ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆ ಕಡ್ಡಾಯ: ಅಂಗೀಕಾರಕ್ಕೆ ಶಿಫಾರಸಿಗೆ ಸೂಚಿಸಿ– ಶ್ರೀನಿವಾಸ ಪ್ರಸಾದ್‌

‘ಪ್ರಜಾವಾಣಿ’ ವರದಿ ಉಲ್ಲೇಖಿಸಿ ಪತ್ರ ಬರೆದ ಸಂಸದ ಶ್ರೀನಿವಾಸ ಪ್ರಸಾದ್‌
Published 28 ಅಕ್ಟೋಬರ್ 2023, 12:49 IST
Last Updated 28 ಅಕ್ಟೋಬರ್ 2023, 12:49 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯದ ಎಲ್ಲ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತೃಭಾಷಾ ಮಾಧ್ಯಮದಲ್ಲೇ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಲು ರಾಜ್ಯ ವಿಧಾನಮಂಡಲದ ಉಭಯ ಸದನಗಳು 2015ರಲ್ಲಿ ಅಂಗೀಕರಿಸಿದ್ದ ಮಸೂದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ ಎಂಬ ಭಾವನೆಯನ್ನು ಹೋಗಲಾಡಿಸಬೇಕು’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಇದೇ ವರ್ಷದ ಜ.5ರಂದು ಪ್ರಕಟವಾಗಿದ್ದ ‘ಮಾತೃಭಾಷೆ ಕಡ್ಡಾಯಕ್ಕೆ ಕೇಂದ್ರದ ಅಸಹಕಾರ’ ಶೀರ್ಷಿಕೆಯ ವರದಿಯನ್ನು ಉಲ್ಲೇಖಿಸಿರುವ ಅವರು, ‘ಮಾತೃಭಾಷೆ ಶಿಕ್ಷಣ ಮಾಧ್ಯಮ ಆಗಬೇಕು ಎಂಬ ನಮ್ಮೆಲ್ಲರ ಆಶಯಗಳಿಗೆ ಒತ್ತಾಸೆಯಾಗಬೇಕು’ ಎಂದು ಕೋರಿದ್ದಾರೆ.

‘ಕರ್ನಾಟಕ ವಿಧಾನಸಭೆಯು 2015ರಲ್ಲಿ ಒಂದರಿಂದ ಐದನೇ ತರಗತಿವರೆಗೆ ಮಾತೃಭಾಷೆ ಅಥವಾ ರಾಜ್ಯ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತರುವ ಮಸೂದೆ ಅಂಗೀಕರಿಸಿದೆ. ಅದನ್ನು ಬಿಜೆಪಿ ಸೇರಿದಂತೆ ರಾಜ್ಯದ ಎಲ್ಲ ಪಕ್ಷಗಳೂ ಒಪ್ಪಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ನಂತರ ಅದು ರಾಜ್ಯವಾಲರ ಸಮ್ಮತಿ ಪಡೆದು 2017ರಲ್ಲಿ ರಾಷ್ಟ್ರಪತಿಗೆ ರವಾನೆಯಾಗಿದೆ. ಅದನ್ನು ರಾಷ್ಟ್ರಪತಿಗೆ ಶಿಫಾರಸಿನೊಂದಿಗೆ ಕಳುಹಿಸಬೇಕಾದ ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದವರು ಈವರೆಗೂ ಕಳುಹಿಸಿಲ್ಲ’ ಎಂದು ತಿಳಿಸಿದ್ದಾರೆ.

‘ನೀವು ಮಾತೃಭಾಷಾ ಮಾಧ್ಯಮದ ಪ್ರಬಲ ಪ್ರತಿಪಾದಕರೆಂಬುದು ನನಗೆ ತಿಳಿದಿದೆ. ಆದ್ದರಿಂದ ಈ ವಿಷಯವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ರಾಜ್ಯದಿಂದ ಕಳುಹಿಸಿದ ಮಸೂದೆಗೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಅನಗತ್ಯ ಮತ್ತು ಅಸಮಂಜಸವಾದ ಆಕ್ಷೇಪಗಳನ್ನು ಎತ್ತಿ ರಾಜ್ಯ ಸರ್ಕಾರಕ್ಕೆ ಪದೇ ಪದೇ ಪತ್ರ ಬರೆದಿದೆ. ಇದಕ್ಕೆ ರಾಜ್ಯ ಸರ್ಕಾರ ಉತ್ತರಿಸಿಲ್ಲ ಎಂಬ ನೆಪವನ್ನು ಹೇಳಿ, ಆಕ್ಷೇಪಗಳಿಗೆ ಉತ್ತರ ಕೊಡದಿದ್ದರೆ ಮಸೂದೆಯನ್ನು ಹಿಂಪಡೆಯಬೇಕೆಂದು 2020ರಲ್ಲಿ ಸೂಚಿಸಿದೆ. ಇದಲ್ಲವನ್ನೂ ಆಧಾರವಾಗಿಟ್ಟುಕೊಂಡು ಪ್ರಮುಖ ಕನ್ನಡ ಪತ್ರಿಕೆಯಾದ ‘ಪ್ರಜಾವಾಣಿ’ ವರದಿ ಮಾಡಿದೆ’ ಎಂದು ಉಲ್ಲೇಖಿಸಿದ್ದಾರೆ.

‘ಮಸೂದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವು ಒತ್ತಡ ಹೇರುತ್ತಿದೆ ಎಂಬ ಭಾವನೆ ಬರುವಂತೆ ವರದಿಯನ್ನು ಬರೆಯಲಾಗಿದೆ. ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪತ್ರ ವ್ಯವಹಾರವು ಆ ರೀತಿಯ ಭಾವನೆ ಮೂಡಿಸುವುದು ಸಹಜ. ಆದರೆ, ನನಗೆ ತಿಳಿದಂತೆ ಕೇಂದ್ರ ಸರ್ಕಾರದ ನಿಲುವು ಹಾಗಿರುವುದಿಲ್ಲ. ಇದು ಇಂಗ್ಲಿಷ್‌ ಶಾಲೆಗಳ ಹಿತಾಸಕ್ತಿಗಳ ಪರವಾಗಿರುವ ಕೇಂದ್ರ ಸರ್ಕಾರದ ಅಧಿಕಾರಶಾಹಿಯ ಕುತಂತ್ರ ಎಂದು ನನ್ನ ಭಾವನೆ’ ಎಂದು ಹೇಳಿದ್ದಾರೆ.

‘ಈ ಬಗ್ಗೆ ಕೂಡಲೇ ಮಧ್ಯಪ್ರವೇಶಿಸಿ, ಆಕ್ಷೇಪಗಳನ್ನು ಹಿಂತೆಗೆದುಕೊಂಡು ಮಸೂದೆಯನ್ನು ರಾಷ್ಟ್ರಪತಿ ಅವರಿಗೆ ಅಂಗೀಕಾರಕ್ಕಾಗಿ ಶಿಫಾರಸು ಮಾಡಿ ಕಳುಹಿಸುವಂತೆ ಸಂಬಂಧಿಸಿದ ಸಚಿವಾಲಯಕ್ಕೆ ಆದೇಶಿಸಬೇಕು. ಈ ಮೂಲಕ, ಕೇಂದ್ರದ ಬಗ್ಗೆ ಮೂಡಿರುವ ತಪ್ಪು ಭಾವನೆ ಹೋಗಲಾಡಿಸಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT