ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸ್‌ ಪಾಸ್‌ ‘ಮಾರ್ಗ ಮಿತಿ’ ಗೊಂದಲ

ಏಕರೂಪತೆ ಇಲ್ಲದಿರುವುದಕ್ಕೆ ಕೆಎಸ್‌ಆರ್‌ಟಿಸಿ ವಿರುದ್ಧ ಪ್ರಯಾಣಿಕರ ಅಸಮಾಧಾನ
Published 30 ಜೂನ್ 2024, 7:23 IST
Last Updated 30 ಜೂನ್ 2024, 7:23 IST
ಅಕ್ಷರ ಗಾತ್ರ

ಮೈಸೂರು: ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಘಟಕದಿಂದ ನೀಡಲಾಗುವ ತಿಂಗಳ ಪಾಸ್ ಮಾನ್ಯ ಮಾಡುವುದರಲ್ಲಿ ‘ಮಾರ್ಗವಾರು ವ್ಯತ್ಯಾಸ’ ಕಂಡುಬರುತ್ತಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಪಾಸ್‌ ಪಡೆದು ಸಂಚರಿಸುವವರು ನಿಗದಿತ ಸ್ಟೇಜ್‌ ನಂತರ ಟಿಕೆಟ್‌ ತೆಗೆದುಕೊಳ್ಳಬೇಕಾದ ಸ್ಥಿತಿ ಇದೆ!

ಈ ಘಟಕದಿಂದ ಮೂರು ವಿಧದ ಪಾಸ್‌ಗಳನ್ನು ಕೊಡಲಾಗುತ್ತಿದೆ. ದಿನದ ಪಾಸ್‌ಗೆ ₹60, ತಿಂಗಳಿನದ್ದಕ್ಕೆ ₹925 ಹಾಗೂ ನಿಗದಿತ ಮಾರ್ಗದ ಪಾಸ್‌ (ಕಿ.ಮೀ. ಆಧರಿಸಿ ಹಣ ಪಡೆಯಲಾಗುತ್ತದೆ) ನೀಡಲಾಗುತ್ತದೆ. ಇದರಲ್ಲಿ ತಿಂಗಳ ಪಾಸ್‌ನಲ್ಲಿ ವ್ಯತ್ಯಾಸವಿದೆ.

‘ನಗರ ಸಾರಿಗೆ ಬಸ್‌ಗಳು ನಿಲ್ದಾಣದಿಂದ ಎಲ್ಲಿಯವರೆಗೆ ಪ್ರಯಾಣಿಸುತ್ತವೆಯೋ ಅಲ್ಲಿವರೆಗೂ ತಿಂಗಳ ಪಾಸ್ ಮಾನ್ಯ ಮಾಡಬೇಕು ಹಾಗೂ ಮಾರ್ಗವಾರು ಇರುವ ವ್ಯತ್ಯಾಸವನ್ನು ಸರಿಪಡಿಸಬೇಕು. ಈ ವಿಷಯದಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಬೇಕು’ ಎನ್ನುವುದು ಪ್ರಯಾಣಿಕರ ಒತ್ತಾಯವಾಗಿದೆ.

ಸ್ಟೇಜ್‌ವಾರು ವ್ಯತ್ಯಾಸ:

ತಿಂಗಳ ಪಾಸ್‌ ಬಳಸಿ ಕೆಆರ್‌ಎಸ್, ಶ್ರೀರಂಗಪಟ್ಟಣ, ನಿಮಿಷಾಂಬಾದವರೆಗೆ ಪ್ರಯಾಣಿಸಬಹುದಾಗಿದೆ. ಈ ಮಾರ್ಗಗಳು ಸರಾಸರಿ 16ರಿಂದ 20 ಕಿ.ಮೀ.ವರೆಗೆ ಇದೆ. ಆದರೆ, ನಂಜನಗೂಡು ಮಾರ್ಗದಲ್ಲಿ ಸಂಚರಿಸುವವರಿಗೆ ನಂಜನಗೂಡುವರೆಗೆ ಪಾಸ್‌ಗೆ ಮಾನ್ಯತೆ ಇಲ್ಲ. ಅಲ್ಲಿ, ವರ್ತುಲ ರಸ್ತೆಯ ಎಪಿಎಂಸಿವರೆಗೆ ಮಾತ್ರವೇ ಅನ್ವಯಿಸಲಾಗುತ್ತದೆ. ಮೈಸೂರು–ನಂಜನಗೂಡು ಮಾರ್ಗಕ್ಕೆಂದೇ ಪ್ರತ್ಯೇಕ ಪಾಸ್ ಇದ್ದು, ಅದನ್ನು ಪಡೆದುಕೊಂಡರೆ ಆ ಮಾರ್ಗದಲ್ಲಿ ಮಾತ್ರವೇ ಸಂಚರಿಸಬಹುದು. ಇಲ್ಲಿ ಟೋಲ್‌ ಸಂಗ್ರಹ ಮಾಡುವುದರಿಂದ ಆ ಟೋಲ್‌ ಹೊರೆಯನ್ನೂ ಪಾಸ್‌ನಲ್ಲಿ ಸೇರಿಸಲಾಗುತ್ತದೆ. ಈ ಹೊರೆಯನ್ನು ಪ್ರಯಾಣಿಕರ ಮೇಲೆಯೇ ಹಾಕಲಾಗುತ್ತದೆ.

ಈ ಪಾಸ್‌ನಲ್ಲಿ ಆಯರಹಳ್ಳಿ ಸಮೀಪದ ದೇವಲಾಪುರ, ಚಾಮುಂಡಿಬೆಟ್ಟ, ಹುಲ್ಲಹಳ್ಳಿ ಮಾರ್ಗದಲ್ಲಿ ದೂರದವರೆಗೆ ಮಾತ್ರವೇ ಪ್ರಯಾಣಿಸಬಹುದು. ಸಾರಿಗೆ ಬಸ್‌ಗಳು ಮುಂದೆ ಸಂಚರಿಸಿದರೂ ಪಾಸ್‌ಗೆ ಮಾತ್ರ ಮಿತಿ ಹಾಕಲಾಗಿದೆ. ಸ್ಟೇಜ್‌ವಾರು ವ್ಯತ್ಯಾಸ ಕಂಡುಬರುತ್ತಿದೆ.

ಬಿಎಂಟಿಸಿ ಮಾದರಿಯಲ್ಲಿರಲಿ:

‘ಬಿಎಂಟಿಸಿಯಲ್ಲಿ ದಿನದ ಅಥವಾ ತಿಂಗಳ ಬಸ್‌ ಪಾಸ್ ಪಡೆದರೆ ಆ ಬಸ್‌ಗಳು ಸಂಚರಿಸುವ ಕೊನೆಯ ನಿಲುಗಡೆವರೆಗೂ ಮಾನ್ಯ ಮಾಡಲಾಗುತ್ತದೆ. ಆದರೆ, ಇಲ್ಲಿ ವ್ಯತ್ಯಾಸವಿದೆ. ಒಂದೊಂದು ಮಾರ್ಗದಲ್ಲಿ ಒಂದೊಂದು ರೀತಿಯ ಮಾನದಂಡ ಅನುಸರಿಸುತ್ತಿರುವುದು ಏಕೆ? ಬಿಳಿಕೆರೆಗೆ ಹೋಗಬೇಕಾದರೆ ಇಲವಾಲದವರೆಗೆ ಮಾತ್ರವೇ ಪಾಸ್ ಮಾನ್ಯ ಮಾಡುತ್ತಾರೆ. ಮುಂದೆ ಸಂಚರಿಸಬೇಕಾದರೆ ಟಿಕೆಟ್‌ ತೆಗೆದುಕೊಳ್ಳಬೇಕಾದ ಸ್ಥಿತಿ ಇದೆ. ಏಕರೂಪ ನಿಯಮವನ್ನು ಮಾಡಿಲ್ಲದೇ ಇರುವುದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ’ ಎಂದು ಮೈಸೂರು– ಬಿಳಿಕೆರೆ ಮಾರ್ಗದಲ್ಲಿ ಆಗಾಗ ಸಂಚರಿಸುವ ನಿವೃತ್ತ ಪಿಎಸ್‌ಐ ಎಸ್. ಕೃಷ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದೇ ಇಲಾಖೆಯಾದರೂ ಬಿಎಂಟಿಸಿಗೂ, ಕೆಎಸ್‌ಆರ್‌ಟಿಸ್‌ ಬಸ್‌ಗಳ ಪಾಸ್‌ಗೂ ವ್ಯತ್ಯಾಸವೇಕೆ? ಬಿಎಂಟಿಸಿಯಂತೆಯೇ ತಿಂಗಳ ಪಾಸ್‌ಗೆ ₹1,050 ಪಡೆದು ಸಿಟಿ ಬಸ್‌ಗಳು ಎಲ್ಲಿವರೆಗೆ ಸಂಚರಿಸುತ್ತವೆಯೋ ಅಲ್ಲಿವರೆಗೂ ಮಾನ್ಯ ಮಾಡಬೇಕು. ಈ ಮೂಲಕ ವ್ಯತ್ಯಾಸ ಹಾಗೂ ಗೊಂದಲವನ್ನು ನಿವಾರಿಸಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

‘ಹಿರಿಯ ನಾಗರಿಕರಿಗೆ ಬಸ್‌ಪಾಸ್‌ನಲ್ಲಿ ರಿಯಾಯಿತಿ ನೀಡಿಕೆಯಲ್ಲೂ ತೊಂದರೆ ಇದೆ. ಮೊದಲ ತಿಂಗಳು ಪೂರ್ಣ ಹಣ (₹925) ಪಾವತಿಸಬೇಕು. ನಂತರದ ತಿಂಗಳಷ್ಟೆ ಶೇ 25ರಷ್ಟು ರಿಯಾಯಿತಿ ನೀಡಲಾಗುತ್ತದೆ. ಈ ರೀತಿಯ ಅವೈಜ್ಞಾನಿಕ ಕ್ರಮವನ್ನೂ ತೆಗೆದುಹಾಕಬೇಕು’ ಎನ್ನುವುದು ಅವರ ಕೋರಿಕೆಯಾಗಿದೆ.

ಗೊಂದಲ ನಿವಾರಿಸಲು ಒತ್ತಾಯ ಬಸ್‌ಗಳು ಸಂಚರಿಸುವವರೆಗೂ ಮಾನ್ಯ ಮಾಡಲು ಆಗ್ರಹ ಬಿಎಂಟಿಸಿ ಮಾದರಿ ಅನುಸರಿಸಲು ಮನವಿ

ಇಲಾಖೆಯ ನಿಯಮದಂತೆ ಪಾಸ್‌ ಮಾನ್ಯ ಮಾಡಲಾಗುತ್ತಿದೆ. ಸ್ಟೇಜ್‌ವಾರು ಪರಿಗಣಿಸಲಾಗುತ್ತದೆ. ನಿರ್ದಿಷ್ಟ ಮಾರ್ಗದ ಪಾಸ್‌ ಕೂಡ ದೊರೆಯುತ್ತದೆ. ನಿಗದಿತ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದು.

-ಶ್ರೀನಿವಾಸ್ ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ

ಇಲವಾಲದವರೆಗೆ ಮಾತ್ರವೇ ಏಕೆ? ಹುಣಸೂರು ತಾಲ್ಲೂಕಿನ ಬಿಳಿಕೆರೆ ಮಾರ್ಗದಲ್ಲಿ ಇಲವಾಲದವರೆಗೆ ಮಾತ್ರ ಅಂದರೆ 9 ಕಿ.ಮೀ.ವರೆಗೆ ಮಾತ್ರವೇ ಪಾಸ್ ಮಾನ್ಯ ಮಾಡಲಾಗುತ್ತದೆ. ಅದೇ ಬಸ್‌ನಲ್ಲಿ ಬಿಳಿಕೆರೆಗೆ ಹೋಗಬೇಕಾದರೆ ಇಲವಾಲದಿಂದ ಮುಂದಕ್ಕೆ ಟಿಕೆಟ್ ತೆಗೆದುಕೊಳ್ಳಬೇಕು! ನಗರ ಬಸ್‌ನಲ್ಲಿ ಅಥವಾ ಬಸ್‌ ನಿಲ್ದಾಣದಿಂದ ತಿಂಗಳ ಪಾಸ್ ಬಳಕೆದಾರರು ಪ್ರಯಾಣಿಸಬೇಕಾದರೆ ಗದ್ದಿಗೆ ಮಾರ್ಗದಲ್ಲಿ ಕೆಲವು ಬಸ್‌ಗಳಲ್ಲಿ ಬೋಗಾದಿವರೆಗಷ್ಟೆ ಹಾಗೂ ಕೆಲವು ಬಸ್‌ಗಳಲ್ಲಿ ಬೀರಿಹುಂಡಿವರೆಗೆ ಮಾತ್ರವೇ ಪಾಸ್ ಮಾನ್ಯ ಮಾಡಲಾಗುತ್ತದೆ. ಅಂದರೆ ಗರಿಷ್ಠ 13.9 ಕಿ.ಮೀ.ವರೆಗೆ ಮಾತ್ರವೇ ಅವಕಾಶವಿದೆ. ಬನ್ನೂರು ಮಾರ್ಗದಲ್ಲಿ ಹಾರೋಹಳ್ಳಿ ಮೆಲ್ಲಹಳ್ಳಿಯವರೆಗೆ ಅಂದರೆ 12 ಕಿ.ಮೀ.ವರೆಗೆ ಮಾತ್ರವೇ ಪಾಸ್‌ ಅನ್ವಯಿಸಲಾಗುತ್ತದೆ. ತಿ.ನರಸೀಪುರ ಮಾರ್ಗದಲ್ಲಿ ಹೊರವಲಯದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ನಗರದ ಬಳಿಯವರೆಗೆ ಹಾಗೂ ಎಚ್‌.ಡಿ. ಕೋಟೆ ರಸ್ತೆಯಲ್ಲಿ ಜಯಪುರದವರೆಗಷ್ಟೆ (15.6 ಕಿ.ಮೀ.) ಅವಕಾಶ ಇದೆ. ಹೀಗೆ... ಒಂದೊಂದು ಮಾರ್ಗಕ್ಕೆ ಒಂದೊಂದು ರೀತಿಯಲ್ಲಿ ‘ಕಿ.ಮೀ. ಮಿತಿಯ ಮಾನದಂಡ’ ಅನುಸರಿಸುತ್ತಿರುವುದು ಏಕೆ ಎನ್ನುವುದು ಪ್ರಯಾಣಿಕರ ಪ್ರಶ್ನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT