ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಮೇಲ್ಮನೆ ಪ್ರವೇಶಕ್ಕೆ ಹಲವರ ಪೈಪೋಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ವರಿಷ್ಠರ ಕೃಪೆಗೆ ಕಾದಿರುವ ಹಲವು ನಾಯಕರು
Published 25 ಮೇ 2024, 4:22 IST
Last Updated 25 ಮೇ 2024, 4:22 IST
ಅಕ್ಷರ ಗಾತ್ರ

ಮೈಸೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ 12 ಸದಸ್ಯರ ಆಯ್ಕೆಗೆ ಜೂನ್‌ನಲ್ಲಿ ಚುನಾವಣೆ ನಡೆಯಲಿದ್ದು, ಜಿಲ್ಲೆಯಿಂದಲೂ ಹಲವು ಮಂದಿ ಆಕಾಂಕ್ಷಿಗಳಾಗಿದ್ದಾರೆ. ಸ್ಥಾನ ಗಳಿಸಲು ಪ್ರಯತ್ನದಲ್ಲಿ ತೊಡಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತವರಾದ ಇಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆಯದಿರುವ ಕಾಂಗ್ರೆಸ್‌ನಲ್ಲಿನ ಕೆಲವು ಆಕಾಂಕ್ಷಿಗಳು ‘ಮೇಲ್ಮನೆ ಪ್ರವೇಶಕ್ಕೆ’ ಬಯಸಿದ್ದಾರೆ.

ತಾವು ಆಕಾಂಕ್ಷಿ ಆಗಿರುವುದನ್ನು ತಿಳಿಸುವ ಜತೆಗೆ ಅವರ ಬೆಂಬಲಿಗರ ಮೂಲಕವೂ ಒತ್ತಡ ಹೇರುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಜಾತಿ, ಪಕ್ಷದ ಸಂಘಟನೆಗೆ ನೀಡಿದ ಕೊಡುಗೆಯನ್ನು ಮುಂದಿಟ್ಟುಕೊಂಡು ‘ಹಕ್ಕೊತ್ತಾಯ’ ಮಂಡಿಸಿ ವರಿಷ್ಠರ ಗಮನಸೆಳೆಯುವ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

ಕ್ಷೇತ್ರ ತ್ಯಾಗ ಮಾಡಿದ್ದು ‘ಆಸರೆ’:

ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ವರುಣ ಕ್ಷೇತ್ರದ ಶಾಸಕರಾಗಿದ್ದ ಅವರು 2023ರ ಚುನಾವಣೆಯಲ್ಲಿ ತಂದೆ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ತ್ಯಾಗ ಮಾಡಿದ್ದರು. ಅವರನ್ನು ಬಳಿಕ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈಗ, ವಿಧಾನಪರಿಷತ್‌ಗೆ ಅವಕಾಶದ ನಿರೀಕ್ಷೆಯಲ್ಲಿ ಅವರಿದ್ದಾರೆ. 

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಆಗಿರುವ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಹಿಳಾ ಹಾಗೂ ದಲಿತ ಕೋಟಾದಲ್ಲಿ ಸ್ಥಾನ ಕೇಳುತ್ತಿದ್ದಾರೆ.

ಇನ್ನಷ್ಟು ಮಂದಿ:

ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಅಧ್ಯಕ್ಷ ಆರ್.ಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಹೆಗ್ಡೆ, ಮಾಜಿ ಮೇಯರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಮೇಯರ್ ನಾರಾಯಣ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಕೂಡ ಕಣ್ಣಿಟ್ಟಿದ್ದಾರೆ. ಪಕ್ಷದ ವರಿಷ್ಠರಿಗೆ ತಮ್ಮ ಆಕಾಂಕ್ಷೆಯನ್ನು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರೆಲ್ಲರೂ ಸಿದ್ದರಾಮಯ್ಯ ಬೆಂಬಲಿಗರು. ಅವರು ಯಾರ ಕೈಹಿಡಿಯಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

‘ಬಿಜೆಪಿಯಿಂದ ವಿಭಾಗ ಪ್ರಭಾರಿ ಮೈ.ವಿ. ರವಿಶಂಕರ್‌ ಅವರನ್ನು ಆಯ್ಕೆ ಮಾಡಬೇಕು’ ಆ ಪಕ್ಷದ ಕೆಲವು ಕಾರ್ಯಕರ್ತರು, ಬೆಂಬಲಿಗರು ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್‌ ಅಭಿಯಾನವೂ ನಡೆದಿದೆ. ಅವರು ವಿಧಾನಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋಲನುಭವಿಸಿದ್ದರು.

ಪುಷ್ಪಾ ಅಮರನಾಥ್
ಪುಷ್ಪಾ ಅಮರನಾಥ್
ಡಾ.ಬಿ.ಜೆ.ವಿಜಯ್‌ಕುಮಾರ್
ಡಾ.ಬಿ.ಜೆ.ವಿಜಯ್‌ಕುಮಾರ್
ಮೈ.ವಿ. ರವಿಶಂಕರ್‌
ಮೈ.ವಿ. ರವಿಶಂಕರ್‌

ಮುಖ್ಯಮಂತ್ರಿ, ವರಿಷ್ಠರಲ್ಲಿ ಲಾಬಿ ಯತೀಂದ್ರ ಸಿದ್ದರಾಮಯ್ಯಗೆ ಅವಕಾಶ ಸಾಧ್ಯತೆ ಬೆಂಬಲಿಗರಿಂದ ಹಕ್ಕೊತ್ತಾಯದ ಪ್ರಯತ್ನ

ಶಾಸಕರಾಗಿದ್ದರೂ ಕ್ಷೇತ್ರವನ್ನು ಬಿಟ್ಟು ಕೊಟ್ಟ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಬೇಕು. ಅದಕ್ಕೆ ನಮ್ಮ ಬೆಂಬಲವಿದೆ

-ಪುಷ್ಪಾ ಅಮರನಾಥ್ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ

ಪಕ್ಷದ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದೇನೆ

ಬಿಜೆಪಿ ಸರ್ಕಾರದ ವಿರುದ್ಧ ಹೋರಾಟದಲ್ಲಿ ತೊಡಗಿದ್ದೆ. ಟಿಕೆಟ್‌ ವಂಚಿತನೂ ಆಗಿದ್ದೇನೆ. ಇದೆಲ್ಲವನ್ನೂ ಪರಿಗಣಿಸುವ ಭರವಸೆ ಇದೆ ಬಿ.ಜೆ. ವಿಜಯ್‌ಕುಮಾರ್‌ ಅಧ್ಯಕ್ಷ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ

ವಿಜಯ್‌ಕುಮಾರ್ ಪರವಾಗಿ ಸಭೆ

ಇಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಸತತ ಮೂರು ಅವಧಿಯಿಂದ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸುತ್ತಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ ಬಯಸಿದ್ದರು. ಅವರ ಹೆಸರು ಶಿಫಾರಸು ಕೂಡ ಆಗಿತ್ತು. ಆದರೆ ಟಿಕೆಟ್‌ ದೊರೆತಿರಲಿಲ್ಲ. ‘ವಿಧಾನಪರಿಷತ್‌ಗೆ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ವರಿಷ್ಠರು ಅವರಿಗೆ ಭರವಸೆ ನೀಡಿದ್ದರು ಎನ್ನಲಾಗಿದೆ. ಅವರು ಒಕ್ಕಲಿಗ ಕೋಟಾದಲ್ಲಿ ಸ್ಥಾನ ಬಯಸಿದ್ದಾರೆ. ಅವರನ್ನು ಆಯ್ಕೆ ಮಾಡುವಂತೆ ಆಗ್ರಹಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಪ್ರಗತಿಪರರ ಸಂಘಟನೆ ಹಾಗೂ ವಿವಿಧ ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಮೇ 25ರಂದು ಬೆಳಿಗ್ಗೆ 11ಕ್ಕೆ ಕಿಂಗ್ಸ್‌ ಕೋರ್ಟ್‌ ಹೋಟೆಲ್‌ನಲ್ಲಿ ದುಂಡು ಮೇಜಿನ ಸಭೆ ಅಯೋಜಿಸಲಾಗಿದೆ.

ಮಹಿಳೆ ದಲಿತ ಕೋಟಾದಲ್ಲಿ...

‘ನಾನೂ ಪ್ರಬಲ ಆಕಾಂಕ್ಷಿಯಾಗಿದ್ದೇನೆ’ ಎಂದು ಪುಷ್ಪಾ ಅಮರನಾಥ್‌ ತಿಳಿಸಿದರು. ‘ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸಂಘಟನೆಗೆ ಆರು ವರ್ಷಗಳಿಂದ ಸಾಕಷ್ಟು ದುಡಿದಿದ್ದೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ್ದೇನೆ. ಅಧಿಕಾರ ಇಲ್ಲದಿರುವ ಸಂದರ್ಭದಲ್ಲೂ ರಾಜ್ಯದಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಹೋರಾಟ ಸಂಘಟಿಸಿದ್ದೆ. ಪಕ್ಷ ಅಧಿಕಾರಕ್ಕೆ ಬರಬೇಕೆಂದು ಈ ಕೆಲಸವನ್ನೆಲ್ಲ ಮಾಡಿದ್ದೇನೆ. ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದೇನೆ. ವಿಧಾನಸಭೆ ಚುನಾವಣೆಯಲ್ಲೂ ಟಿಕೆಟ್ ಆಕಾಂಕ್ಷಿ ಆಗಿದ್ದೆ. ಆದರೆ ಸಿಕ್ಕಿರಲಿಲ್ಲ. ಮಹಿಳಾ ಮೀಸಲಾತಿ ಕೋಟಾದಲ್ಲಿ ಪರಿಷತ್‌ಗೆ ಅವಕಾಶ ಕೊಡಬೇಕು ಎಂದು ಕೋರಿದ್ದೇನೆ. ಸಿಗುವ ನಿರೀಕ್ಷೆ ಇದೆ’ ಎಂದು ಅವರು ಪ್ರತಿಕ್ರಿಯಿಸಿದರು. ಅವರ ಪರವಾಗಿ ಬೆಂಬಲಿಗರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿ ಗಮನಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT