ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿನಾರಿನಲ್ಲಿ ವಲಸೆ ಹಕ್ಕಿಗಳು ನೂರಾರು!

ಪಟ್ಟೆತಲೆ ಹೆಬ್ಬಾತುಗಳ ಕಲರವ l ಆಹಾರಕ್ಕಾಗಿ ಹಿಮಾಲಯ ದಾಟಿ ಬಂದ ಅತಿಥಿಗಳು
Last Updated 18 ಜನವರಿ 2023, 8:33 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ತಾಲ್ಲೂಕಿನ ಹದಿನಾರು ಕೆರೆಯಲ್ಲಿ ‘ಪಟ್ಟೆತಲೆ ಹೆಬ್ಬಾತು’ಗಳ ಕಲರವ ಆರಂಭವಾಗಿದೆ.

4 ರಿಂದ 5 ಕಿ.ಮೀ ವಿಸ್ತಾರ ವಾಗಿರುವ ಹದಿನಾರು ಕೆರೆಯಲ್ಲಿ ಇದೀಗ ಐನೂರಕ್ಕೂ ಹೆಚ್ಚು ಪಟ್ಟೆತಲೆ ಹೆಬ್ಬಾತುಗಳು ಕಾಣಸಿಗುತ್ತವೆ. ಬಿಳಿ ತಲೆಯ ಮೇಲೆರಡು ಕಪ್ಪು ಪಟ್ಟೆ, ಹಳದಿ ಕೊಕ್ಕು, ಬೂದು ಬಣ್ಣದ ಕೊರಳು– ರೆಕ್ಕೆಗಳನ್ನು ಹೊಂದಿರುವ ಈ ಪಟ್ಟೆ ತಲೆ ಹೆಬ್ಬಾತುಗಳು ಇತರ ವಲಸೆ ಹಕ್ಕಿಗಳು ಹಾಗೂ ಬಾತುಗಳಲ್ಲಿಯೇ ದೊಡ್ಡವು.

ಮಂಗೋಲಿಯಾ ಹಾಗೂ ರಷ್ಯಾದ ಬೈಕಲ್‌ ಸರೋವರದ ದಕ್ಷಿಣದ ಭಾಗ ಅವುಗಳ ಮೂಲ ನೆಲೆ. ಸೆಪ್ಟೆಂಬರ್‌ನಿಂದಲೇ ಅಲ್ಲಿ ಚಳಿ ಆರಂಭವಾಗಿ ಹಿಮ ಆವರಿಸುತ್ತಿದ್ದಂತೆ ಕ್ರಮೇಣ ಆಹಾರ ಲಭ್ಯತೆಯು ಕಡಿಮೆಯಾಗುತ್ತದೆ. ಅದಕ್ಕಾಗಿ ಶತಮಾನಗಳಿಂದಲೂ ಈ ಹಕ್ಕಿಗಳು ಕೈಗೊಂಡಿದ್ದು ವಲಸೆ!

ವಲಸೆ ಹಾದಿಯಲ್ಲಿ ನಿರ್ದಿಷ್ಟ ಕೆರೆ ಆಯ್ದುಕೊಂಡು ಹಗಲಿನ ವೇಳೆ ಕೆರೆಗಳ ಮಧ್ಯೆ ಈಜುವ ಅವು, ಸಂಜೆ ವೇಳೆ ಆಹಾರ ಹುಡುಕಿ ಹೊರಡುತ್ತವೆ. ಹಿಮಾಲಯ ದಾಟಿ ಬಂದ ಈ ಹಕ್ಕಿಗಳ ಆಹಾರ ಮೀನಲ್ಲ. ರೈತರು ಬೆಳೆದ ಭತ್ತ!. ಮೈಸೂರು ಸೀಮೆಯಲ್ಲಿ ಭತ್ತದ ಕಟಾವು ಮುಗಿದಿದ್ದು, ಗದ್ದೆಯಲ್ಲಿ ಚೆಲ್ಲಿದ ಭತ್ತವನ್ನು ತಿನ್ನುತ್ತಿವೆ.

ಸುಗ್ಗಿಯ ವೇಳೆ ದೇಶಕ್ಕೆ ಆಗಮಿಸುವ ಇವು, ಉತ್ತರ ಭಾರತದಲ್ಲಿ ಗೋಧಿ ಹಾಗೂ ದಕ್ಷಿಣದಲ್ಲಿ ಭತ್ತವನ್ನು ತಿನ್ನುತ್ತವೆ. ಕೆರೆಗಳಲ್ಲಿನ ಜಲಸಸ್ಯಗಳೂ ಅವುಗಳ ಆಹಾರವಾಗಿದೆ. ಭತ್ತದ ಗದ್ದೆಯ ಕೂಳುಗಳನ್ನು ಹೆಕ್ಕಿ ತಿನ್ನುವುದಲ್ಲದೆ ಗೊಬ್ಬರವನ್ನು ನೀಡುವ ರೈತ ಸ್ನೇಹಿಯಾಗಿವೆ.

ಸಂತಾನೋತ್ಪತ್ತಿ ಮಾಡುವುದಿಲ್ಲ: ‘ಪಟ್ಟೆತಲೆ ಹೆಬ್ಬಾತುಗಳು ಇಲ್ಲಿ ಸಂತಾನೋತ್ಪತ್ತಿ ನಡೆಸುವುದಿಲ್ಲ. ಮಂಗೋಲಿಯಾ ಭಾಗ ಹಿಮದಿಂದ ಮುಚ್ಚುವುದರಿಂದ ಭಾರತಕ್ಕೆ ಆಗಮಿಸುತ್ತವೆ. ಫೆಬ್ರುವರಿ ವೇಳೆಗೆ ವಾಪಸಾಗುವ ಅವು ಮೂಲ ಆವಾಸ
ಸ್ಥಳದಲ್ಲಿಯೇ ಮೊಟ್ಟೆಗಳನ್ನು ಇಡುತ್ತವೆ’ ಎಂದು ಪರಿಸರ ತಜ್ಞ ಕೆ.ಮನು ಹೇಳಿದರು.

ಎತ್ತರದಲ್ಲಿ ಹಾರುವ ಹಕ್ಕಿ: ‘ಸಮುದ್ರಮಟ್ಟದಿಂದ ಸರಾಸರಿ 6 ಸಾವಿರ ಮೀಟರ್‌ ಎತ್ತರವಿರುವ ಹಿಮಾಲಯ ದಾಟಿ ಬರುವ ಪಟ್ಟೆತಲೆ ಹೆಬ್ಬಾತುಗಳು, ಪರ್ವತದ ಇಳಿಜಾರು ಹಾಗೂ ಎತ್ತರಕ್ಕನುಗುಣವಾಗಿ ಅನುಸರಿಸಿ ಹಾರುತ್ತವೆ. ಭಾರತದಲ್ಲಿ ನಿರ್ದಿಷ್ಟ ಕೆರೆಗಳನ್ನು ಗುರುತು ಮಾಡಿಕೊಂಡಿರುವ ಇವು ವರ್ಷದಲ್ಲೊಮ್ಮೆ ತಪ್ಪದೇ ತಮ್ಮ ನೆಚ್ಚಿನ ಕೆರೆಗಳಿಗೆ ಬರುತ್ತವೆ’ ಎಂದು ಮನು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT