ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದವರೊಂದಿಗೆ ಹರಟೆ, ದೇವರಿಗೆ ಮೊರೆ

ಚುನಾವಣಾ ಅಖಾಡದಲ್ಲಿ ಬೆವರಿಳಿಸಿ ನಿರಾಳರಾದ ಅಭ್ಯರ್ಥಿಗಳು; ಸೋಲು– ಗೆಲುವಿನ ಲೆಕ್ಕಾಚಾರ
Published 12 ಮೇ 2023, 7:42 IST
Last Updated 12 ಮೇ 2023, 7:42 IST
ಅಕ್ಷರ ಗಾತ್ರ

ಮೈಸೂರು: ಒಂದೂವರೆ ತಿಂಗಳಿನಿಂದ ಹಗಲು–ರಾತ್ರಿ, ಬಿಸಿಲು–ಮಳೆ ಎನ್ನದೇ ಕ್ಷೇತ್ರಗಳಲ್ಲಿ ಸುತ್ತಾಡಿ ಪ್ರಚಾರ ನಡೆಸಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಗುರುವಾರ ನಿರಾಳರಾಗಿದ್ದರು.‌ ಮತದಾನದ ಮರುದಿನ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದರು. ಮುಖಂಡರೊಂದಿಗೆ ಚರ್ಚೆ– ಹರಟೆಯಲ್ಲಿ ತಲ್ಲೀನರಾದರು. ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಅವರು ವಿಜಯನಗರದ ತಮ್ಮ ನಿವಾಸದಲ್ಲಿ ಮೊಮ್ಮಕ್ಕಳೊಂದಿಗೆ ಮನೆಯೊಳಗೇ ಕ್ರಿಕೆಟ್ ಆಡಿದರು. ಬಳಿಕ ಕುಟುಂಬ ಸದಸ್ಯರೊಂದಿಗೆ ಹರಟಿದರು. ನಂತರ ಮನೆಗೆ ಬಂದ ಕಾರ್ಯಕರ್ತರ ಜತೆಗೂ ಮಾತುಕತೆ ನಡೆಸಿದರು. ಬಿಜೆಪಿ ಅಭ್ಯರ್ಥಿ ವಿ.ಕವೀಶ್‌ ಗೌಡ ಅವರು ವಿಜಯನಗರದ 3ನೇ ಹಂತದಲ್ಲಿರುವ ಮೃತ್ಯುಂಜಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್‌.ಶ್ರೀವತ್ಸ ಅವರು ಬೆಳಿಗ್ಗೆಯೇ ಚಾಮರಾಜಪುರದಲ್ಲಿರುವ ಪಕ್ಷದ ಕಚೇರಿಗೆ ಬಂದು ವಿವಿಧ ಪತ್ರಿಕೆಗಳನ್ನು ಓದಿದರು. ನಂತರ, ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಪಕ್ಷದ ಮುಖಂಡ ಎಚ್‌.ಜಿ.ಗಿರಿಧರ್‌ ಜತೆಗೂ ಸಮಾಲೋಚನೆ ನಡೆಸಿದರು. ಕಾಂಗ್ರೆಸ್‌ ಅಭ್ಯರ್ಥಿ ಎಂ.ಕೆ.ಸೋಮಶೇಖರ್‌ ಅವರು ಸುಬ್ಬಯ್ಯ ರಸ್ತೆಯ ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರ ಜತೆ ಕಾಲ ಕಳೆದರು.

ಮತ ಲೆಕ್ಕಾಚಾರ: ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್‌.ನಾಗೇಂದ್ರ ಮನೆಯಲ್ಲಿ ಕೂತು ಮತ ಲೆಕ್ಕಾಚಾರದಲ್ಲಿ ತೊಡಗಿದ್ದರು. ಬೂತ್‌ವಾರು ನಡೆದ ಒಟ್ಟು ಮತದಾನ, ಪಕ್ಷಕ್ಕೆ ಸಿಗಬಹುದಾದ ಮತಗಳ ಅಂಕಿ–ಅಂಶದ ಕುರಿತಂತೆ ಕಾರ್ಯಕರ್ತರು, ಸ್ಥಳೀಯ ಮುಖಂಡರ ಜೊತೆಗೆ ಚರ್ಚಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಕೆ.ಹರೀಶ್‌ ಗೌಡ ಅವರು ಕುಟುಂಬ ಸದಸ್ಯರ ಜೊತೆಗೆ ಚರ್ಚಿಸಿದ ಬಳಿಕ ತಮ್ಮ ಕುವೆಂಪುನಗರ, ಕೆ.ಜಿ.ಕೊಪ್ಪಲಿನ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು.

ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ತನ್ವೀರ್‌ ಸೇಠ್‌ ತಮ್ಮ ಮನೆಯಲ್ಲಿ ಮಕ್ಕಳೊಂದಿಗೆ ಹರಟಿದರೆ, ಬಿಜೆಪಿ ಅಭ್ಯರ್ಥಿ ಸಂದೇಶ್‌ ಸ್ವಾಮಿ ಅವರು ಪತ್ನಿ ಗೀತಾ ಜತೆಗೆ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.

ಕಳೆದೊಂದು ತಿಂಗಳಿಂದ ಪ್ರಚಾರದಲ್ಲಿದ್ದ ಅಭ್ಯರ್ಥಿಗಳು ಕುಟುಂಬ ಸದಸ್ಯರ ಜೊತೆ ವಿಶ್ರಾಂತಿ ಕಾರ್ಯಕರ್ತರ ಜೊತೆಗೂ ಸಮಾಲೋಚನೆ

ಕೆಲಸ ಆರಂಭಿಸಿದ ರಮೇಶ್‌ ಚಾಮರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್.ಕೆ.ರಮೇಶ್‌ ಅವರು ಪೆಟ್ರೋಲ್‌ ಬಂಕ್‌ ವ್ಯವಹಾರ ನಡೆಸುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಧನ್ವಂತರಿ ರಸ್ತೆಯಲ್ಲಿರುವ ‘ವಿಜಯ ಸರ್ವೀಸ್‌ ಸ್ಟೇಷನ್‌’ಗೆ ಬಂದು ಕೆಲಸದಲ್ಲಿ ತೊಡಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT