ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ: ಸಚಿವ ಕೆ.ವೆಂಕಟೇಶ್‌ಗೆ ಅದ್ದೂರಿ ಸ್ವಾಗತ

ಸಚಿವರಾಗಿ ಪ್ರಥಮ ಬಾರಿಗೆ ಆಗಮಿಸಿದ ಕೆ.ವೆಂಕಟೇಶ್‌ಗೆ ಪಟ್ಟಣದಲ್ಲಿ ಅದ್ದೂರಿ ಸ್ವಾಗತ
Published 4 ಜೂನ್ 2023, 15:33 IST
Last Updated 4 ಜೂನ್ 2023, 15:33 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಸಂಪುಟ ದರ್ಜೆ ಸಚಿವರಾಗಿ ಪ್ರಥಮ ಬಾರಿಗೆ ತಾಲ್ಲೂಕಿಗೆ ಆಗಮಿಸಿದ ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಅವರನ್ನು ಭಾನುವಾರ ಕಾಂಗ್ರೆಸ್‌ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ತಾಲ್ಲೂಕಿನ ಕಂಪಲಾಪುರಲ್ಲಿ ಮಂಗಳವಾದ್ಯಗಳೊಂದಿಗೆ ಪಟಾಕಿ ಸಿಡಿಸಿ, ಭಾರಿ ಗಾತ್ರದ ಗುಲಾಬಿ ಹಾರ ಹಾಕುವ ಮೂಲಕ ಸಚಿವರನ್ನು ಸ್ವಾಗತಿಸಲಾಯಿತು. ತಾಲ್ಲೂಕಿನ ಕಿರನೆಲ್ಲಿ, ಬಸಲಾಪುರ, ತಾತನಹಳ್ಳಿ ಗೇಟ್ ಬಳಿ ಸಹ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಸ್ವಾಗತಿಸಿದರು. ಪಟ್ಟಣದ ಕನ್ನಂಬಾಡಮ್ಮ ದೇವಾಲಯದ ಬಳಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಅದ್ದೂರಿಯಾಗಿ ಬರ ಮಾಡಿಕೊಂಡರು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ ಬಿ.ಎಂ ರಸ್ತೆಯಲ್ಲಿ ಮೆರವಣಿಗೆಯಲ್ಲಿ ತೆರಳಿ ಪಟ್ಟಣದ ಮಸಣಿಕಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಕೆ.ವೆಂಕಟೇಶ್, ‘ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಸೋಲು ಗೆಲುವು, ಏಳು ಬೀಳು ಎಲ್ಲವನ್ನು ಕಂಡಿದ್ದೇನೆ. ಜೊತೆಯಲ್ಲೇ ಇದ್ದು ಪಕ್ಷದ್ರೋಹ ಮಾಡಿರುವವರ ಬಗ್ಗೆಯೂ ತಿಳಿದಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿರುವವರ ಮಾಹಿತಿಯೂ ಇದೆ ಎಂದ ಅವರು, ಗ್ರಾಮಗಳ ಅಭಿವೃದ್ಧಿಗೆ ಮತ್ತು ಸಮುದಾಯದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ’ ನೀಡಿದರು.

‘ರಾಜ್ಯ ಸರ್ಕಾರ ನೀಡಿರುವ 5 ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಜಿ.ಪಂ ಮತ್ತು ತಾ.ಪಂ ಚುನಾವಣೆಗಳನ್ನು ಎದುರಿಸಿ ಗೆಲುವು ಪಡೆಯಲು ಎಲ್ಲ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಬೇಕು’ ಎಂದು ಕರೆ ನೀಡಿದರು.

‘ಗ್ಯಾರಂಟಿ ಜಾರಿಗೊಳಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಗರು, ಈಗ ಗ್ಯಾರಂಟಿ ಜಾರಿಯಾಗುವುದರಿಂದ ರಾಜ್ಯ ಆರ್ಥಿಕ ದಿವಾಳಿಯಾಗಲಿದೆ ಎಂದು ಹೇಳುವ ಮೂಲಕ ವ್ಯವಸ್ಥಿತ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಪ್ರಧಾನಿ ಮೋದಿ ಸಹ ನಾವು ನೀಡಿರುವ ಗ್ಯಾರಂಟಿಗಳನ್ನು ಟೀಕಿಸುವ ಮೂಲಕ ಸಣ್ಣತನ ಪ್ರದರ್ಶಿಸಿದ್ದಾರೆ’ ಎಂದು ಕಿಡಿಕಾರಿದರು.

‘ಪ್ರಧಾನಿ ಮೋದಿ 2014ರಲ್ಲಿ ಕಪ್ಪು ಹಣ ವಿದೇಶದಿಂದ ಬಂದಲ್ಲಿ ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಣ ಹಾಕುತ್ತೇನೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಸಂಸದ ಪ್ರತಾಪ್ ಸಿಂಹ ಅವರನ್ನು ಕೇಳಿ ಎಂದ ಅವರು, ಕೊಟ್ಟ ಮಾತನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ಕಾರ್ಯತಂತ್ರ ರೂಪಿಸುತ್ತಿರುವುದನ್ನು ಉದ್ದೇಶಪೂರ್ವಕವಾಗಿ ತಡ ಮಾಡಲಾಗುತ್ತಿದೆ ಎನ್ನುವಂತೆ ವಿರೋಧ ಪಕ್ಷಗಳು ಬಿಂಬಿಸಿವೆ’ ಎಂದು ಆರೋಪಿಸಿದರು.

‘ನಮ್ಮ ಗ್ಯಾರಂಟಿಗಳ ಬಗ್ಗೆ ರಾಜ್ಯದ ಶೇ 70ಕ್ಕೂ ಹೆಚ್ಚು ಜನರು ಸ್ವಾಗತಿಸಿದ್ದಾರೆ. ಕಾರ್ಯಕರ್ತರು ಸಮರ್ಪಕವಾಗಿ ಯೋಜನೆ ಅನುಷ್ಠಾನವಾಗುವ ಬಗ್ಗೆ ಕಾಳಜಿ ವಹಿಸಬೇಕು’ ಎಂದು ತಿಳಿಸಿದರು.

ಸಚಿವರನ್ನು ಅಭಿನಂದಿಸಲು ಕಾರ್ಯಕರ್ತರು ಮುಗಿಬಿದ್ದಿದ್ದರಿಂದ, ನೂಕು ನುಗ್ಗಲು ಉಂಟಾಯಿತು ಕಾರ್ಯಕರ್ತರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸಾಕಷ್ಟು ಕಾರ್ಯಕರ್ತರಿಗೆ ಊಟ ಸಿಗದ ಕಾರಣ, ಮತ್ತೊಮ್ಮೆ ತಯಾರಿಸಿ ಉಣ ಬಡಿಸಲಾಯಿತು. 

ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯರಾದ ನಿತಿನ್ ವೆಂಕಟೇಶ್, ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮತ್ ಜಾನ್ ಬಾಬು, ಡಿ.ಟಿ.ಸ್ವಾಮಿ, ಖಜಾಂಚಿ ಬಿ.ಜೆ.ಬಸವರಾಜ್, ನಗರ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಗೌಡ, ಮುಖಂಡರಾದ ಎಚ್.ಡಿ.ಗಣೇಶ್, ಬಿ.ವಿ.ಜವರೇಗೌಡ, ಕೆ.ಹೊಲದಪ್ಪ, ಪಿ.ಮಹದೇವ್, ಮೋಹನ್ ಮಾಸ್ಟರ್, ಕೆ.ಆರ್.ನಿರೂಪ, ಪುರಸಭೆ ಸದಸ್ಯರಾದ ಮಂಜುನಾಥ್, ಚಾಮರಾಜ್, ಶಾಮ್, ರವಿ ಇದ್ದರು.

ಜೊತೆಯಲ್ಲಿದ್ದು ಪಕ್ಷದ್ರೋಹ ಮಾಡಿರುವವರ ಬಗ್ಗೆ ತಿಳಿದಿದೆ ಗ್ಯಾರಂಟಿ ಬಗ್ಗೆ ರಾಜ್ಯದ ಶೇ 70ಕ್ಕೂ ಹೆಚ್ಚು ಜನರು ಸ್ವಾಗತ ಆರ್ಥಿಕ ದಿವಾಳಿಯಾಗಲಿದೆ ಎಂದು ವ್ಯವಸ್ಥಿತ ಅಪಪ್ರಚಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT