ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಚುಂಚನಗಿರಿ ಶಾಖಾ ಮಠ ಕಟ್ಟಡ ಉದ್ಘಾಟನೆ 10, 11ಕ್ಕೆ

Published 8 ಸೆಪ್ಟೆಂಬರ್ 2023, 5:30 IST
Last Updated 8 ಸೆಪ್ಟೆಂಬರ್ 2023, 5:30 IST
ಅಕ್ಷರ ಗಾತ್ರ

ಮೈಸೂರು: ಆದಿಚುಂಚನಗಿರಿ ಪೀಠದ ಮೈಸೂರು ಶಾಖಾ ಮಠದ ನೂತನ ಕಟ್ಟಡ, ಬಿಜಿಎಸ್‌ ಸಾಂಸ್ಕೃತಿಕ ಭವನ ಹಾಗೂ ಉಚಿತ ವಿದ್ಯಾರ್ಥಿ ನಿಲಯದ ಲೋಕಾರ್ಪಣೆ ಕಾರ್ಯಕ್ರಮವು ಸೆ.10 ಹಾಗೂ 11ರಂದು ನಡೆಯಲಿದೆ ಎಂದು ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಹೆಬ್ಬಾಳು ಪ್ರದೇಶದ ಲಕ್ಷ್ಮೀಕಾಂತ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಈ ಕಟ್ಟಡಗಳನ್ನು ನಿರ್ಮಿಸಲಾಗಿದೆ. 10ರಂದು ಸಂಜೆ 7ಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಮ್ಮುಖದಲ್ಲಿ ಲೋಕಾರ್ಪಣೆ ಪೂರ್ವ ಕಾರ್ಯಕ್ರಮ ನಡೆಯಲಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ. ದೇವೇಗೌಡ, ಕೆ.ಹರೀಶ್ ಗೌಡ, ಮೇಯರ್ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸೆ.11ರಂದು ಬೆಳಿಗ್ಗೆ 11ಕ್ಕೆ ಲೋಕಾರ್ಪಣೆ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಬಿಜಿಎಸ್ ಸಾಂಸ್ಕೃತಿಕ ಭವನವನ್ನು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಉಚಿತ ವಿದ್ಯಾರ್ಥಿನಿಲಯ ಕಟ್ಟಡವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜಿಎಸ್ ಅತಿಥಿಗೃಹ ಕಟ್ಟಡವನ್ನು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭ ನಾಲ್ಕು ಕೃತಿಗಳ ಬಿಡುಗಡೆಯೂ ಆಗಲಿದೆ. ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ’ ಎಂದರು.

ಮೆರವಣಿಗೆ: ‘ಕಾರ್ಯಕ್ರಮದ ಅಂಗವಾಗಿ ಸೆ.10ರಂದು ಆದಿಚುಂಚನಗಿರಿ ಸನ್ನಿಧಿಯಿಂದ ಮೈಸೂರಿನವರೆಗೆ ಭೈರವಜ್ಯೋತಿ ಯಾತ್ರೆ ನಡೆಯಲಿದೆ. ಬೆಳಿಗ್ಗೆ 6ಕ್ಕೆ ಆದಿಚುಂಚನಗಿರಿಯಿಂದ ಹೊರಟು ಬೆಳಿಗ್ಗೆ 11ಕ್ಕೆ ಮೈಸೂರಿನ ರಿಂಗ್‌ ರಸ್ತೆಯಲ್ಲಿರುವ ದೇವೇಗೌಡ ವೃತ್ತ ತಲುಪಲಿದೆ. ಅಲ್ಲಿಂದ ನಗರದ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಲಿದೆ. ಕಾರ್ಯಕ್ರಮದ ಅಂಗವಾಗಿ ಎರಡೂ ದಿನದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT