ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಂಜನಗೂಡು | ಮೃತಪಟ್ಟು ಮೂರು ವರ್ಷದ ನಂತರ ಫಲಾನುಭವಿ ಖಾತೆಗೆ ಹಣ

ಪಿಡಿಒ ವಿರುದ್ಧ ಗ್ರಾ.ಪಂ ಅಧ್ಯಕ್ಷೆ ದೂರು
Published 30 ಜೂನ್ 2024, 13:58 IST
Last Updated 30 ಜೂನ್ 2024, 13:58 IST
ಅಕ್ಷರ ಗಾತ್ರ

ನಂಜನಗೂಡು: ಬಸವ ಯೋಜನೆಯ ಅಂತಿಮ ಕಂತಿನ ಹಣ ಮಹಿಳೆ ಮೃತಪಟ್ಟು ಮೂರು ವರ್ಷದ ನಂತರ ಖಾತೆಗೆ ಜಮೆ ಆಗಿರುವ ಪ್ರಕರಣ ತಾಲ್ಲೂಕಿನ ದೊಡ್ಡ ಕವಲಂದೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಗ್ರಾ.ಪ೦. ವ್ಯಾಪ್ತಿಯ ಗಟ್ಟವಾಡಿಪುರ ಗ್ರಾಮದ ಕೆಂಪಮ್ಮ ಅವರ ಖಾತೆಗೆ ₹ 59,600 ಜಮೆ ಮಾಡಲಾಗಿದೆ. ಈ ಬಗ್ಗೆ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 

ವಿವರ: ಕೆಂಪಮ್ಮ ಅವರು 2017-18ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು ಮಂಜೂರಾತಿ ನೀಡಲಾಗಿತ್ತು. ಜಿಪಿಎಸ್ ನಂತರ 1 ಮತ್ತು 2ನೇ ಬಿಲ್ ಅವರ ಖಾತೆಗೆ ಪಾವತಿಸಲಾಗಿದೆ. ಅನಾರೋಗ್ಯದಿಂದ ಕೆಂಪಮ್ಮ 9-1-2020 ರಂದು ಮೃತಪಟ್ಟಿದ್ದಾರೆ. ಹೀಗಿದ್ದರೂ ಪಿಡಿಒ ನಿರ್ಮಲಾ ಅವರು ಮೃತರ ಹೆಸರಿಗೆ ಸರ್ಟಿಫೈ ಮಾಡಿ 8-9-2023 ರಂದು ಅವರ ಖಾತೆಗೆ ಹಣ ಜಮೆ ಮಾಡಿದ್ದು ಕಾನೂನಿಗೆ ವಿರುದ್ಧವಾಗಿದೆ ಎಂದು ಪಿಡಿಒ ವಿರುದ್ಧ ಅಧ್ಯಕ್ಷೆ ಜ್ಯೋತಿ ದೂರಿದ್ದಾರೆ.

‘ಪಂಚಾಯಿತಿ ಕಚೇರಿಯ ಸಮಯ ಹೊರತುಪಡಿಸಿ ಪಿಡಿಒ ಅವರು ನಗರದ ಆರ್.ಪಿ. ರಸ್ತೆಯಲ್ಲಿರುವ ಕಂಪ್ಯೂಟರ್ ಸೆಂಟರ್‌ನಲ್ಲಿ ಯಾವುದೇ ಸಭೆ ನಡಾವಳಿಯನ್ನು ಮಾಡದೆ. ಪಂಚಾಯಿತಿ ಲಾಗಿನ್ ಬಳಸಿಕೊಂಡು 57ಕ್ಕೂ ಹೆಚ್ಚು ಇ- ಸ್ವತ್ತುಗಳನ್ನು ಮಾಡಿದ್ದಾರೆ’ ಎಂದು ಅಧ್ಯಕ್ಷರು ಆರೋಪಿಸಿದ್ದಾರೆ.

‘ನಿಯಮಬಾಹಿರವಾಗಿ ನಡೆದುಕೊಳ್ಳುತ್ತಿರುವ ಪಿಡಿಒ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ತಾಲ್ಲೂಕು ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಅಧ್ಯಕ್ಷರು, ಉಪಾಧ್ಯಕ್ಷ ಹಾಗೂ ಸದಸ್ಯರೊಂದಿಗೆ ಧರಣಿ ಸತ್ತಾಗ್ರಹ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾ.ಪಂ. ಇಒ ಜೆರಾಲ್ಡ್ ರಾಜೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಬಗ್ಗೆ ಪಿಡಿಒ ನಿರ್ಮಲಾ ವಿರುದ್ಧ ದೂರು ಬಂದಿದೆ. ಪಂಚಾಯಿತಿ ಕಾರ್ಯಾಲಯದಲ್ಲಿ ಸಮಿತಿ ರಚನೆ ಮಾಡಿ ಕೂಲಂಕಶವಾಗಿ ಎಲ್ಲಾ ದಾಖಲಾತಿ ಪತ್ರ ಮತ್ತು ಮಾಹಿತಿಯನ್ನು ಪಡೆದುಕೊಳ್ಳಲು ಕ್ರಮ ವಹಿಸಲಾಗಿದೆ. ಕೆಂಪಮ್ಮ ಅವರ ಖಾತೆಗೆ ಪಾವತಿಯಾದ ಹಣ ಡ್ರಾ ಆಗಿದೆಯೇ, ಮೃತಪಟ್ಟ ಮೂರು ವರ್ಷಗಳ ನಂತರ ಹಣ ಜಮಾ ಮಾಡಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಿ ವರದಿಯನ್ನು ಜಿ.ಪಂ.ಗೆ ಸಲ್ಲಿಸಲಾಗುವುದು. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT