ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ತಹೀನತೆ: ಎಚ್ಚರ ಅಗತ್ಯ

ವಿಶ್ವ ರಕ್ತದಾನಿಗಳ ದಿನಾಚರಣೆ: ಜಾಗೃತಿ ಹೆಚ್ಚಿಸಲು ಕರೆ
Published 14 ಜೂನ್ 2024, 15:15 IST
Last Updated 14 ಜೂನ್ 2024, 15:15 IST
ಅಕ್ಷರ ಗಾತ್ರ

ಮೈಸೂರು: ‘ರಕ್ತಹೀನತೆ (ಅನೀಮಿಯಾ) ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದ್ದು, ತೀವ್ರ ಸಂಕಷ್ಟದಲ್ಲಿರುವ ರೋಗಿಗಳಿಗೆ ರಕ್ತ ನೀಡುವುದೇ ಅಂತಿಮ ಮದ್ದು. ಇಂಥ ರೋಗಿಗಳ ಬದುಕಿಗೆ ರಕ್ತದಾನಿಗಳೇ ಆಸರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ, ಕೆ.ಆರ್.ಆಸ್ಪತ್ರೆ ರಕ್ತನಿಧಿ ಕೇಂದ್ರ ಹಾಗೂ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಂಯುಕ್ತಾಶ್ರಯದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ‘ರಕ್ತದಾನಿಗಳ ಹಬ್ಬ’ ಉದ್ಘಾಟಿಸಿ ಅವರು ಮಾತನಾಡಿದರು.

‘35 ಲಕ್ಷ ಜನಸಂಖ್ಯೆ ಇರುವ ಮೈಸೂರು ಜಿಲ್ಲೆಯಲ್ಲಿ ಪ್ರತಿ ವರ್ಷ 35 ಸಾವಿರ ಮಹಿಳೆಯರು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಾರೆ. ಇವರಲ್ಲಿ ಅನೇಕರು ರಕ್ತಹೀನತೆಗೆ ಒಳಗಾಗುತ್ತಾರೆ. ಉತ್ತಮ ಆಹಾರ, ಜೀವನಶೈಲಿಯ ಕೊರತೆಯಿಂದ ಯುವಜನತೆಗೂ ಈ ಸಮಸ್ಯೆ ಕಾಡುತ್ತಿದೆ’ ಎಂದರು.

‘ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ, ಅನೀಮಿಯಾ ಮುಕ್ತ ಭಾರತಕ್ಕೆ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದ್ದು, ಜನರು ಕೂಡ ಈ ಯೋಜನೆಗಳಿಗೆ ಸ್ಪಂದಿಸಿ, ಅಗತ್ಯ ನೆರವು ಪಡೆದು ರೋಗದಿಂದ ಮುಕ್ತರಾಗಬೇಕು. ಅನೀಮಿಯಾ ಕಾಣಿಸಿಕೊಂಡ ಆರಂಭದಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ತುಡಿತ ಇದ್ದವರಿಗೆ ರಕ್ತದಾನ ಮಾಡುವುದು ಒಂದು ಸುಲಭದ ದಾರಿ. ಈ ಮನೋಭಾವ ಎಲ್ಲರಲ್ಲೂ ಜಾಗೃತವಾಗಬೇಕು’ ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ‘ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್ ರಕ್ತದ ಅಗತ್ಯವಿದೆ. ಆದರೆ, ಕೇವಲ 2.50 ಕೋಟಿ ಯೂನಿಟ್ ರಕ್ತ ಲಭ್ಯವಾಗುತ್ತಿದೆ. ರಕ್ತದಾನ ಮಾಡಲು ಮತ್ತಷ್ಟು ಪ್ರೇರಣೆ ನೀಡುವಂತಹ ಕಾರ್ಯಕ್ರಮಗಳು ನಡೆಯಬೇಕು’ ಎಂದರು.

‘ರಕ್ತದಾನವೆಂದರೆ ಜೀವದಾನ. ಇದಕ್ಕೆ ಬೇರೆ ಯಾವುದೇ ಪರ್ಯಾಯವಿಲ್ಲ. ರಕ್ತದಾನದಿಂದ ಕಾರ್ಯತತ್ಪರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತ ಆಗುವುದನ್ನು ಶೇ 80ರಷ್ಟು ಕಡಿಮೆ ಮಾಡುತ್ತದೆ. ರಕ್ತದ ಒತ್ತಡ, ಮಧುಮೇಹದಂಥ ರೋಗಗಳನ್ನು ತಡೆಯಬಹುದು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕಾಧಿಕಾರಿ ಡಾ.ಮೊಹಮ್ಮದ್ ಸಿರಾಜ್ ಅಹಮದ್, ಕೆ.ಆರ್.ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ.ಕುಸುಮಾ, ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಚಂದ್ರಮೌಳಿ, ಪ್ರೊ.ಎಚ್.ಪಿ.ಜ್ಯೋತಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್‌. ಸಪ್ನಾ, ಪ್ರೊ.ಪ್ರಮೋದ್ ಎಂ.ಗವಾರಿ, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಇ.ಗಿರೀಶ್, ಕಾರ್ಯನಿರ್ವಾಹಕ ಟ್ರಸ್ಟಿ ಸಿ.ಜಿ.ಮುತ್ತಣ್ಣ, ವ್ರಿಕಂ ಅಯ್ಯಂಗಾರ್ ಇದ್ದರು.

ರಕ್ತಹೀನತೆ ಸಮಸ್ಯೆ ಬಗ್ಗೆ ಎಚ್ಚರ‌‌ ಅಗತ್ಯ ರಕ್ತದಾನಕ್ಕೆ ಸದಾ ಸಿದ್ಧರಾಗಿರಿ ಆರೋಗ್ಯದ ಬಗ್ಗೆ ಕಾಳಜಿಯಿರಲಿ

ರಕ್ತದಾನಿಗಳು ಆಯೋಜಕರಿಗೆ ಸನ್ಮಾನ

ಅತಿ ಹೆಚ್ಚು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆ ಮಾಡಿದ ಕ್ರೈಸ್ಟ್ ಕಾಲೇಜು ಸೇಪಿಯಂಟ್ ಕಾಲೇಜು ಸಂತ ಫಿಲೋಮಿನಾ ಕಾಲೇಜು ಅಟ್ಲಾಂಟಿಕ್ ಅಪೇರಲ್ಸ್‌ ಕಾರ್ನಿವಲ್ ಕ್ಲಾತಿಂಗ್‌ ಜಿಎಸ್‌ಎಸ್ಎಸ್ ಕಾಲೇಜು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಯುವರಾಜ ಕಾಲೇಜು ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಹೆಚ್ಚು ಬಾರಿ ರಕ್ತದಾನ ಮಾಡಿದ ಆಶೀಶ್ ಮಹೇಶ್ ಮನು ಬಸವರಾಜು ಸಂತೋಷ್ ಸೆಬಾಸ್ಟಿನ್ ರಿಚರ್ಡ್ ಲೋಬೊ ಆನಂದ್ ಹರೀಶ್ ಕುಮಾರ್ ಗಿರೀಶ್ ಸ್ನೇಕ್ ಕೋಬ್ರಾ ಕುಮಾರ್ ಮುದಾಸಿರ್‌ ಷರೀಫ್‌ ವಿನೋದ್ ಬಿದರಗೂಡು ಕೃಷ್ಣ ಫರನಾ ಅಶ್ವಿನಿ ಎ.ಎಲ್.ಸಂಜಯ್ ಎಂ.ಎ.ಮನು ಮಹೇಶ್ ಶ್ವೇತಾ ಎಸ್.ಭಾರದ್ವಾಜ್ ಎಸ್.ವಿನುತಾ ಶ್ರೀಹರಿ ಅವರನ್ನು ಅಭಿನಂದಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT