ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಭಾರತೀಯ ಭಾಷಾ ಪರಿವಾರ್‌ ಪೋರ್ಟಲ್‌ಗೆ ಚಾಲನೆ

Published 28 ಮೇ 2024, 14:36 IST
Last Updated 28 ಮೇ 2024, 14:36 IST
ಅಕ್ಷರ ಗಾತ್ರ

ಮೈಸೂರು: ದೇಶದ ವಿವಿಧ ಭಾಷೆಗಳ ಸಮಗ್ರ ಮಾಹಿತಿಯುಳ್ಳ, ಪರಸ್ಪರ ಅಭಿವೃದ್ಧಿಗೆ ಪೂರಕವಾದ ಡಿಜಿಟಲ್‌ ವೇದಿಕೆಯಾಗಿ ‘ಭಾರತೀಯ ಭಾಷಾ ಪರಿವಾರ್‌’ ಪೋರ್ಟಲ್‌ಗೆ ಮಂಗಳವಾರ ಚಾಲನೆ ದೊರಕಿತು.

ನಗರದ ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್‌) ಆವರಣದಲ್ಲಿ ನಡೆದ ‘ಭಾರತೀಯ ಭಾಷೆಗಳು ಮತ್ತು ಒಂದು ಭಾಷಿಕ ಪ್ರದೇಶವಾಗಿ ಭಾರತ’ ಕುರಿತ ಸಮ್ಮೇಳನದಲ್ಲಿ ಸಂಸ್ಥೆಯ ನಿರ್ದೇಶಕ ಪ್ರೊ.ಶೈಲೇಂದ್ರ ಕುಮಾರ್‌ ಪೋರ್ಟಲ್‌ಗೆ ಚಾಲನೆ ನೀಡಿ, ‘ಸಾಂವಿಧಾನಿಕ ಸ್ಥಾನ–ಮಾನ ಹೊಂದಿದ ದೇಶದ 22 ಭಾಷೆಗಳ ಬಗ್ಗೆ ಪೋರ್ಟಲ್‌ನಲ್ಲಿ ಮಾಹಿತಿ ನೀಡಲಾಗಿದೆ. ಸಂಸ್ಕೃತಿ, ವಂಶಾವಳಿ, ಸಮಾಜಶಾಸ್ತ್ರ ಹಾಗೂ ಪುರಾತತ್ವ ಪುರಾವೆಗಳೊಂದಿಗೆ ಭಾಷೆಗಳ ವಿವರಣೆ ಇರುವುದು ವಿಶೇಷ’ ಎಂದರು.

‘ಭಾಷೆ ಬಳಕೆಯ ಪ್ರಾಯೋಗಿಕ ಗುಣಲಕ್ಷಣಗಳು ಮತ್ತು ಭಾಷಾವಾರು ಪ್ರದೇಶಗಳ ವೈಶಿಷ್ಟ್ಯವನ್ನು ಪೋರ್ಟಲ್‌ನಲ್ಲಿ ವಿವರಿಸಲಾಗಿದೆ.  ನೂತನ ಶಿಕ್ಷಣ ನೀತಿಯ ಯಶಸ್ಸಿಗೆ, ವಿವಿಧ ಭಾಷೆಗಳ ನಡುವಿನ ಅಧ್ಯಯನಕ್ಕೂ ಸಹಕಾರಿಯಾಗಲಿದೆ. ನಮ್ಮ ರಾಜ್ಯದ ಭಾಷೆಯಲ್ಲಿನ ಪದ, ವಾಕ್ಯಗಳನ್ನು ದೇಶದ ಯಾವುದೇ ರಾಜ್ಯದ ಭಾಷೆಯಲ್ಲಿ ಹೇಗೆ ಉಚ್ಚರಿಸಲಾಗುತ್ತದೆ ಎಂಬ ಮಾಹಿತಿಯೊಂದಿಗೆ, ಆಯಾ ಭಾಷಿಕರ ಪ್ರದೇಶದ ಮಾಹಿತಿಯನ್ನೂ ಪಡೆಯಬಹುದು’ ಎಂದರು.

‘ಪೋರ್ಟಲ್‌ನಲ್ಲಿ ನಮ್ಮ ದೇಶದ ಮ್ಯಾಪ್‌ ತೆರೆದುಕೊಳ್ಳಲಿದ್ದು, ನೀವು ಬಯಸುವ, ನಿಮ್ಮ ಭಾಷೆಯ ಪದವನ್ನು ಯಾವುದೇ ರಾಜ್ಯದ ಮೇಲೆ ಕ್ಲಿಕ್‌ ಮಾಡಿ, ಅಲ್ಲಿನ ಭಾಷೆಯಲ್ಲಿ ಅದರ ಉಚ್ಚಾರಣೆ, ವ್ಯಾಕರಣ, ವಾಕ್ಯ ರಚನೆಯನ್ನು ಅರಿತುಕೊಳ್ಳಬಹುದು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಉಪಯೋಗವಾಗಲಿದ್ದು, ನೂತನ ಭಾಷೆ ಕಲಿಯುವವರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು.

‘ಸಿಐಐಎಲ್‌ ಸಿಬ್ಬಂದಿ ಸುಮಾರು 6 ತಿಂಗಳ ಕಾಲ ಯೋಜನೆಗೆ ಶ್ರಮಿಸಿದ್ದಾರೆ. ಉನ್ನತ ಭಾಷಾ ತಜ್ಞರು ತೊಡಗಿಸಿಕೊಂಡಿದ್ದಾರೆ. ಹಂತ ಹಂತವಾಗಿ ದೇಶದ ಎಲ್ಲ ಭಾಷೆಗಳ ಮಾಹಿತಿಯನ್ನು ಇಲ್ಲಿ ಒದಗಿಸುವ ಮೂಲಕ ಭಾರತೀಯ ಭಾಷೆಗಳ ‌ಕಣಜವನ್ನಾಗಿ ಮಾರ್ಪಡಿಸಲಾಗುವುದು’ ಎಂದರು. ಹೆಚ್ಚಿನ ಮಾಹಿತಿಗೆ: https://parivar.ciil.org

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT