ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

MUDA Scam | ಮುಡಾ ಆಯುಕ್ತರ ನಿವಾಸದ ಡಿವಿಆರ್ ನಾಪತ್ತೆ?

ಹಗರಣ: ಸಾಕ್ಷ್ಯ ನಾಶಕ್ಕೆ ಯತ್ನದ ಆರೋಪ
Published : 10 ಸೆಪ್ಟೆಂಬರ್ 2024, 23:50 IST
Last Updated : 10 ಸೆಪ್ಟೆಂಬರ್ 2024, 23:50 IST
ಫಾಲೋ ಮಾಡಿ
Comments

ಮೈಸೂರು: ಇಲ್ಲಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರ ಅಧಿಕೃತ ನಿವಾಸದಲ್ಲಿನ ಸಿಸಿಟಿವಿ ಕ್ಯಾಮೆರಾ ಹಾಗೂ ಅದರ ಡಿವಿಆರ್‌ ನಾಪತ್ತೆಯಾಗಿದೆ ಎನ್ನಲಾಗಿದ್ದು, ಸಾಕ್ಷ್ಯ ನಾಶದ ಶಂಕೆ ವ್ಯಕ್ತವಾಗಿದೆ.

‘ಆ ಮನೆಗೆ ಎಂಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಸದ್ಯ ಈ ಕ್ಯಾಮೆರಾಗಳು ಕಾಣಿಸುತ್ತಿಲ್ಲ. ಅವುಗಳಲ್ಲಿನ ದತ್ತಾಂಶವನ್ನು ಸಂಗ್ರಹಿಸುವ ಡಿವಿಆರ್‌ ಸದ್ಯ ಮನೆಯಿಂದ ಕಾಣೆಯಾಗಿದೆ. ವೈರ್‌ಗಳನ್ನು ಅಲ್ಲಲ್ಲಿ ಕತ್ತರಿಸಲಾಗಿದೆ. ಇದೀಗ ಮನೆಯ ನವೀಕರಣ ಕಾಮಗಾರಿಯೂ ನಡೆದಿದ್ದು, ವಸ್ತುಗಳು ಅಸ್ತವ್ಯಸ್ತವಾಗಿ ಬಿದ್ದಿವೆ. ಪೀಠೋಪಕರಣಗಳನ್ನೂ ತೆರವುಗೊಳಿಸಲಾಗಿದೆ’ ಎಂದು ಹೇಳಲಾಗುತ್ತಿದೆ.

ಮುಡಾದ ಹಿಂದಿನ ಆಯುಕ್ತರಾದ ಡಿ.ಬಿ. ನಟೇಶ್‌ ಹಾಗೂ ಜಿ.ಟಿ. ದಿನೇಶ್‌ಕುಮಾರ್ ಇಲ್ಲಿಯೇ ವಾಸವಿದ್ದರು. ಸಾಕಷ್ಟು ಬಾರಿ ಮುಡಾ ಕಡತಗಳನ್ನು ಆಯುಕ್ತರ ನಿವಾಸಕ್ಕೆ ಕೊಂಡೊಯ್ದ ಉದಾಹರಣೆಗಳೂ ಇವೆ. ಆಯುಕ್ತರು ಹಾಗೂ ಆಪ್ತರ ಭೇಟಿಯ ಸ್ಥಳವೂ ಇದಾಗಿತ್ತು ಎನ್ನಲಾಗಿದೆ. ಇದೀಗ ಮುಡಾದಿಂದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಕುರಿತು ತನಿಖೆ ನಡೆದಿರುವ ಹೊತ್ತಿನಲ್ಲೇ ಈ ದಾಖಲೆಗಳು ನಾಪತ್ತೆ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಎರಡು ದಿನದಲ್ಲಿ ವರದಿ:

‘ಸದ್ಯ ಆಯುಕ್ತರ ನಿವಾಸದಲ್ಲಿ ನವೀಕರಣ ಕಾಮಗಾರಿ ನಡೆದಿದೆ. ಅಲ್ಲಿದ್ದ ದಾಖಲೆಗಳು, ಸಾಮಗ್ರಿಗಳ ವಿವರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನೆರಡು ದಿನದಲ್ಲಿ ಅವರು ಸ್ಟಾಕ್‌ ಲಿಸ್ಟ್ ನೀಡಲಿದ್ದು, ಏನೇನು ಇದೆ, ಇಲ್ಲ ಎಂಬುದು ನಂತರವಷ್ಟೇ ತಿಳಿಯಲಿದೆ’ ಎಂದು ಮುಡಾದ ಆಯುಕ್ತ ಎ.ಎನ್. ರಘುನಂದನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಆಯುಕ್ತರ ಅಧಿಕೃತ ನಿವಾಸವನ್ನು ಮುಡಾದ ಎಂಜಿನಿಯರಿಂಗ್ ವಿಭಾಗವು ನಿರ್ವಹಣೆ ಮಾಡುತ್ತಿದೆ. ಎಲ್ಲ ಮಾಹಿತಿಯೂ ಅವರ ಬಳಿ ಇರಲಿದೆ. ಅದನ್ನು ‍ಪಡೆದು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ಮುಡಾ ಆಯುಕ್ತರ ನಿವಾಸದಲ್ಲಿ ನವೀಕರಣ ಕಾಮಗಾರಿ ನಡೆದಿದೆ
ಮುಡಾ ಆಯುಕ್ತರ ನಿವಾಸದಲ್ಲಿ ನವೀಕರಣ ಕಾಮಗಾರಿ ನಡೆದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT