ಮೈಸೂರು: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಗೆ ಮುಖ್ಯಮಂತ್ರಿ ತವರೂರಿನಲ್ಲಿ ಸೋಮವಾರ ಭಾರಿ ಆಕ್ರೋಶ ವ್ಯಕ್ತವಾಯಿತು.
ವರುಣ ಮತ್ತು ತಿ.ನರಸೀಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸೋಮವಾರ ಕರೆದಿದ್ದ ತಿ.ನರಸೀಪುರ ಪಟ್ಟಣ ಹಾಗೂ ಜಿಲ್ಲಾ ಕೇಂದ್ರದ ಚಾಮುಂಡಿ ಬೆಟ್ಟದಲ್ಲಿ ಬಂದ್ ಯಶಸ್ವಿಯಾಯಿತು. ರಾಜ್ಯಪಾಲರ ವಜಾಕ್ಕೆ ಒತ್ತಾ ಯಿಸಿ ಪ್ರತಿಭಟನಾ ಧರಣಿ ನಡೆ ಯಿತು. ಅಂಗಡಿಗಳು ಮುಚ್ಚಿದ್ದವು. ಕೆಲ ಶಾಲೆಗಳಿಗೆ ರಜೆ ನೀಡಲಾಗಿತ್ತು. ದೇವಾಲಯ ತೆರೆದಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಜೊತೆಗೆ ಕಾಂಗ್ರೆಸ್ ನಾಯಕರ ದಂಡೇ ಪಾಲ್ಗೊಂಡಿತ್ತು.
ಬೆಂಕಿ ತಗುಲಿ ಇಬ್ಬರಿಗೆ ಗಾಯ(ಬಾಗಲಕೋಟೆ ವರದಿ): ನಗರದಲ್ಲಿ ಸೋಮವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯಪಾಲರ ಪ್ರತಿಕೃತಿ ದಹಿಸುವಾಗ, ಬೆಂಕಿ ವ್ಯಾಪಿಸಿ ಪಕ್ಷದ ಇಬ್ಬರು ಕಾರ್ಯಕರ್ತರಿಗೆ ಸುಟ್ಟ ಗಾಯಗಳಾದವು.
‘ಟಯರ್ ಮೇಲೆ ನಿಲ್ಲಿಸಲಾ ಗಿದ್ದ ಪ್ರತಿಕೃತಿಯ ಮೇಲೆ ಬಾಟಲಿಗಳಲ್ಲಿ ಮೇಲಿಂದ ಪೆಟ್ರೋಲ್ ಸುರಿಯುವಾಗ, ದಿಢೀರ್ ಬೆಂಕಿ ವ್ಯಾಪಿಸಿತು. ಅಲ್ಲಿಯೇ ಇದ್ದ ನಾಗರಾಳ ಎಸ್‌ಪಿ ಗ್ರಾಮದ ದೇವಪ್ಪ ಮಾಗಿ ಅವರ ಮುಖ, ಕುತ್ತಿಗೆ ಮತ್ತು ಕೈಗೆ ಗಾಯವಾಯಿತು. ಗಿರಿಸಾಗರ ಗ್ರಾಮದ ಹನಮಂತ ಅವರ ಕೈಗೆ ಸ್ವಲ್ಪ ಗಾಯವಾಯಿತು.
‘ಜಿಲ್ಲಾ ಆಸ್ಪತ್ರೆಯಲ್ಲಿ ಇಬ್ಬರಿಗೂ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಯಾವುದೇ ದೂರು ದಾಖಲಾಗಿಲ್ಲ. ಪರಿಶೀಲನೆ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದರು
ಪ್ರತಿಭಟನೆ ವೇಳೆ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿಸಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುವರು’ ಎಂದರು.
ಕಾನೂನು ಹೋರಾಟ: ಯತೀಂದ್ರ
ಮೈಸೂರು: ‘ನನ್ನ ತಾಯಿ ಎಂದೂ ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ. ಪತಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರ ವಿರುದ್ಧ ಅವರೂ ಕಾನೂನು ಹೋರಾಟ ಮಾಡಲಿದ್ದಾರೆ’ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತ ನಾಡಿ, ‘ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಗತ್ಯವಾಗಿ ತಂದಿರುವುದರಿಂದ ಅವರಿಗೂ ಬೇಸರವಾಗಿದೆ’ ಎಂದರು.
‘ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಅಸಾಂವಿಧಾನಿಕವಾಗಿದ್ದು, ಮುಖ್ಯಮಂತ್ರಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ವರ್ತಿಸಿದಂತೆ ಮುಂದಿನ ಮುಖ್ಯಮಂತ್ರಿ ವಿರುದ್ಧವೂ ವರ್ತಿಸುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಂಡು ಏಕಚಕ್ರಾಧಿಪತ್ಯ ಸ್ಥಾಪಿಸಲು ಹೊರಟಿದೆ’ ಎಂದು ಆರೋಪಿಸಿದರು.
‘ಕರ್ನಾಟಕದಲ್ಲಿ ಕಾಂಗ್ರೆಸ್‌ನ ದೊಡ್ಡ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಇಳಿಸಿದರೆ ಪಕ್ಷವನ್ನು ದುರ್ಬಲಗೊಳಿಸಬಹುದು. ಮುಂದೆ ಬರುವ ಮುಖ್ಯಮಂತ್ರಿಗಳನ್ನೂ ಬೀಳಿಸಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಅವರ ಗುರಿ ಇರುವುದೇ ಬಿಜೆಪಿಯೇತರ ಸರ್ಕಾರಗಳ ಮೇಲೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲರ ಆದೇಶ ತಿರಸ್ಕರಿಸಿ: ಮನವಿ
ಬೆಂಗಳೂರು: 'ರಾಜ್ಯಪಾಲರು ನನಗೆ ನೀಡಿದ್ದ ಷೋಕಾಸ್ ನೋಟಿಸ್‌ಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ 2024ರ ಆಗಸ್ಟ್ 1ರಂದು ಸಲಹೆಯನ್ನು ಧಿಕ್ಕರಿಸಿ ರಾಜ್ಯಪಾಲರು ನನ್ನ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದು, ಈ ನಿರ್ಧಾರ ಅಸಾಂವಿಧಾನಿಕವಾಗಿದೆ. ಕಾನೂನಿನ ಎಲ್ಲಾ ಅಂಶಗಳನ್ನೂ ಗಾಳಿಗೆ ತೂರಿರುವ ಇಂತಹ ಆದೇಶವನ್ನು ವಜಾ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಿಟ್ ಅರ್ಜಿಯಲ್ಲಿ ಕೋರಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸೋಮವಾರ ವಿಚಾರಣೆ ನಡೆಸಿದರು.
ಅರ್ಜಿಯಲ್ಲಿ ಏನಿದೆ?: ‘ಸಂಪುಟ ಸಭೆ ತೀರ್ಮಾನದ ಜೊತೆಗೆ ಸಲ್ಲಿಸಲಾಗಿದ್ದ ಅಪಾರ ದಾಖಲೆಗಳನ್ನು ಪರಿಶೀಲಿ ಸದೆ ರಾಜ್ಯಪಾಲರು ತನಿಖೆಗೆ ಮಂಜೂರಾತಿ ನೀಡಿದ್ದಾರೆ. ಸ್ವತಂತ್ರವಾಗಿ ತೀರ್ಮಾನಿಸದೇ ಪೂರ್ವ ನಿರ್ಧರಿತವಾಗಿ ಹೊರಡಿಸಿರುವ ಈ ಆದೇಶ ಸುಪ್ರೀಂ ಕೋರ್ಟ್ ರೂಪಿಸಿ ರುವ ತತ್ವಗಳಿಗೆ ವಿರುದ್ಧವಾಗಿದೆ. ಇದನ್ನು ಅವರು ಕಾನೂ ನಿನ ವ್ಯಾಪ್ತಿಯಲ್ಲಿ ನಿರ್ಧರಿಸಿಲ್ಲ. ಶರವೇಗದಲ್ಲಿ ನೀಡಿರುವ ಈ ಆದೇಶವನ್ನು ಗಮನಿಸಿದರೆ ಇದೊಂದು ಯಾಂತ್ರಿಕ ಕ್ರಮ ಎಂದು ಕಂಡು ಬರುತ್ತದೆ’ ಎಂದು ವಿವರಿಸಲಾಗಿದೆ’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.