ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾದಕವಸ್ತು: ಮಕ್ಕಳ ದೂರವಿರಿಸಿ: ಡಾ.ಕಿಶೋರ್ ಬೈಂದೂರ್

ಹದಿಹರೆಯದವರ ಆರೋಗ್ಯ ಕುರಿತ ಸಮ್ಮೇಳನ
Published 25 ಆಗಸ್ಟ್ 2024, 16:24 IST
Last Updated 25 ಆಗಸ್ಟ್ 2024, 16:24 IST
ಅಕ್ಷರ ಗಾತ್ರ

ಮೈಸೂರು: ‘ಕಿಶೋರಾವಸ್ಥೆಯಲ್ಲಿ ಮಾದಕ ವಸ್ತುಗಳ ಸೇವನೆಗೆ ಮುಂದಾಗುವವರು, ಜೀವನಪೂರ್ತಿ ಅದಕ್ಕೆ ದಾಸರಾಗುವ ಸಾಧ್ಯತೆ ಹೆಚ್ಚು’ ಎಂದು ಕರ್ನಾಟಕ ಅಡೋಲ್ಸೆಂಟ್‌ ಹೆಲ್ತ್ ಅಕಾಡೆಮಿ ಅಧ್ಯಕ್ಷ ಡಾ.ಕಿಶೋರ್ ಬೈಂದೂರ್ ಹೇಳಿದರು.

ಮೈಸೂರು ಅಡೋಲ್ಸೆಂಟ್‌ ಹೆಲ್ತ್ ಅಕಾಡೆಮಿಯು ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಹದಿಹರೆಯದವರ ಆರೋಗ್ಯ ಸಮ್ಮೇಳನದಲ್ಲಿ ‘ಮಾದಕ ವಸ್ತುಗಳ ಸೇವನೆಯಿಂದ ಹದಿಹರೆಯದವರಲ್ಲಿ ಉಂಟಾಗುತ್ತಿರುವ ದುಷ್ಪರಿಣಾಮ ಮತ್ತು ಪರಿಹಾರ’ ಕುರಿತು ಮಾತನಾಡಿದರು.

‘ಮದ್ಯಪಾನ, ತಂಬಾಕು, ಗಾಂಜಾ ಮೊದಲಾದ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಅದರಲ್ಲೂ 16 ವರ್ಷದೊಳಗಿನವರೇ ವ್ಯಸನಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ. ಅಂಥ ಮಕ್ಕಳ ವರ್ತನೆಯನ್ನು ಅರ್ಥೈಸಿಕೊಂಡು ಉಪಚರಿಸಬೇಕಾದ ಜವಾಬ್ದಾರಿ ಪೋಷಕರು ಮತ್ತು ವೈದ್ಯರ ಮೇಲಿದೆ’ ಎಂದರು.

‘‍ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. 20 ವರ್ಷದವರೆಗೆ ನಮ್ಮ ಮಿದುಳು ಪರಿಪೂರ್ಣ ಬೆಳವಣಿಗೆ ಹೊಂದಿರುವುದಿಲ್ಲ. ಈ ಹಂತದಲ್ಲಿ ವ್ಯಸನದಿಂದ ದೂರ ಇರಿಸುವುದೇ ಸವಾಲು’ ಎಂದರು.

ಕೇಂದ್ರೀಯ ಅಡೋಲ್ಸೆಂಟ್‌ ಹೆಲ್ತ್ ಅಕಾಡೆಮಿ ಅಧ್ಯಕ್ಷೆ ಡಾ.ಗೀತಾ ಪಾಟೀಲ್ ಮಾತನಾಡಿ, ‘ಮಕ್ಕಳು ಹಾಗೂ ಯುವಜನರು ಪೌಷ್ಟಿಕಾಂಶಯುಕ್ತ ಆಹಾರದ ಆಯ್ಕೆ, ಸೇವನೆಯಲ್ಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಪೋಷಕರು ಹಾಗೂ ವೈದ್ಯರು ಈ ಬಗ್ಗೆಯೂ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

ಹದಿಹರೆಯದ ಸಮಸ್ಯೆಗಳ ಕುರಿತು ತಜ್ಞ ವೈದ್ಯರು ವಿಷಯ ಮಂಡಿಸಿದರು. 50 ಮಕ್ಕಳ ವೈದ್ಯರು ಪಾಲ್ಗೊಂಡಿದ್ದರು.

ಅಕಾಡೆಮಿ ಕಾರ್ಯದರ್ಶಿ ಡಾ.ಆರ್‌.ಪ್ರೇಮ, ಮೈಸೂರು ಘಟಕದ ಅಧ್ಯಕ್ಷ ಡಾ.ಯು.ಜಿ. ಶೆಣೈ, ಐ.ಎ.ಪಿ. ಅಧ್ಯಕ್ಷ ಡಾ.ಎಂ.ಆರ್‌.ಪ್ರಶಾಂತ್, ಡಾ.ರೂಪಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT