ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಕಾಂಗ್ರೆಸ್ ತಂತ್ರ ಫಲಿಸದು: ಜಿ.ಟಿ. ದೇವೇಗೌಡ

ಚಾಮುಂಡೇಶ್ವರಿ ಕ್ಷೇತ್ರ: ಜಿ.ಟಿ. ದೇವೇಗೌಡ ಜೊತೆ ಯದುವೀರ್ ಪ್ರಚಾರ
Published 13 ಏಪ್ರಿಲ್ 2024, 13:37 IST
Last Updated 13 ಏಪ್ರಿಲ್ 2024, 13:37 IST
ಅಕ್ಷರ ಗಾತ್ರ

ಮೈಸೂರು: ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಶನಿವಾರ ಜೆಡಿಎಸ್‌ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಜೊತೆಗೂಡಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು.

ದಿನವಿಡೀ ವಿವಿಧ ಗ್ರಾಮಗಳಲ್ಲಿ ಸಂಚಾರ ಕೈಗೊಂಡ ಈ ಜೋಡಿಗೆ ಅಲ್ಲಲ್ಲಿ ಪಕ್ಷದ ಕಾರ್ಯಕರ್ತರು ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಿದರು. ಮಹಿಳೆಯರು ರಾಜವಂಶಸ್ಥ ಯದುವೀರ್‌ಗೆ ಆರತಿ ಬೆಳಗಿ ತಿಲಕವಿಟ್ಟರು.

ಬೆಳಿಗ್ಗೆ ಸಾತಗಳ್ಳಿ, ಹಂಚ್ಯಾ, ರಮ್ಮನಹಳ್ಳಿ, ಕಾಮನಕೆರೆ, ಹಳೆ ಕೆಸರೆ, ಬೆಲವತ್ತ, ಕೆ.ಆರ್‌.ಮಿಲ್‌, ಸಿದ್ದಲಿಂಗಪುರ, ಕಳಸ್ತವಾಡಿ, ಲಕ್ಷ್ಮಿಪುರ, ನಾಗನಹಳ್ಳಿ, ಶ್ಯಾದನಹಳ್ಳಿಯಲ್ಲಿ ಪ್ರಚಾರ ನಡೆಯಿತು. ಮಧ್ಯಾಹ್ನ ಮೈದನಹಳ್ಳಿ, ಮೇಗಳಾಪುರ, ಮಲ್ಲೇಗೌಡನ ಕೊಪ್ಪಲು, ಉಂಡವಾಡಿ, ಆನಂದೂರು, ಕಲ್ಲೂರು, ಎಡಹಳ್ಳಿ, ರಾಮನಹಳ್ಳಿ, ಸಾಗರಕಟ್ಟೆ, ಹೊಸಕೋಟೆ, ಯಾಚೇಗೌಡನ ಹಳ್ಳಿ, ದಡದಕಲ್ಲಹಳ್ಳಿ, ದೊಡ್ಡೇಗೌಡನ ಕೊಪ್ಪಲು, ಗುಂಗ್ರಾಲ್‌ ಛತ್ರ, ಯಲಚನಹಳ್ಳಿ ಹಾಗೂ ಇಲವಾಲದಲ್ಲಿ ಯದುವೀರ್ ಮತಯಾಚನೆ ಮಾಡಿದರು.

ಈ ಸಂದರ್ಭ ಮಾತನಾಡಿದ ಜಿ.ಟಿ. ದೇವೇಗೌಡ, ‘ಚಾಮುಂಡೇಶ್ವರಿ ಕ್ಷೇತ್ರವೂ ಸೇರಿದಂತೆ ಇಡೀ ಲೋಕಸಭಾ ಕ್ಷೇತ್ರದಾದ್ಯಂತ ಬಿಜೆಪಿ–ಜೆಡಿಎಸ್‌ ಒಗ್ಗಟ್ಟಾಗಿ ಪ್ರಚಾರ ನಡೆಸುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರು ಕಾಂಗ್ರೆಸ್ ಮರೆತು ಯದುವೀರ್‌ ಅವರನ್ನು ಬೆಂಬಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ಯಾವುದೇ ಜಾತಿ ಸಭೆಗಳನ್ನು ಮಾಡಿದರೂ ಪ್ರಯೋಜನ ಇಲ್ಲ. ಯಾವ ರಾಜಕೀಯ, ತಂತ್ರಗಾರಿಕೆಯೂ ಇಲ್ಲಿ ನಡೆಯುವುದಿಲ್ಲ. ಮೋದಿ ಮತ್ತೆ ಪ್ರಧಾನಿ ಆಗುವುದನ್ನು ತಪ್ಪಿಸಲು ಆಗದು. ಯದುವೀರ್ ಮೈಸೂರಿಗೆ ನಂ 1 ಅಭ್ಯರ್ಥಿ. ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಬೇಕಾದ ಜ್ಞಾನ, ಸಂಸದರಾಗುವ ಸಾಮರ್ಥ್ಯ ಅವರಿಗೆ ಇದೆ’ ಎಂದರು.

ಯದುವೀರ್ ಮಾತನಾಡಿ, ‘ಮೈಸೂರು ಅರಸರ ಕುಟುಂಬವಾಗಿ ಜನರೊಂದಿಗೆ ನಮ್ಮ ಭಾವನಾತ್ಮಕ ಸಂಬಂಧ ಇದೆ. ಇಡೀ ಮೈಸೂರು–ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದ್ದು, ಜಿ.ಟಿ. ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಎಲ್ಲವೂ ನಮ್ಮ ಗೆಲುವಿಗೆ ಸಹಕಾರಿ ಆಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT