ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಯಪುರ: ಮಹದೇಶ್ವರ ಜಾತ್ರೆಗೆ ಸಿದ್ಧತೆ

ಜಯಪುರದಲ್ಲಿ 4, 5ರಂದು ಮಹೋತ್ಸವ; ಕೊಂಡೋತ್ಸವ ಪ್ರಮುಖ ಆಕರ್ಷಣೆ
ಬಿಳಿಗಿರಿ ಆರ್.
Published 3 ಮಾರ್ಚ್ 2024, 6:25 IST
Last Updated 3 ಮಾರ್ಚ್ 2024, 6:25 IST
ಅಕ್ಷರ ಗಾತ್ರ

ಜಯಪುರ: ಗ್ರಾಮದಲ್ಲಿ ಮಾರ್ಚ್‌ 4 ಮತ್ತು 5ರಂದು ಜೇಡಿಕಟ್ಟೆ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಕೊಂಡೋತ್ಸವ ನಡೆಯಲಿದ್ದು, ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

ಜಯಪುರ, ಬರಡನಪುರ, ಮಾವಿನಹಳ್ಳಿ ಗ್ರಾಮಸ್ಥರು ಒಟ್ಟಿಗೆ ಸೇರಿ ಆಚರಿಸುವ ಜಾತ್ರೆಯಿದು. ಮಾವಿನಹಳ್ಳಿ ಯಲ್ಲಿ ಮಹದೇಶ್ವರ ಸ್ವಾಮಿ ಹುಲಿ ವಾಹನ ಉತ್ಸವ ಮೂರ್ತಿಗೆ ಪೂಜಾ ಕೈಂಕರ್ಯ ನೆರವೇರಿಸಿ ಬರಡನಪುರಕ್ಕೆ ಮಾರ್ಚ್‌ 1ರಂದೇ (ಶುಕ್ರವಾರ) ತರಲಾಗಿದೆ.

ಮಾರ್ಚ್‌ 4ರಂದು ಮುಂಜಾನೆ ಸೂರ್ಯೋದಯಕ್ಕೂ ಮುನ್ನ ಹುಲಿವಾಹನ ಮೂರ್ತಿಗೆ ಅಭಿಷೇಕ ನೆರವೇರಿಸಿ ಬರಡನಪುರ ಗ್ರಾಮದಿಂದ ಮೆರವಣಿಗೆ ಪ್ರಾರಂಭವಾಗುತ್ತದೆ. ಮೆರವಣಿಗೆಯಲ್ಲಿ ಭಕ್ತರು ಹುಲಿವಾಹನ ಮೂರ್ತಿಯನ್ನು ಹೊತ್ತು ತರುತ್ತಾರೆ. ದಾರಿಯುದ್ದಕ್ಕೂ ಭಕ್ತರು ಸಾವಿರಾರು ಈಡುಗಾಯಿಗಳನ್ನು ಒಡೆಯುತ್ತಾರೆ. ಭಾರಿ ಗಾತ್ರದ ಹೂವಿನ ಹಾರಗಳನ್ನು ಉತ್ಸವ ಮೂರ್ತಿಗೆ ಸಮರ್ಪಿಸುತ್ತಾರೆ. ಮೆರವಣಿಗೆಯ ಸಾಗುವ ದಾರಿಯುದ್ದಕ್ಕೂ ಭಕ್ತರು ಚೆಂಡುಹೂವಿನ ಹಾಸು ಹಾಕುತ್ತಾರೆ, ಕರ್ಪೂರ ಹಚ್ಚುತ್ತಾರೆ. ಸೋಮವಾರ ಬೆಳಿಗ್ಗೆ 7.15ರ ಸಮಯಕ್ಕೆ ಹುಲಿವಾಹನ ಮೂರ್ತಿ ಮೆರವಣಿಗೆಯು ಜೇಡಿಕಟ್ಟೆ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಸೇರುತ್ತದೆ. ಭಕ್ತರಿಗೆ ಮಹಾಪ್ರಸಾದ ವಿನಿಯೋಗವಾಗುತ್ತದೆ.

ಸೋಮವಾರ ರಾತ್ರಿ ಬರಡನಪುರದಿಂದ ಸರ್ಪದ ವಾಹನ ಮೆರವಣಿಗೆಗೆ ಚಾಲನೆ ದೊರೆಯುತ್ತದೆ. ಜಯಪುರ ಗಂಗಾ ಸ್ಥಾನವಾದ ಕೆಗ್ಗೆರೆಗೆ ಉತ್ಸವ ಮೂರ್ತಿ ಆಗಮಿಸುತ್ತದೆ. 101 ಹಾಲರವಿ, ಬಿರುದು ಬಾವಲಿಗಳು ಜನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತವೆ. ಜಯಪುರ ವೃತ್ತದಲ್ಲಿ ಸೋಮವಾರ ರಾತ್ರಿ 12.30ಕ್ಕೆ ಮದ್ದುಗುಂಡುಗಳನ್ನು ಸಿಡಿಸಲಾಗುತ್ತದೆ. ವೀರಭದ್ರ ಸ್ವಾಮಿ ದೇವರ ಪಂಜಿನ ಸೇವೆ ನಡೆಯುತ್ತದೆ. ಹಾಲರವಿ ಉತ್ಸವ ದೇವಾಲಯ ತಲುಪಿದಾಗ ಕರ್ಪೂರ ಹಚ್ಚಿ ಕೊಂಡವನ್ನು ಸಿದ್ಧಪಡಿಸಲಾಗುತ್ತದೆ.

‘ಮಂಗಳವಾರ ಸೂರ್ಯೊದಯಕ್ಕೂ ಮುನ್ನ ವೀರಭದ್ರೇಶ್ವರ ಸ್ವಾಮಿ, ಮಹದೇಶ್ವರ ಸ್ವಾಮಿ ಬಿರುದು ಬಾವಲಿ ಹೊತ್ತ ಅರ್ಚಕರು ಕೊಂಡವನ್ನು ಹಾಯುತ್ತಾರೆ. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗುತ್ತದೆ. ಈಗಾಗಲೇ ಜಾತ್ರೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಜೇಡಿಕಟ್ಟೆ ಮಹದೇಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಚೌಡೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಂಡೋತ್ಸವ ನೋಡಲು ಎರಡು ಕಣ್ಣು ಸಾಲದು. ಜಾತ್ರೆಗೆ ಸಾವಿರಾರು ಜನ ಬರುತ್ತಾರೆ. ಜಾತ್ರೆಗೆ ಸಾಂಸ್ಕೃತಿಕ ಕಳೆ ಬಂದಿದೆ.
ಪಿ.ಬಸವರಾಜು ಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT