ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಕಡಿಮೆ ಬೆಲೆಗೆ ಖನಿಜ ಭೂಮಿ: ಆಕ್ರೋಶ

ಸರ್ಕಾರದ ಬೊಕ್ಕಸಕ್ಕೆ ನಷ್ಟ: ಎಚ್.ವಿಶ್ವನಾಥ್ ವಾಗ್ದಾಳಿ
Published : 25 ಆಗಸ್ಟ್ 2024, 14:29 IST
Last Updated : 25 ಆಗಸ್ಟ್ 2024, 14:29 IST
ಫಾಲೋ ಮಾಡಿ
Comments

ಮೈಸೂರು: ‘ರಾಜ್ಯ ಸರ್ಕಾರವು ಉತ್ಕೃಷ್ಟ ಕಬ್ಬಿಣ ಅದಿರಿನ ನಿಕ್ಷೇಪವಿರುವ 3,677 ಎಕರೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಜಿಂದಾಲ್‌ ಉಕ್ಕು ಕಂಪನಿಗೆ ಮಾರಾಟ ಮಾಡಿ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್‌.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬಳ್ಳಾರಿಯ ಸಂಡೂರು ತಾಲ್ಲೂಕಿನ ತೋರಣಗಲ್‌ ಬಳಿಯ ಭೂಮಿಯನ್ನು ಎಕರೆಗೆ ₹ 1.15 ಲಕ್ಷಕ್ಕೆ ‘ಲೀಸ್‌ ಕಂ ಸೇಲ್’ ಆಧಾರದಲ್ಲಿ ನೀಡಲಾಗಿದೆ. ಟನ್‌ ಮಣ್ಣಿನಲ್ಲಿ ಶೇ 62ರಷ್ಟು ಕಬ್ಬಿಣದ ಅದಿರು ಸಿಗುವ ಈ ಜನರ ಆಸ್ತಿಯನ್ನು ಏಕ‍ಪಕ್ಷೀಯವಾಗಿ ಮಾರಾಟ ಮಾಡಲಾಗಿದೆ’ ಎಂದು ಆರೋಪಿಸಿದರು.

‘2017ರಲ್ಲಿ ಕಾನೂನು ಇಲಾಖೆಯು ಜಮೀನನ್ನು ಮಾರುಕಟ್ಟೆ ದರಕ್ಕೆ ಮಾರಾಟ ಮಾಡಬೇಕು. ಭೂಮಿಯೊಳಗಿನ ನಿಕ್ಷೇಪಕ್ಕೂ ಪ್ರತ್ಯೇಕ ದರ ವಿಧಿಸಬೇಕೆಂದು ಹೇಳಿ ವರದಿ ನೀಡಿತ್ತು. ಆದರೆ, ಇದೀಗ ವರದಿಯಂತೇನೂ ನೀಡುವುದು ಬೇಕಿಲ್ಲವೆಂದು ಅಡ್ವೋಕೇಟ್‌ ಜನರಲ್‌ ಅವರಿಂದ ಪತ್ರ ಪಡೆದು, ಸಚಿವ ಸಂಪುಟವು ಭೂಮಿ ನೀಡಲು ಅನುಮೋದಿಸಿದೆ’ ಎಂದು ಆಕ್ಷೇಪಿಸಿದರು.

‘ಸಾವಿರಾರು ಎಕರೆ ಖನಿಜ ಭೂಮಿಯ ದರ ₹ 52 ಕೋಟಿಯಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ‍ಪಡೆದ 14 ಬದಲಿ ನಿವೇಶನದ ಬೆಲೆ ₹ 62 ಕೋಟಿಯಾಗಿದೆ. ರಾಜಕೀಯ ಪ್ರಕ್ಷುಬ್ಧತೆ ಇರುವ ವೇಳೆ ತರಾತುರಿಯಲ್ಲಿ ಜಮೀನನ್ನು ನೀಡಲಾಗಿದೆ. ಶಾಸಕರ ಖರೀದಿಗೆ, ಸರ್ಕಾರ ಉಳಿಸಿಕೊಳ್ಳಲು ಬೇಕಿರುವ ಹಣಕ್ಕಾಗಿ ಭೂಮಿಯನ್ನು ಮಾರಲಾಗಿದೆ’ ಎಂದರು.

‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಭೂಮಿ ಮಾರಾಟಕ್ಕೆ ನಿರ್ಧರಿಸಿದ್ದರು. ಆಗ ಬಿ.ಎಸ್‌.ಯಡಿಯೂರಪ್ಪ ವಿಧಾನಸೌಧದಲ್ಲಿಯೇ ‍ಪ್ರತಿಭಟಿಸಿದ್ದರು. 2021ರಲ್ಲಿಯೇ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ  ಭೂಮಿ ನೀಡಲು ಮುಂದಾದರು. ಆಗ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಪ್ರಶ್ನಿಸಿರಲಿಲ್ಲ. ಇದೆಲ್ಲ ನೋಡಿದಾಗ ದೊಡ್ಡ ಮಟ್ಟದ ಕಿಕ್‌ಬ್ಯಾಕ್ ಇದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಜಂಟಿ ಸದನ ಸಮಿತಿ ನಿರ್ಧರಿಸಲಿ’

‘ಖನಿಜ ಭೂಮಿ ನೀಡುವುದಕ್ಕೆ ತಡೆ ನೀಡಬೇಕು. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಬಾರದು. ಹೀಗಾಗಿ ಭೂಮಿ ನೀಡುವುದು ಹಾಗೂ ಹಣದ ದರವನ್ನು ನಿರ್ಧರಿಸುವುದನ್ನು ಶಾಸಕಾಂಗದ ಜಂಟಿ ಸದನ ಸಮಿತಿಯೇ ನಿರ್ಣಯಿಸಲಿ’ ಎಂದು ವಿಶ್ವನಾಥ್‌ ಹೇಳಿದರು. ‘ಮುಡಾಕ್ಕೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ. ಅದಕ್ಕೆ ₹ 5 ಕೋಟಿ ಖರ್ಚಾಗುತ್ತಿದೆ. ಜನರು ಅಲ್ಲಿಗೆ ಹೋಗಲಾಗುತ್ತಿಲ್ಲ. ಹಗರಣದ ವಿಚಾರಣೆಯನ್ನು ಏಕಸದಸ್ಯ ಆಯೋಗ ನಡೆಸುತ್ತಿದೆ. ಅದಕ್ಕೆ ಕುಮಾರಕೃಪದಿಂದ ನಿರ್ದೇಶನ ಬರುತ್ತಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT