ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ವಿ.ವಿ | ಸಿಗದ ಪಠ್ಯ; ಪತ್ರಿಕೋದ್ಯಮ ಪದವಿ ವಿದ್ಯಾರ್ಥಿಗಳಿಗೆ ಸಂಕಷ್ಟ

ಮೈಸೂರು ವಿ.ವಿ: ಪತ್ರಿಕೋದ್ಯಮ ಪದವಿ ವಿಭಾಗದ ವಿದ್ಯಾರ್ಥಿಗಳ ಕಾಲಾಹರಣ
Published : 23 ಆಗಸ್ಟ್ 2024, 5:07 IST
Last Updated : 23 ಆಗಸ್ಟ್ 2024, 5:07 IST
ಫಾಲೋ ಮಾಡಿ
Comments

ಮೈಸೂರು: ಪದವಿ ತರಗತಿಗಳು ಆರಂಭವಾಗಿ ತಿಂಗಳೇ ಕಳೆದರೂ ಮೈಸೂರು ವಿಶ್ವವಿದ್ಯಾಲಯವು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪದವಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನೇ ನೀಡಿಲ್ಲ. ನೂರಾರು ವಿದ್ಯಾರ್ಥಿಗಳು ವ್ಯರ್ಥ ಕಾಲಹರಣ ಮಾಡುವಂತಾಗಿದೆ.

ಕೆಲವು ವರ್ಷಗಳಿಂದ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಲ್ಲಿತ್ತು. ಈ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರವು ಪದವಿ ತರಗತಿಗಳಲ್ಲಿ ಎನ್‌ಇಪಿ ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿಯನ್ನು (ಎಸ್‌ಇಪಿ) ಮರು ಜಾರಿಗೊಳಿಸಿದೆ. ಅದಕ್ಕೆ ಅನುಗುಣವಾಗಿ ಪದವಿ ತರಗತಿಗಳಿಗೆ ಪರಿಷ್ಕೃತ ಪಠ್ಯಕ್ರಮವನ್ನು ಕೊಡಲಾಗಿದೆ.

ರಾಜ್ಯದ ಬಹುತೇಕ ವಿ.ವಿ.ಗಳಲ್ಲಿ ಈಗಾಗಲೇ ಹೊಸ ಪಠ್ಯಕ್ರಮದ ಅನುಗುಣವಾಗಿ ತರಗತಿಗಳು ನಡೆದಿವೆ. ಮೈಸೂರು ವಿ.ವಿ. ವ್ಯಾಪ್ತಿಯ ಬಹುತೇಕ ವಿಭಾಗಗಳಲ್ಲಿ ಹೊಸ ಪಠ್ಯಕ್ರಮದ ಪಾಠ ನಡೆದಿದೆ. ಆದರೆ ಪತ್ರಿಕೋದ್ಯಮ ವಿಭಾಗ ಮಾತ್ರ ಹಿಂದೆ ಉಳಿದಿದ್ದು, ಪಠ್ಯಕ್ರಮವನ್ನು ವಿಶ್ವವಿದ್ಯಾಲಯವು ಪ್ರಕಟಿಸಿಲ್ಲ. ವೆಬ್‌ಸೈಟ್‌ನಲ್ಲಿ ಕೇವಲ ಲಿಂಕ್‌ ಹಾಕಲಾಗಿದೆ. ಆದರೆ ಯಾವುದೇ ಪಠ್ಯ ದಾಖಲೆ ಲಭ್ಯವಿಲ್ಲ.

‘ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿಶ್ವವಿದ್ಯಾಲಯವು ಅಧಿಕೃತ ಪಠ್ಯಕ್ರಮವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ಈ ವರ್ಷ ಪಠ್ಯವೇ ಇನ್ನೂ ಸಿಕ್ಕಿಲ್ಲ. ಹೀಗಾಗಿ ವಿದ್ಯಾರ್ಥಿಗಳು ನಿತ್ಯ ಕಾಲೇಜಿಗೆ ಬಂದು ವಾಪಸ್ ಆಗುತ್ತಿದ್ದಾರೆ’ ಎಂದು ಪತ್ರಿಕೋದ್ಯಮ ಉಪನ್ಯಾಸಕರು ದೂರುತ್ತಾರೆ.

‘ಎನ್‌ಇಪಿಯಲ್ಲಿ ಪ್ರತಿ ವಿಷಯಕ್ಕೆ 60 ಅಂಕಗಳ ಲಿಖಿತ ಹಾಗೂ 40 ಅಂಕಗಳ ಪ್ರಾಯೋಗಿಕ ಪರೀಕ್ಷೆ ಇತ್ತು. ಈಗ ಎಸ್‌ಇಪಿ ಅಡಿ 80 ಅಂಕಗಳ ಲಿಖಿತ ಹಾಗೂ 20 ಅಂಕಗಳ ಪ್ರಾಯೋಗಿಕ ಪರೀಕ್ಷೆ ಇರಲಿದೆ. ಎರಡೂ ಪದ್ಧತಿಗೂ ಸಾಕಷ್ಟು ವ್ಯತ್ಯಾಸವಿದೆ. ಪಠ್ಯಕ್ರಮ ಸಿಕ್ಕರಷ್ಟೇ ಪಾಠ ಮಾಡಲು ಸಾಧ್ಯ. ಇನ್ನು ಮೂರು ತಿಂಗಳಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆಗಳು ಬರಲಿವೆ. ವಿಳಂಬ ಆದಷ್ಟೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ’ ಎಂಬುದು ಅವರ ಆತಂಕ.

ಯಾರಿಗೆಲ್ಲ ತೊಂದರೆ: ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಪತ್ರಿಕೋದ್ಯಮ ಬೋಧಿಸುವ ಹತ್ತಾರು ಪದವಿ ಕಾಲೇಜುಗಳು ಇವೆ. ಹಾಸನ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯವಿದ್ದರೂ ಮೈಸೂರು ವಿ.ವಿ. ಪಠ್ಯಕ್ರಮವನ್ನೇ ಅನುಸರಿಸುತ್ತಿದೆ. ಹೀಗಾಗಿ ಈ ಎರಡೂ ಜಿಲ್ಲೆಗಳ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ.

ಬಿ.ಎ ಪತ್ರಿಕೋದ್ಯಮ ಪಠ್ಯಕ್ರಮ ಪ್ರಕಟವಾಗದಿರುವುದು ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಣೆಗೆ ಕ್ರಮ ಕೈಗೊಳ್ಳಲಾಗುವುದು
ಪ್ರೊ.ಎನ್.ಕೆ.ಲೋಕನಾಥ್‌ ಕುಲಪತಿ ಮೈಸೂರು ವಿ.ವಿ.

‘ಹೆಚ್ಚು ಬದಲಾವಣೆ ಇಲ್ಲ: ತೊಂದರೆ ಆಗಲ್ಲ’

‘ಎಸ್ಇ‍ಪಿ ಅನುಸಾರವಾಗಿ ಪಠ್ಯವನ್ನು ಸಣ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ವಿಭಾಗಕ್ಕೆ ಸಲ್ಲಿಸಲಾಗಿದೆ. ಒಂದೆರಡು ದಿನದಲ್ಲಿ ಪ್ರಕಟವಾಗಲಿದೆ’ ಎಂದು ಮೈಸೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿಷಯ ಅಧ್ಯಯನ ಮಂಡಳಿ (ಬಿಒಎಸ್‌) ಅಧ್ಯಕ್ಷೆ ಎಂ.ಎಸ್.ಸಪ್ನಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಪದವಿ ಮೊದಲ ಸೆಮಿಸ್ಟರ್ ಪಠ್ಯದಲ್ಲಿ ಬದಲಾವಣೆಯಾಗಿದೆ. ಉಳಿದ ಸೆಮಿಸ್ಟರ್‌ಗಳಲ್ಲಿ ಹೆಚ್ಚೇನು ವ್ಯತ್ಯಾಸವಾಗಿಲ್ಲ. ಬದಲಾವಣೆಯ ಬಹುತೇಕ ಉಪನ್ಯಾಸಕರಿಗೆ ತಿಳಿದಿರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚೇನು ತೊಂದರೆಯಾಗದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT