ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು| ಗೊಂದಲ ಸೃಷ್ಟಿಸಲು ಎಚ್‌ಡಿಕೆ ಯತ್ನ: ಮಂಗಳಾ

‘ಕೌಟುಂಬಿಕ ಪಕ್ಷದಿಂದ ಬಿಜೆಪಿ ಕಲಿಯಬೇಕಿಲ್ಲ’
Last Updated 9 ಫೆಬ್ರುವರಿ 2023, 8:45 IST
ಅಕ್ಷರ ಗಾತ್ರ

ಮೈಸೂರು: ‘ಜೆಡಿಎಸ್‌ ಶಾಸಕಾಂಗ ‍ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಗೊಂದಲ ಸೃಷ್ಟಿಸಲು ಬಿಜೆಪಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್‌ ಕಿಡಿಕಾರಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರದ್ದು ಪಕ್ಷವೇ ಅಲ್ಲ. ಕುಟುಂಬಕ್ಕೆ ಸೀಮಿತವಾಗಿದೆ. ಹಿಂದೆ ಅಪ್ಪ–ಮಕ್ಕಳ ಪಕ್ಷವಾಗಿತ್ತು. ಈಗ ಸೊಸೆ– ಮೊಮ್ಮಕ್ಕಳದ್ದಾಗಿದೆ. ಬದ್ಧತೆಯೇ ಇಲ್ಲದವರು ನಮ್ಮ ‍ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಹೇಳಿದರು.

‘ಸಾಂದರ್ಭಿಕ ಸುಳ್ಳುಗಳನ್ನು ಹೇಳುತ್ತಾ ಬರುತ್ತಿರುವ ಕೌಟುಂಬಿಕ ಪಕ್ಷವದು’ ಎಂದು ಟೀಕಿಸಿದರು.

‘ಕಾಂಗ್ರೆಸ್‌ನಲ್ಲಿ ಒಳಜಗಳ ನಡೆಯುತ್ತಿದ್ದು, ಜನರು ಬಿಜೆಪಿ ಬೆಂಬಲಿಸುತ್ತಿದ್ದಾರೆ. ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಉತ್ತಮ ಕಾರ್ಯಕ್ರಮಗಳಿಂದಾಗಿ ಜನರು ನಮ್ಮ ಮೇಲೆ ಭರವಸೆ ಇಟ್ಟಿದ್ದಾರೆ. ಇದನ್ನು ಸಹಿಸಲಾಗದ ಆ ಪಕ್ಷದವರು ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದರು.

‘ಸಮಾಜದ ಎಲ್ಲ ವರ್ಗಗಳ ಸರ್ವತೋಮುಖ ಅಭಿವೃದ್ಧಿಯೇ‌ ನಮ್ಮ ಆಶಯ. ಚುನಾವಣೆಗೆ ಅಥವಾ ರಾಜಕೀಯಕ್ಕಾಗಿ ಮತದಾರರ ಓಲೈಕೆಗಾಗಿ ಯಾವುದೇ ಕಾರ್ಯಕ್ರಮವನ್ನೂ ನಾವು ಮಾಡುತ್ತಿಲ್ಲ. ರಾಜ್ಯದಾದ್ಯಂತ ವಾತಾವರಣ ನಮ್ಮ ಪರವಾಗಿದೆ. ಇತರ ಪಕ್ಷಗಳಂತೆ, ಸುಳ್ಳುಗಳನ್ನು ಹೇಳಿಕೊಂಡು ಚುನಾವಣೆಯಲ್ಲಿ ಗೆಲ್ಲಲಾಗುವುದಿಲ್ಲ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಚೆನ್ನಾಗಿ ತಯಾರಿ ನಡೆಯುತ್ತಿದೆ. ಮತಗಟ್ಟೆ ಸಮಿತಿ ರಚಿಸಿದ್ದೇವೆ. ಮೂವತ್ತು ಮತದಾರರಿಗೆ ಒಬ್ಬೊಬ್ಬ ಪ್ರಮುಖರನ್ನು ಜೋಡಿಸಲಾಗಿದೆ. ಪ್ರಚಾರ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ. ಮತಗಟ್ಟೆ ಗೆದ್ದರೆ ಎಲ್ಲವನ್ನೂ ಗೆದ್ದಂತೆ ಎಂಬ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದರು.

ಘಟಕದ ಸಹ ವಕ್ತಾರ ಡಾ.ಕೆ.ವಸಂತಕುಮಾರ್ ಮಾತನಾಡಿ, ‘ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನವರು ಪಕ್ಷದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ನಮ್ಮ ಪಕ್ಷ ನಿರ್ಧರಿಸುತ್ತದೆ. ಆ ಬಗ್ಗೆ ಹೇಳುವುದಕ್ಕೆ ಕುಮಾರಸ್ವಾಮಿ ಯಾರು? ಎಲ್ಲ ಸಮಾಜವನ್ನೂ ಸಮಾನವಾಗಿ ನೋಡುತ್ತಿರುವ ಪಕ್ಷ ನಮ್ಮದು. ನಮ್ಮ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಇಂತಹ ಗಿಮಿಕ್ ರಾಜಕಾರಣವನ್ನು ಬಿಡಬೇಕು’ ಎಂದು ಹೇಳಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮುಖಂಡ ಗಿರಿಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT