ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಜಾತ್ರೆಗೆ ಸಕಲ ಸಿದ್ಧತೆ

ಅಹಲ್ಯದಲ್ಲಿ 11, 12ರಂದು ಮಹೋತ್ಸವ; ಕೊಂಡೋತ್ಸವ, ಜಾತ್ರಾ ಮೆರವಣಿಗೆ ಆಕರ್ಷಣೆ
ಬಿಳಿಗಿರಿ.ಆರ್
Published 10 ಮಾರ್ಚ್ 2024, 6:20 IST
Last Updated 10 ಮಾರ್ಚ್ 2024, 6:20 IST
ಅಕ್ಷರ ಗಾತ್ರ

ಜಯಪುರ: ಸಮೀಪದ ಅಹಲ್ಯದಲ್ಲಿ ಮಾ.11, 12ರಂದು ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಕೊಂಡೋತ್ಸವ ನಡೆಯಲಿದ್ದು, ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

ಗ್ರಾಮದ ಹೊರವಲಯದಲ್ಲಿರುವ ಮಹದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಕೊಂಡೋತ್ಸವಕ್ಕೆ ಕಗ್ಗಲಿ ಸೌದೆಗಳನ್ನು ಶೇಖರಿಸಿ ಜೋಡಿಸಿದ್ದಾರೆ. ದೇವಾಲಯಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಹಸಿರು ಮಾವಿನ ತೋರಣಗಳನ್ನು ಕಟ್ಟಿ, ತೆಂಗಿನ ಗರಿ ಚಪ್ಪರ ಹಾಕಿ ಹೊಂಗೆಸೊಪ್ಪು ಹೊದಿಸಲಾಗಿದೆ.

ಸೋಮವಾರ ರಾತ್ರಿ ಗ್ರಾಮದ ಕೆರೆಯಲ್ಲಿ ಮಹದೇಶ್ವರ ಸ್ವಾಮಿ ಹಾಲಾರವಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಕೆರೆಯ ಇಕ್ಕೆಲೆಯಲ್ಲಿ ಬಾವಿ ತೋಡಲಾಗುತ್ತದೆ. ಈ ಬಾವಿಯ ಗಂಗಾ ಜಲಕ್ಕೆ ಪೂಜೆ ಸಲ್ಲಿಸಿ, ಹೊಸ ನೀರನ್ನು ಹಾಲಾರವಿ ಉತ್ಸವಕ್ಕೆ ಬಳಸುವುದು ವಾಡಿಕೆಯಾಗಿದೆ. ಮಹದೇಶ್ವರ ಸ್ವಾಮಿ ದೇವಾಲಯದಿಂದ ವೀರಭದ್ರೇಶ್ವರ ಸ್ವಾಮಿ ಹಲಗೆಯು ಗಂಗಾಸ್ಥಾನಕ್ಕೆ ಆಗಮಿಸಿದಾಗ ಸಕಲ ದೇವರ ಬಿರುದು ಬಾವಲಿಗಳಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿ ಜಾತ್ರಾ ಮೆರವಣಿಗೆಗೆ ಚಾಲನೆ ದೊರೆಯುತ್ತದೆ.

ಕೆರೆಯಿಂದ ಸಾಗುವ ಜಾತ್ರಾ ಮೆರವಣಿಗೆಯು ಮಧ್ಯರಾತ್ರಿ ದೇವಾಲಯ ತಲುಪಿದಾಗ ಮದ್ದು ಗುಂಡು ಸಿಡಿಸಲಾಗುತ್ತದೆ. ಕರ್ಪೂರದಿಂದ ಕೊಂಡ ಹಚ್ಚಲಾಗುತ್ತದೆ. ಮಂಗಳವಾರ ಮುಂಜಾನೆ ಸೂರ್ಯೋದಯಕ್ಕೂ ಮುನ್ನಾ ಕೊಂಡೋತ್ಸವ ನಡೆಯಲಿದೆ. ಅನಂತರ ಮಹದೇಶ್ವರ ಸ್ವಾಮಿ ಹುಲಿವಾಹನ ಮೂರ್ತಿ, ವೀರಭದ್ರೇಶ್ವರ ಸ್ವಾಮಿ, ಸಂಗಮ ತಾತಯ್ಯ, ಶಿವಕುಮಾರ ಸ್ವಾಮೀಜಿ, ಬಸವೇಶ್ವರರ ಮೂರ್ತಿಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತದೆ.

‘ಜಾತ್ರಾ ಮೆರವಣಿಗೆಯಲ್ಲಿ ಮಂಗಳವಾದ್ಯ, ತಮಟೆ, ವೀರಗಾಸೆ ಮತ್ತು ಪೂಜಾ ಕುಣಿತವು ಆಕರ್ಷಣಿಯವಾಗಿದೆ. ತಮಟೆಯ ತಾಳಕ್ಕೆ ಯುವಕರು ನಂದಿ ಕಂಬ ಹೊತ್ತು ಕುಣಿಯುತ್ತಾರೆ. ಸಾಂಸ್ಕೃತಿಕ ಪರಂಪರೆಯ ಸೊಗಡನ್ನು ಹಳ್ಳಿಯಲ್ಲಿ ನಡೆಯುವ ಜಾತ್ರೆ ಉತ್ಸವಗಳಲ್ಲಿ ಕಾಣಬಹುದು’ ಎಂದು ಗ್ರಾಮದ ಹಿರಿಯರಾದ ರಾಜೇಶ್ ತಿಳಿಸಿದರು.

ಕೊಂಡೋತ್ಸವಕ್ಕೆ ಕಗ್ಗಲಿ ಸೌದೆ ಶೇಖರಣೆ ಉತ್ಸವ ಮೂರ್ತಿಗಳ ಮೆರವಣಿಗೆ ಜನಪದ ಕಲಾತಂಡಗಳ ಮೆರುಗು

ಜಾತ್ರೋತ್ಸವಕ್ಕೆ ಅಕ್ಕಪಕ್ಕದ ಊರುಗಳಿಂದ ಕೊಂಡೋತ್ಸವ ನೋಡಲು ಆಗಮಿಸುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಕುಡಿಯುವ ನೀರು ಸೇರಿದಂತೆ ಜಾತ್ರೆಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ . - ಸಿದ್ದಪ್ಪ ಗ್ರಾಮದ ಯಜಮಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT