ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿವಾಸಿಗಳ ಏಳಿಗೆ ನನ್ನ ಗುರಿ

ಹುಣಸೂರು ಕ್ಷೇತ್ರದ ಶಾಸಕ ಎಚ್‌.ವಿಶ್ವನಾಥ್‌ ಮನದಾಳ
Last Updated 20 ಜೂನ್ 2018, 10:50 IST
ಅಕ್ಷರ ಗಾತ್ರ

ಮೈಸೂರು: ‘ಆದಿವಾಸಿಗಳಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆ ಆಗುತ್ತಿದೆ. ಆದರೆ, ಈ ಹಣ ಅವರನ್ನು ತಲುಪುತ್ತಿಲ್ಲ. ಆದಿವಾಸಿಗಳ ಏಳಿಗೆಗೆ ಒತ್ತು ನೀಡಿ ಕೆಲಸ ಮಾಡುತ್ತೇನೆ. ಮನೆ ನಿರ್ಮಾಣ, ಶಿಕ್ಷಣ ಕೊಡಿಸುವುದು ಸೇರಿದಂತೆ ಸರ್ಕಾರಿ ಕಾರ್ಯಕ್ರಮ ತಲುಸಲು ಪ್ರಯತ್ನಿಸುತ್ತೇನೆ’ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಈ ಮಾತು ಹೇಳಿದ್ದು ಹುಣಸೂರು ಕ್ಷೇತ್ರದ ನೂತನ ಶಾಸಕ ಅಡಗೂರು ಎಚ್‌.ವಿಶ್ವನಾಥ್‌.

ತಮ್ಮ ರಾಜಕೀಯ ಗುರು ಡಿ.ದೇವರಾಜ ಅರಸು ಪ್ರತಿನಿಧಿಸಿದ್ದ ಹುಣಸೂರು ಕ್ಷೇತ್ರದಲ್ಲಿ ಈ ಬಾರಿ ವಿಶ್ವನಾಥ್‌ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಇನ್ನಿತರ ವಿಚಾರಗಳನ್ನು ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.

ರಾಜಕೀಯ ಪುನರ್ಜನ್ಮ ಲಭಿಸಿದೆಯೇ?

ಹೌದು, 14 ವರ್ಷಗಳ ಬಳಿಕ ವಿಧಾನಸಭೆ ಪ್ರವೇಶಿಸಿದ್ದೇನೆ. ರಾಮ–ಸೀತೆ ವನವಾಸದಂತೆ ನನ್ನ ರಾಜಕೀಯ ಬದುಕು. ಆದರೆ, ಜನರೊಂದಿಗೆ ಸದಾ ಸಂಪರ್ಕದಲ್ಲಿದ್ದೆ. ಬಳಿ ಬಂದವರಿಗೆ ಸಹಾಯ ಮಾಡಿದ್ದೇನೆ. ಮಂತ್ರಿಗಳು, ಅಧಿಕಾರಿಗಳನ್ನು ಭೇಟಿ ಮಾಡಿಸಿದ್ದೇನೆ. ‘ವಿಶ್ವನಾಥ್‌ ಅವರ ರಾಜಕೀಯ ಕಥೆ ಮುಗಿಯಿತು’ ಎಂದು ಬಹುತೇಕ ಮಂದಿ ನನ್ನನ್ನು ಬದಿಗೆ ಸರಿಸಿದ್ದರು. ಕಾಂಗ್ರೆಸ್‌ನವರು ಅದರಲ್ಲೂ ಸಿದ್ದರಾಮಯ್ಯ ನನ್ನನ್ನು ಕಡೆಗಣಿಸಿದ್ದರು. ಕಾಂಗ್ರೆಸ್‌ನಿಂದ ಕಿತ್ತು ಹಾಕಲು ಪ್ರಯತ್ನ ನಡೆದಿತ್ತು. ಈ ಸಂದರ್ಭದಲ್ಲಿ ನನ್ನ ಕೈಹಿಡಿದಿದ್ದು ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ.

ನಿಮ್ಮ ಗೆಲುವಿಗೆ ಕಾರಣಗಳೇನು?

ನನ್ನದು 40 ವರ್ಷಗಳ ರಾಜಕೀಯ ಅನುಭವ. ಜಿಲ್ಲೆಯಲ್ಲಿ ಜನರೊಂದಿಗೆ ಉತ್ತಮ ಒಡನಾಟವಿದೆ. 1978ರಲ್ಲೇ ವಿಧಾನಸಭೆ ಪ್ರವೇಶಿಸಿದವನು. ಹಿಂದೆ ಸಚಿವ, ಶಾಸಕ, ಸಂಸದನಾಗಿ ಮಾಡಿದ ಕೆಲಸಗಳು ಕೈಹಿಡಿದಿವೆ. ಜೊತೆಗೆ ಈ ಬಾರಿ ರಾಜಕೀಯದಲ್ಲಿ ಉಂಟಾದ ಕೆಲ ಪಲ್ಲಟಗಳು ಗೆಲುವಿನತ್ತ ಮುನ್ನಡೆಸಿದವು. ಬಿಜೆಪಿ, ಆರ್‌ಎಸ್‌ಎಸ್‌ನವರೂ ನನ್ನ ಗೆಲುವಿಗೆ ಕಾರಣರಾದರು.

ಚುನಾವಣಾ ಪ್ರಚಾರದ ವೇಳೆ ಜನರಿಗೆ ಏನು ಭರವಸೆ ನೀಡಿದ್ದೀರಿ?

ಅಭಿವೃದ್ಧಿ ಎರಡನೇ ವಿಚಾರ. ಮೊದಲನೇ ವಿಚಾರ ಹುಣಸೂರು ತಾಲ್ಲೂಕಿನಲ್ಲಿ ಶಾಂತಿ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಬೇಕಿದೆ. ಆಗ ಮಾತ್ರ ಅಭಿವೃದ್ಧಿಯತ್ತ ಗಮನ ಹರಿಸಬಹುದು. ಇದೇ ವಿಚಾರವನ್ನು ಪ್ರಚಾರದ ವೇಳೆ ಹೇಳಿದ್ದೆ. ಹನುಮ ಜಯಂತಿ ವಿಚಾರವಾಗಿ ತಾಲ್ಲೂಕಿನಲ್ಲಿ ವಿವಾದ ಸೃಷ್ಟಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗಲೂ ಕ್ಷೇತ್ರದಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಯುವಕರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಕೆಲವರು ಜೈಲಿನಲ್ಲಿದ್ದು ಬಂದಿದ್ದಾರೆ. ಯಾರ ಮೇಲೆ ಪ್ರಕರಣಗಳು ಇವೆ ಎಂಬುದನ್ನು ಪರಿಶೀಲಿಸಿದ್ದೇನೆ. ಈ ವಿಚಾರವಾಗಿ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ.

ಸಚಿವ ಸ್ಥಾನ ಕೈತಪ್ಪಲು ಕಾರಣ?

ರಾಜಕೀಯದಲ್ಲಿ ಅದೃಷ್ಟವೂ ಇರಬೇಕು. ಸಚಿವ ಸ್ಥಾನ ನೀಡದ್ದಕ್ಕೆ ನನಗೆ ಯಾವುದೇ ಅಸಮಾಧಾನ, ಬೇಸರ ಇಲ್ಲ. ನನ್ನ ಹಿರಿತನ, ಅನುಭವವನ್ನು ಮುಖ್ಯಮಂತ್ರಿಯವರು ಬಳಸಿಕೊಳ್ಳಬಹುದು. ಅವಕಾಶ ನೀಡಿದರೆ ಚೆನ್ನಾಗಿ ಕೆಲಸ ಮಾಡಲು ಸಿದ್ಧ. ನಾನೇ ಮೈಮೇಲೆ ಬಿದ್ದು ಮಂತ್ರಿ ಸ್ಥಾನ ಕೇಳುವುದಿಲ್ಲ.

ನಿಮ್ಮ ಕನಸು, ಮುಂದಿರುವ ಸವಾಲುಗಳು?

ಕ್ಷೇತ್ರದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸುವುದು ನನ್ನ ಕನಸು. ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸುವುದು, ಕೆ.ಆರ್‌.ನಗರ ತಾಲ್ಲೂಕಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನರ್‌ ಆರಂಭಿಸುವುದು ನನ್ನ ಮುಂದಿರುವ ಸವಾಲುಗಳು. ನನ್ನ ಕ್ಷೇತ್ರಕ್ಕೂ ಸಂಬಂಧಿಸಿರುವ ಈ ಸಕ್ಕರೆ ಕಾರ್ಖಾನೆ ಸಂಬಂಧ ಸಚಿವ ಸಾ.ರಾ.ಮಹೇಶ್‌ ಜೊತೆ ಮಾತನಾಡಿದ್ದೇನೆ. ನೀರಾವರಿ ಯೋಜನೆಗಳನ್ನು ತ್ವರಿಗತಿಯಲ್ಲಿ ಪೂರೈಸಲು ಒತ್ತು ನೀಡುತ್ತೇನೆ.

ಕ್ಷೇತ್ರದ ಜನರೊಂದಿಗೆ ನಿಮ್ಮ ಸಂಪರ್ಕ ಹೇಗಿರಲಿದೆ?

ಹಿಂದೆ ಶಿಕ್ಷಣ ಸಚಿವನಾಗಿದ್ದಾಗ ‘ಸಮುದಾಯದತ್ತ ಶಾಲೆ’ ಎಂಬ ಪರಿಕಲ್ಪನೆ ಶುರು ಮಾಡಿದ್ದೆ. ತಿಂಗಳಿಗೆ ಒಂದು ದಿನ ಈ ಕಾರ್ಯಕ್ರಮ ನಡೆಯುತಿತ್ತು. ಸಮುದಾಯ ಹಾಗೂ ಶಾಲೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವಂಥ ಕಾರ್ಯಕ್ರಮ. ಮಂತ್ರಿ, ಆಯುಕ್ತರು, ಅಧಿಕಾರಿಗಳು, ಶಿಕ್ಷಕರು, ಪೋಷಕರು, ಮಕ್ಕಳು ಒಂದೆಡೆ ಸೇರುತ್ತಿದ್ದರು. ಜನಪ್ರತಿನಿಧಿಗಳು ಇರುತ್ತಿದ್ದರು. ಒಂದು ರಾತ್ರಿ ವಾಸ್ತವ್ಯ ಮಾಡಲಾಗುತಿತ್ತು. ವಿದ್ಯಾರ್ಥಿಗಳ ಬಗ್ಗೆ ಚರ್ಚೆ ನಡೆಯುತಿತ್ತು. ನಾನು ಮೊದಲಿನಿಂದಲೂ ಜನಸ್ನೇಹಿ. ಜನರ ಸಹಾಯಕ್ಕೆ ಸದಾ ಸಿದ್ಧ.

ಜಿಲ್ಲಾ ಪಂಚಾಯಿತಿ ಹನಗೋಡು ಕ್ಷೇತ್ರದಲ್ಲಿ ಜೆಡಿಎಸ್‌ ಸೋಲು ಕಂಡಿದೆಯಲ್ಲ?

ಜೆಡಿಎಸ್‌ ಪಕ್ಷದವರು ಬಿಜೆಪಿ ಜೊತೆ ಕೈಜೋಡಿಸಬಹುದು ಎಂಬ ವದಂತಿ ಹುಣಸೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಮೇಲೆ ತುಸು ಪರಿಣಾಮ ಬೀರಿತ್ತು. ಆದರೆ, ಜೆಡಿಎಸ್‌–ಕಾಂಗ್ರೆಸ್‌ ಕೈಜೋಡಿಸಿ ಸರ್ಕಾರ ರಚಿಸಿದ್ದು ಹನಗೋಡು ಕ್ಷೇತ್ರದಲ್ಲಿ ತಿರುಗೇಟು ನೀಡಿದೆ.

ಎಚ್‌.ವಿಶ್ವನಾಥ್‌ ಕುರಿತು…

ಮೈಸೂರು: ಮೈಸೂರಿನಲ್ಲಿ ವಕೀಲಿಕೆ ಮಾಡಿಕೊಂಡಿದ್ದ ಕೆ.ಆರ್‌.ನಗರ ತಾಲ್ಲೂಕಿನ ಅಡಗೂರಿನ ಎಚ್‌.ವಿಶ್ವನಾಥ್‌ ಅವರನ್ನು 70ರ ದಶಕದಲ್ಲಿ ಗುರುತಿಸಿ ರಾಜಕೀಯಕ್ಕೆ ಕರೆತಂದಿದ್ದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು. ಕೆ.ಆರ್‌.ನಗರ ಕ್ಷೇತ್ರದಲ್ಲಿ 1978ರಿಂದ 2008ರವರೆಗೆ ಸತತ ಎಂಟು ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ವಿಶೇಷ. 1978, 1989, 1999ರಲ್ಲಿ ಗೆಲುವು ಸಾಧಿಸಿದ್ದರು. 1983, 1985, 1994, 2004, 2008ರಲ್ಲಿ ಪರಾಭವಗೊಂಡಿದ್ದರು. 2009ರಲ್ಲಿ ಲೋಕಸಭೆ ಪ್ರವೇಶಿಸಿದ್ದ ಅವರು, 2014ರಲ್ಲಿ ಪ್ರತಾಪಸಿಂಹ ಎದುರು ಸೋಲು ಕಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಸಚಿವ, ಅರಣ್ಯ ಸಚಿವ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ದೀರ್ಘ ಕಾಲದ ಗೆಳೆಯ ಸಿದ್ದರಾಮಯ್ಯ ಜೊತೆ ಮುನಿಸಿಕೊಂಡು 2017ರಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದರು. ಕ್ಷೇತ್ರವನ್ನೂ ಬದಲಾಯಿಸಿ ಮೊದಲ ಬಾರಿ ಹುಣಸೂರಿನಿಂದ ಗೆದ್ದಿದ್ದಾರೆ.

ಕ್ಷೇತ್ರದ ಮುಖ್ಯ ಸಮಸ್ಯೆ ಏನು?

ಮೈಸೂರು: ನೀರಾವರಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳದಿರುವುದು ಹುಣಸೂರು ಕ್ಷೇತ್ರವನ್ನು ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆ. ಕೆಲವೊಂದು ಯೋಜನೆಗಳು ಅರ್ಧಕ್ಕೆ ನಿಂತು ಹೋಗಿದ್ದರೆ, ಇನ್ನು ಕೆಲ ಯೋಜನೆಗಳಿಗೆ ಅನುದಾನವೇ ಬಿಡುಗಡೆಯಾಗಿಲ್ಲ.

ಲಕ್ಷ್ಮಣತೀರ್ಥ ನದಿ ಶುದ್ಧೀಕರಣ ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ಗ್ರಾಮೀಣ ಪ್ರದೇಶದ ಕೆಲ ರಸ್ತೆಗಳು ಇಂದಿಗೂ ಟಾರ್‌ ಕಂಡಿಲ್ಲ. ನಾಗಾಪುರ ಆದಿವಾಸಿ ಗಿರಿಜನರು ಅರಣ್ಯದಿಂದ ಹೊರ ಬಂದು ಹಲವು ವರ್ಷಗಳು ಕಳೆದಿದ್ದರೂ ಫಲಾನುಭವಿಗಳಿಗೆ ಅಸಲಿ ಪಹಣಿ ಲಭಿಸಿಲ್ಲ. ಹಾಡಿಗಳಲ್ಲಿ ಹಲವು ಸಮಸ್ಯೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT