ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಪ್ಪು ಮಾಹಿತಿ: ತೋಟಗಾರಿಕೆ ಇಲಾಖೆ ಅಧಿಕಾರಿಗೆ ಸಿಎಂ ‘ಕ್ಲಾಸ್’

Published : 27 ಸೆಪ್ಟೆಂಬರ್ 2024, 11:38 IST
Last Updated : 27 ಸೆಪ್ಟೆಂಬರ್ 2024, 11:38 IST
ಫಾಲೋ ಮಾಡಿ
Comments

ಮೈಸೂರು: ಕೆಡಿಪಿ ಸಭೆಗೆ ತಪ್ಪು ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅಂಗಡಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

‘ಸರಿಯಾದ ಹೋಂವರ್ಕ್ ಮಾಡಿಕೊಂಡು ಬಂದಿಲ್ಲವೇಕೆ? ತಪ್ಪು ಮಾಹಿತಿ ಕೊಟ್ಟರೆ ಹೇಗೆ?’ ಎಂದು ಸಿದ್ದರಾಮಯ್ಯ ಮತ್ತು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಖಾರವಾಗಿ ಕೇಳಿದರು. ಆಗ ಆ ಅಧಿಕಾರಿ ಕ್ಷಮೆ ಕೋರಿದರು. ‘ಮುಂದೆ ಯಡವಟ್ಟುಗಳು ಆಗದಂತೆ ಎಚ್ಚರಿಕೆ ವಹಿಸುತ್ತೇನೆ’ ಎಂದು ತಿಳಿಸಿದರು.

‘ಹಿಂದೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಈಗ ನಮ್ಮ ಸಿದ್ದರಾಮನಹುಂಡಿಯಲ್ಲಿ ಯಾರೂ ರೇಷ್ಮೆ ಬೆಳೆಯುತ್ತಿಲ್ಲವೇಕೆ?’ ಎಂದು ಸಿಎಂ ಕೇಳಿದರು.

ಉತ್ತರಿಸಿದ ಅಧಿಕಾರಿ, ‘ಸಿದ್ದರಾಮನಹುಂಡಿಯಲ್ಲಿ ಇಬ್ಬರು ಮಾತ್ರ ರೇಷ್ಮೆ ಬೆಳೆಯುತ್ತಿದ್ದಾರೆ’ ಎಂದು ತಿಳಿಸಿದರು.

‘ರೇಷ್ಮೆ ಬೆಳೆ ಪ್ರದೇಶ ವಿಸ್ತರಿಸಲು ಏನು ಕ್ರಮ ಕೈಗೊಂಡಿದ್ದೀರಿ’ ಎಂಬ ಮುಖ್ಯಮಂತ್ರಿ ಪ್ರಶ್ನೆಗೆ, ‘ಲಭ್ಯ ಸಿಬ್ಬಂದಿಯಲ್ಲೇ 10 ಹಳ್ಳಿ ಆಯ್ಕೆ ಮಾಡಿಕೊಂಡು ವಿಸ್ತರಣೆಗೆ ಕೆಲಸ ಮಾಡುತ್ತಿದ್ದೇವೆ. ನಾವೇ ಗೂಡುಗಳನ್ನು ನಿರ್ಮಿಸಿ ಕೊಟ್ಟು, ಪ್ರೋತ್ಸಾಹ ನೀಡುತ್ತಿದ್ದೇವೆ’ ಎಂದು ಅಧಿಕಾರಿ ವಿವರಿಸಿದರು.

ಮಧ್ಯಪ್ರವೇಶಿಸಿದ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ‘ಸಿಬ್ಬಂದಿ ಕೊರತೆ ಇದೆ’ ಎಂದು ಹೇಳಿದರು.

ಆ ಮಾತನ್ನು ಒಪ್ಪದ ಸಿಎಂ, ‘ರೇಷ್ಮೆ ಕೃಷಿ ಕಡಿಮೆಯಾಗಲು ಇದೊಂದೇ ಕಾರಣ ಅಲ್ಲ. ಬೇರೆ ಬೇರೆ ಕಾರಣಗಳಿವೆ. ಅಧಿಕಾರಿಗಳು ಅವನ್ನೆಲ್ಲಾ ಗುರುತಿಸಿ ಪರಿಹಾರ ರೂಪಿಸಬೇಕು’ ಎಂದು ಸೂಚಿಸಿದರು.

ಸಂಸತ್ತಿನಲ್ಲಿ ನಡೆದಿದ್ದ ಚರ್ಚೆಯೊಂದನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಹಳ್ಳಿ ಜನರು ಉತ್ಪಾದಿಸುವ ಹಾಲು ಪಟ್ಟಣಗಳಿಗೆ ಬರುತ್ತಿದೆ. ಪಟ್ಟಣದಲ್ಲಿ ತಯಾರಾಗುವ ಮದ್ಯ ಹಳ್ಳಿಗಳಿಗೆ ಬಂದಿದೆ ಎಂದರು.

‘ಹಸು ಸಾಕಾಣೆಕಾರರು ಮೊದಲು ಹಾಲನ್ನು ತಾವು ಕುಡಿದು, ಮಕ್ಕಳಿಗೂ ಕೊಟ್ಟು ಹೆಚ್ಚುವರಿಯಾದುದನ್ನು ಮಾತ್ರವೇ ಮಾರಬೇಕು. ಆಗ ಅವರಿಗೂ ಆರೋಗ್ಯಕರ ಹಾಲು ಸಿಗುತ್ತದೆ. ಅಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.

‘ಹಾಲು ಒಕ್ಕೂಟಗಳಲ್ಲಿರುವ ಅನಗತ್ಯ ಹೆಚ್ಚುವರಿ ಸಿಬ್ಬಂದಿಯನ್ನು ತೆಗೆದು ಹಾಕಬೇಕು. ಹಾಲು ಮತ್ತು ಉಪ ಉತ್ಪನ್ನಗಳ ಮಾರುಕಟ್ಟೆಯನ್ನು ಹೆಚ್ಚೆಚ್ಚು ವಿಸ್ತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಪ್ರೊಟೀನ್‌ ಪೌಡರ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಇದರ ಉತ್ಪಾದನೆ ಮತ್ತು ಮಾರಾಟದ ಕಡೆಗೆ ಗಮನ ಕೊಡಿ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸಲಹೆ ನೀಡಿದರು. ‘ಕುರಿ ಮತ್ತು ಕೋಳಿ ಸಾಕಣೆಗೆ ಸಹಾಯಧನ ಸೌಲಭ್ಯವನ್ನು ಹೆಚ್ಚೆಚ್ಚು ಮಂದಿಗೆ ವಿಸ್ತರಿಸಬೇಕು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT