ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಯದುವೀರ್, ಲಕ್ಷ್ಮಣ ಭವಿಷ್ಯ ‘ನಿರ್ಧಾರ’ ಇಂದು

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಮತದಾನಕ್ಕೆ ಕ್ಷಣಗಣನೆ; ಕಣದಲ್ಲಿ 18 ಅಭ್ಯರ್ಥಿಗಳು
Published 26 ಏಪ್ರಿಲ್ 2024, 8:21 IST
Last Updated 26 ಏಪ್ರಿಲ್ 2024, 8:21 IST
ಅಕ್ಷರ ಗಾತ್ರ

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕಾಂಗ್ರೆಸ್‌ನ ಎಂ.ಲಕ್ಷ್ಮಣ ಮತ್ತು ಬಿಜೆಪಿಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ರಾಜಕೀಯ ಭವಿಷ್ಯವನ್ನು ಬರೆಯಲು ಮತದಾರರು ಸಜ್ಜಾಗಿದ್ದಾರೆ.

ಕ್ಷೇತ್ರದ ನೂತನ ಸಂಸದರ ಆಯ್ಕೆಗೆ ಶುಕ್ರವಾರ (ಏ.26) ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಇದಕ್ಕಾಗಿ ಮೈಸೂರು ಮತ್ತು ಕೊಡಗು ಜಿಲ್ಲಾಡಳಿತಗಳಿಂದ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ನಿಯೋಜಿತ ಸಿಬ್ಬಂದಿ ಅಗತ್ಯ ಪರಿಕರಗಳೊಂದಿಗೆ ಮತಗಟ್ಟೆಗಳನ್ನು ತಲುಪಿದ್ದಾರೆ.

ಅಭ್ಯರ್ಥಿಗಳು, ಬೆಂಬಲಿಗರು, ಪಕ್ಷದ ಕಾರ್ಯಕರ್ತರು– ಮುಖಂಡರು ಮತದಾರರ ಮನವೊಲಿಕೆಗೆ ಕೊನೇ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ. ಮತದಾನದ ಮುನ್ನಾ ದಿನವಾದ ಗುರುವಾರ ಮನೆ–ಮನೆಗಳಿಗೆ ತೆರಳಿ ಮತ ಯಾಚಿಸುತ್ತಿದ್ದುದು ಕಂಡು ಬಂತು.

ಎಡಗೈ ತೋರು ಬೆರಳಿಗೆ ಶಾಯಿ: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಕಣದಲ್ಲಿರುವ 18 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳನ್ನು ಸೇರಲಿದೆ. ಒಟ್ಟು 20.92 ಲಕ್ಷ ಮತದಾರರಿದ್ದು, ಮತ ಚಲಾಯಿಸಿದವರಿಗೆ ಎಡಗೈ ತೋರು ಬೆರಳಿಗೆ ‘ಅಳಿಸಲಾಗದ ಶಾಯಿ’ ಹಾಕಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣೆಗಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2,202 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 5,742 ಬ್ಯಾಲೆಟ್ ಯೂನಿಟ್, 3,306 ಕಂಟ್ರೋಲ್‌ ಯೂನಿಟ್ ಹಾಗೂ 3,336 ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ಈ ಬಾರಿ ಪ್ರತಿ ಮತಗಟ್ಟೆಯಲ್ಲೂ ತಲಾ 2 ಬ್ಯಾಲೆಟ್ ಯೂನಿಟ್‌ಗಳು ಇರಲಿವೆ. ದೃಷ್ಟಿ ದೋಷವುಳ್ಳವರ ಸಹಾಯಕ್ಕೆ ‘ಬ್ರೈಲ್‌ ಬ್ಯಾಲೆಟ್ ಪೇಪರ್‌’ ಕೂಡ ಒದಗಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚು ನಿಗಾ: 2,434 ಪಿಆರ್‌ಒ, 2,482 ಎಪಿಆರ್‌ಒ, 4,893 ಪಿಒ ಸೇರಿದಂತೆ ಒಟ್ಟು 9,809 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. 435 ಸೂಕ್ಷ್ಮ ಹಾಗೂ 41 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅಲ್ಲಿನ ಚಟುವಟಿಕೆಗಳ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ಇಂತಹ ಮತಗಟ್ಟೆಗಳಿಗೆ 495 ಮೈಕ್ರೋಅಬ್ಸರ್ವರ್‌ಗಳನ್ನು ನಿಯೋಜಿಸಲಾಗಿದೆ. ಅಗತ್ಯ ಭದ್ರತಾ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ.

ಮತದಾನವು ಪೂರ್ಣಗೊಂಡ ನಂತರ ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು (ಕಂಟ್ರೋಲ್‌ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿವಿ ಪ್ಯಾಟ್) ಮತ್ತು ಚುನಾವಣಾ ಕಾಗದ ಪತ್ರಗಳನ್ನು ‘ಡಿ ಮಸ್ಟರಿಂಗ್‌’ ಸ್ಥಳದಿಂದ ನಗರದ ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ಸ್ಥಾಪಿಸಿರುವ ‘ಭದ್ರತಾ ಕೊಠಡಿ’ಗೆ ಸಾಗಿಸಿ ಸಂಗ್ರಹಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಎಂ. ಲಕ್ಷ್ಮಣ
ಎಂ. ಲಕ್ಷ್ಮಣ
ಜಿಲ್ಲೆಯಲ್ಲಿ 3 ಲೋಕಸಭಾ ಕ್ಷೇತ್ರಗಳಿಗೆ ಮತದಾನ
ಜಿಲ್ಲೆಯಲ್ಲಿ 3 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಏಕೆಂದರೆ ಚಾಮರಾಜನಗರ (ಮೀಸಲು) ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳನ್ನೂ ಜಿಲ್ಲೆಯು ಒಳಗೊಂಡಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್. ನಗರ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ವರುಣ ನಂಜನಗೂಡು ಎಚ್‌.ಡಿ. ಕೋಟೆ ಹಾಗೂ ತಿ.ನರಸೀಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಮತದಾನ ನಡೆಯಲಿದೆ.
ಜಾಗೃತಿ ಕಾರ್ಯಕ್ಕೆ ಸಿಗುವುದೇ ಫಲ?
ಚುನಾವಣಾ ಆಯೋಗದ ಸೂಚನೆ ಮೇರೆಗೆ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಜಿಲ್ಲಾಡಳಿತ ಹಾಗೂ ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಸಮಿತಿಯಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಲವು ರಾಯಭಾರಿಗಳನ್ನು ನೇಮಿಸಿ ಅರಿವು ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮದಲ್ಲೂ ಹಲವು ಚಟುವಟಿಕೆಗಳನ್ನು ನಡೆಸಲಾಗಿದೆ. ಸಂಘ–ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳಿಂದಲೂ ಹಲವು ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಇವರೆಲ್ಲರ ಪರಿಶ್ರಮ ಮತ್ತು ಪ್ರಯತ್ನಕ್ಕೆ ‘ಮತದಾರ ಪ್ರಭು’ಗಳ ಸ್ಪಂದನೆ ಏನು ಎನ್ನುವುದು ಶುಕ್ರವಾರ ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT