಜೇಗೌಡ ಬಗ್ಗೆ ಕೃತಿ ದೇಜಗೌ ಸಂಪಾದಕತ್ವದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಬಿಡುಗಡೆ ಮಾಡಿದ್ದರು. ಆಗ ವಿವಾದ ಆಗಲಿಲ್ಲ. 2022ರಲ್ಲಿ ನಾನು ಪರಾಮರ್ಶಿಸಿದಾಗ ಒಕ್ಕಲಿಗ ಸಮುದಾಯವನ್ನು ಎತ್ತಿಕಟ್ಟಲು ಪ್ರಯತ್ನಿಸಿದರು. ಒಕ್ಕಲಿಗರನ್ನು ಇವರಿಗೆ ಲೀಸ್‌ ಕೊಟ್ಟಿದ್ದಾರಾ?’ ಎಂದು ಅಡ್ಡಂಡ ಕೇಳಿದರು.

‘ಪ್ರಗತಿವಾದಿ, ಜಾತ್ಯತೀತರು ಎನ್ನುವವರಲ್ಲಿ ಸ್ವಲ್ಪ ಜಾತಿವಾದವೂ ಇದೆ’ ಎಂದರು.

ಅಡ್ಡಂಡ–ನಿರ್ಮಲಾ ಮಠಪತಿ ವಾದ–ಪ್ರತಿವಾದ!

‘ರಂಗಾಯಣ’ದ ಅಧಿಕಾರಿಗಳ ಅಸಹಕಾರದ ಬಗ್ಗೆ ಕಾರ್ಯಪ್ಪ ಪ್ರಸ್ತಾಪಿಸಿದ್ದಕ್ಕೆ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಅತೃಪ್ತಿ ವ್ಯಕ್ತಪಡಿಸಿದರು.

‘ಈ ನಾಟಕದ ಸಂದರ್ಭದಲ್ಲಿ ಅಧಿಕಾರಿಗಳು ಬೇಡ, ನನ್ನನ್ನು ವೇದಿಕೆ ಕರೀಬೇಡಿ ಎಂದಿದ್ದರು. ಸೂಕ್ಷ್ಮ ವಿಚಾರ, ಮುಂದೆ ಸರ್ಕಾರ ಬದಲಾದರೆ ಹೇಗೋ ಏನೊ ಎಂಬ ಆತಂಕ ಇರಬಹುದು. ಇದರಲ್ಲಿ ಅವರ ತಪ್ಪೇನಿಲ್ಲ. ಮುಂದೆ ಬರುವ, ಹಿಂದೆ ಇದ್ದ ಸರ್ಕಾರಗಳಿಗೆ ಅವರು ಅಡ್ಜಸ್ಟ್‌ ಆಗಬೇಕು. ನಾವು ಅಪ್ರಾಮಾಣಿಕರು, ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕರು’ ಎಂದು ವ್ಯಂಗ್ಯವಾಗಿ ಹೇಳಿದರು.

ಪ್ರತಿಕ್ರಿಯಿಸಿದ ನಿರ್ಮಲಾ, ‘ಸರ್ಕಾರಿ ಅಧಿಕಾರಿಗಳಿಗೆ ಯಾವ ಗುಂಪೂ ಇರಲ್ಲ. ಕೆಲಸ ಮಾಡ್ತೀವಿ, ಅರ್ಥ ಮಾಡ್ಕೋಬೇಕು’ ಎಂದರು.

‘ಸತ್ಯದ ಅನಾವರಣ ಎಂಬ ಸಾಲು ಇರುವ ಕಾರಣ, ಅದಕ್ಕೆ ಬರಲಾರೆ ಎಂದಿರಬಹುದು’ ಎಂದು ಅಡ್ಡಂಡ ಪ್ರತಿಕ್ರಿಯಿಸಿದರು.

ಆಗ ನಿರ್ಮಲಾ, ‘ನಾನು ವಿಷಯ ತಜ್ಞಳಲ್ಲ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಕಾರ್ಯಪ್ಪ, ‘ನೀವು ಕುಳಿತುಕೊಳ್ಳಿ. ನೀವು ವಿಷಯ ತಜ್ಞರಲ್ಲ. ಆದರೆ, ವಿಷಯವನ್ನೆಲ್ಲಾ ತಿಳಿದವರು, ಎಲ್ಲೆಲ್ಲಿ ಯಾವ್ಯಾವ ಪಾಯಿಂಟ್‌ ಇಡಬೇಕು ಎಂದು ತಿಳಿದವರು. ಸಂಭ್ರಮಾಚರಣೆ ಸರ್ಕಾರಿ ಕಾರ್ಯಕ್ರಮ. ಆದರೆ, ನನ್ನ ಪುಸ್ತಕ ಬಿಡುಗಡೆಗೂ ಮೇಡಂ ಬಂದಿರಲಿಲ್ಲ. ಇರಲಿ ಅದು ಅವರವ ಭಾವಕ್ಕೆ ಬಿಟ್ಟ ವಿಷಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT