ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಸರ್ಕಾರವನ್ನು ಅಮಾನತ್ತಿನಲ್ಲಿಡಿ: ವಿಶ್ವನಾಥ್‌ ಒತ್ತಾಯ

Published 23 ಆಗಸ್ಟ್ 2024, 6:38 IST
Last Updated 23 ಆಗಸ್ಟ್ 2024, 6:38 IST
ಅಕ್ಷರ ಗಾತ್ರ

ಮೈಸೂರು: ‘ಹಗರಣಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಮತ್ತು ಶಾಸಕಾಂಗವನ್ನು ರಾಜ್ಯಪಾಲರು ಅಮಾನತ್ತಿನಲ್ಲಿರಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್ ಒತ್ತಾಯಿಸಿದರು.

‘ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ಕ್ರಮ ಕೈಗೊಳ್ಳಲಾಗಿತ್ತು. ನಂತರ, ಪಕ್ಷದ ಹೈಕಮಾಂಡ್‌ ಸೂಚನೆ ಮೇರೆಗೆ ಬಂಗಾರಪ್ಪ ಮುಖ್ಯಮಂತ್ರಿಯಾದರು’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ನೆನಪಿಸಿಕೊಂಡರು.

‘ಮುಡಾ ಕಡತವನ್ನು ವೈಟ್ನರ್ ಹಾಕಿ ತಿದ್ದಿರುವುದು ನಾಚಿಕೆಗೇಡಿನ ಸಂಗತಿ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಹೆಲಿಕಾಪ್ಟರಿನಲ್ಲಿ ಬಂದು ಕಡತ ಹೊತ್ತೊಯ್ದಿದ್ದಾರೆ. ಕಡತ ಕಳವು ಮಾಡಿದ್ದಕ್ಕೆ ಸಚಿವರ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ಹಿಂದಿನ ಇಬ್ಬರು ಆಯುಕ್ತರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಲೋಕಾಯುಕ್ತ ಸುಮೊಟೊ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು. ಆಗ ಎಲ್ಲ ಪಕ್ಷದವರೂ ಸಿಕ್ಕಿಹಾಕಿಕೊಳ್ಳುತ್ತಾರೆ’ ಎಂದು ಆಗ್ರಹಿಸಿದರು.

‘ಈ ದೇಶವನ್ನು ಕಟ್ಟಿದ ಕಾಂಗ್ರೆಸ್ ಪಕ್ಷದಿಂದ ಗೂಂಡಾ ವರ್ತನೆ ಸರಿಯಲ್ಲ. ರಾಜ್ಯಪಾಲರು ನಿಮಗೆ (ಸಿಎಂ) ನೋಟಿಸ್ ಕೊಟ್ಟಿದ್ದರು. ಅದಕ್ಕೆ ನೀವು ಉತ್ತರಿಸಬೇಕಿತ್ತೇ ಹೊರತು, ನಿಮ್ಮ ಸಚಿವ ಸಂಪುಟ‌ವಲ್ಲ. ರಾಜ್ಯಪಾಲರೇನು ನಿಮ್ಮ ರಾಜೀನಾಮೆ ಕೇಳಿರಲಿಲ್ಲ. ನೀವೇ ಖುದ್ದಾಗಿ‌ ಭೇಟಿ ಮಾಡಿ ಉತ್ತರ ನೀಡಬಹುದಿತ್ತು’ ಎಂದರು.

‘ಸಿದ್ದರಾಮಯ್ಯ, ನಿಮ್ಮಿಂದ ಆಗಿರುವ ತಪ್ಪನ್ನು ಈಗಲೂ ಸರಿಪಡಿಸಿಕೊಳ್ಳಬಹುದು. ನೀವು ಭ್ರಷ್ಟರಲ್ಲ. ದುರ್ಯೋಧನ ಹಾಳಾಗಿದ್ದು ದುರಂಹಕಾರದಿಂದ.‌ ನಿಮ್ಮ ಮುಖಕ್ಕೆ ಮಸಿ ಬಳಿಯುತ್ತಿರುವುದು ನಿಮ್ಮ ಶಾಸಕರು, ಮಂತ್ರಿಗಳೇ ಹೊರತು ಬೇರೆ ಪಕ್ಷದವರಲ್ಲ. ನಿಮಗೆ ಜಿಂದಾಬಾದ್ ಕೂಗುವವರೇ ನಿಮ್ಮ ವಿರುದ್ಧ ತಂತ್ರ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಕಾನೂನಿಗೆ ಎಲ್ಲರೂ ಒಂದೇ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅಕ್ರಮ ಎಸಗಿರುವ ಕುರಿತು ಈಗಾಗಲೇ ತನಿಖಾ ಸಂಸ್ಥೆ ವರದಿ ನೀಡಿದೆ. ಅದನ್ನು ಆಧರಿಸಿ ರಾಜ್ಯಪಾಲರು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT