ತಲಕಾಡು: ‘ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಜನರ ಬದುಕಿನಲ್ಲಿ ಬದಲಾವಣೆ ಉಂಟಾಗಿದೆ’ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ತಲಕಾಡಿನಲ್ಲಿ ₹ 65 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ನೂತನ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಕಲ್ಯಾಣದಲ್ಲಿ ಇನ್ನು ಹೆಚ್ಚಿನ ಬದಲಾವಣೆ ತರುವುದು ಗ್ಯಾರಂಟಿ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾದ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಜನರ ಹಿತ ಕಾಪಾಡುವಲ್ಲಿ ನುಡಿದಂತೆ ನಡೆದ ಏಕೈಕ ಸರ್ಕಾರ ಕಾಂಗ್ರೆಸ್’ ಎಂದು ಮಚ್ಚುಗೆ ವ್ಯಕ್ತಪಡಿಸಿದರು.
‘ತಲಕಾಡು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಇಲ್ಲಿಯೇ ನಡೆಸಲು ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿರುವೆ. ಅಭಿವೃದ್ಧಿಗೆ ಬೇಕಾದಂತಹ ಸಮಗ್ರ ಮಾಹಿತಿಯನ್ನು ಗ್ರಾಮ ಪಂಚಾಯತಿಯ ಕಾರ್ಯಾಲಯ ಹಾಗೂ ಸದಸ್ಯರು ತಯಾರು ಮಾಡಿಕೊಂಡು ಸಭೆಯಲ್ಲಿ ಹಾಜರುಪಡಿಸಬೇಕು’ ಎಂದರು
ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಪಯ್ಯ ಮಾತನಾಡಿ, ‘ನರೇಗಾ ಯೋಜನೆ, 15ನೇ ಹಣಕಾಸು, ಸಂಸದರು ಮತ್ತು ಶಾಸಕರ ನಿಧಿಯಿಂದ ಹಣ ತಂದು ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದಲ್ಲಿ ತಲಕಾಡಿನಲ್ಲಿ ಸುಂದರವಾದ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಇದು ನನಗೆ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರು ಉತ್ತಮ ಆಶಾಭಾವನೆಯನ್ನು ಹೊಂದಿ ಸುಂದರ ತಲಕಾಡು ನಿರ್ಮಿಸಲು ಪ್ರಯತ್ನಿಸೋಣ’ ಎಂದರು.
ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಇಒ ಕೃಷ್ಣ, ಡಿವೈಎಸ್ಪಿ ಗೋವಿಂದ ರಾಜು, ಬಿಇಒ ಶೋಭಾ, ಸುನಿತಾ ವೀರಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ಗೌರಮ್ಮ, ಕೆ.ಪಾರ್ವತಿ, ಶಾಂತರಾಜು, ಉಮೇಶ್, ಚಿಕ್ಕ ಮಾದ ನಾಯಕ, ಮಾದೇವಿ, ಗೌರಮ್ಮ, ಸುನಿತಾ, ಬಿ.ಎಚ್.ಕವಿತಾ, ನಾಗರಾಜ ಮೂರ್ತಿ, ಜಗದೀಶ್, ನಾಗೇಂದ್ರ ಕುಮಾರ್, ಸುಂದರ್ ನಾಯಕ್, ಕುಕ್ಕುರ್ ಗಣೇಶ್, ಬೆಟ್ಟಳ್ಳಿ ನಾಗರಾಜು, ಪರಮೇಶ್, ನರಸಿಂಹ ನಾಯಕ, ಬುಲೆಟ್ ಶ್ರೀನಿವಾಸ್, ಪಿಡಿಒ ಶ್ರೀನಿವಾಸ್ ಮೂರ್ತಿ, ಕಾರ್ಯದರ್ಶಿ ರಾಜಶೇಖರ್ ಶೆಟ್ಟಿ, ಲೆಕ್ಕಸಹಾಯಕಿ ನಾಗರತ್ನ, ಪ್ರಭು ನಾಗಯ್ಯ ಇದ್ದರು.
ಗ್ಯಾರಂಟಿ ಯೋಜನೆಗಳಿಂದ ಜನರ ಬದುಕಿನಲ್ಲಿ ಬದಲಾವಣೆ ನುಡಿದಂತೆ ನಡೆದ ಏಕೈಕ ಸರ್ಕಾರ ಕಾಂಗ್ರೆಸ್ ತಲಕಾಡಿನಲ್ಲಿ ಅಧಿಕಾರಿಗಳ ಸಭೆ ನಡೆಸಲು ಚರ್ಚೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.