ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಅಕ್ರಮ: ತಜ್ಞರ ಸಮಿತಿ, ಡಿ.ಸಿ ವರದಿ ಮೂಲೆಗುಂಪು!

ಕುರುಡಾದ ಸರ್ಕಾರ –ಜನಪ್ರತಿನಿಧಿಗಳ ನಿರ್ಲಕ್ಷ್ಯ
Published 4 ಜುಲೈ 2024, 23:41 IST
Last Updated 4 ಜುಲೈ 2024, 23:41 IST
ಅಕ್ಷರ ಗಾತ್ರ

ಮೈಸೂರು: ತಾನೇ ನೇಮಿಸಿದ್ದ ತಜ್ಞರ ಸಮಿತಿಯು ‘ಮುಡಾದಲ್ಲಿ ಅಕ್ರಮ ನಡೆದಿದೆ’ ಎಂದು ವರದಿ ನೀಡಿದಾಗ ರಾಜ್ಯ ಸರ್ಕಾರ ದಿವ್ಯಮೌನ ವಹಿಸಿತ್ತು. ‘ಮುಡಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ನೀಡಿದ ವರದಿ ಶಿಫಾರಸನ್ನೂ ಮೂಲೆಗುಂಪು ಮಾಡಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಅಕ್ರಮಗಳಿಗೆ ಸರ್ಕಾರದ ಈ ನಿಲುವುಗಳೂ ಪುಷ್ಟಿ ನೀಡಿವೆ‌.

ಮುಡಾದಲ್ಲಿ ನಿವೇಶನಗಳ ಅಕ್ರಮ ಹಂಚಿಕೆ ವಿವಾದ ಇಂದು–ನಿನ್ನೆಯದ್ದಲ್ಲ. 2022ರಲ್ಲಿಯೇ ಈ ಕುರಿತು ವ್ಯಾಪಕ ದೂರುಗಳು ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ 2022ರ ಜುಲೈ 2 ರಂದು ಅಂದಿನ ಬಿಜೆಪಿ ಸರ್ಕಾರವು ಅಕ್ರಮಗಳ ತನಿಖೆಗಾಗಿ ತಾಂತ್ರಿಕ ಸಮಿತಿಯನ್ನು ರಚಿಸಿತ್ತು. ಸಮಿತಿಯು 2023ರ ನವೆಂಬರ್‌ 3ರಂದು ಸರ್ಕಾರಕ್ಕೆ ವರದಿ ನೀಡಿದ್ದು, ಮುಡಾದಲ್ಲಿನ ಅಕ್ರಮಗಳ ಕುರಿತು ಒಟ್ಟು ಮೂರು ಸಂಪುಟಗಳಲ್ಲಿ ದೂರು ಹಾಗೂ ದಾಖಲೆಗಳನ್ನು ತೆರೆದಿಟ್ಟಿತ್ತು. ನಂತರದಲ್ಲಿ ವರದಿ ಸರ್ಕಾರದ ಕಡತ ಸೇರಿದ್ದು ಬಿಟ್ಟರೆ, ಅಕ್ರಮ ಎಸಗಿದವರ ವಿರುದ್ಧ ಯಾವುದೇ ಕ್ರಮವಾಗಿಲ್ಲ.

ಏನಿತ್ತು ವರದಿಯಲ್ಲಿ?: ನಗರಾಭಿವೃದ್ಧಿ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕ ಟಿ.ವಿ. ಮುರಳಿ ಅಧ್ಯಕ್ಷತೆಯಲ್ಲಿ ಸದಸ್ಯರಾದ ಶಾಂತಲಾ, ಬಿ.ಆರ್. ಕಲ್ಪಿನಾಥ್‌ ಹಾಗೂ ನರಸು ಕಳಂತ್ರೆ ಅವರನ್ನು ಒಳಗೊಂಡ ಸಮಿತಿಯು ತನಿಖಾ ವರದಿ ಸಲ್ಲಿಸಿತ್ತು. ಆ ವರದಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಹತ್ತಾರು ವರ್ಷಗಳ ಹಿಂದೆ ನಿರ್ಮಾಣವಾದ ಬಡಾವಣೆಗಳಿಗೆ ಜಮೀನು ನೀಡಿದ್ದ ಭೂಸಂತ್ರಸ್ತರಿಗೆ ಮುಡಾದಿಂದ ಪರಿಹಾರ ನೀಡಿದ ಮಾಹಿತಿ ಇಲ್ಲವೆಂದು ಅಧಿಕಾರಿಗಳು ಟಿಪ್ಪಣಿ ನಮೂದಿಸಿ ಬದಲಿ ನಿವೇಶನ ಮಂಜೂರಾತಿಗಾಗಿ ನಿಯಮಬಾಹಿರವಾಗಿ ಶಿಫಾರಸು ಮಾಡುತ್ತಿದ್ದಾರೆ. ಭೂಸಂತ್ರಸ್ತರ ಹೆಸರಿನಲ್ಲಿ ಅನ್ಯ ಬಡಾವಣೆಗಳಲ್ಲಿ ಬದಲಿ ನಿವೇಶನಗಳನ್ನು ಅಕ್ರಮವಾಗಿ ಹಂಚಲಾಗುತ್ತಿದೆ. ಸರ್ಕಾರ ಇದನ್ನು ಸ್ಥಗಿತಗೊಳಿಸುವಂತೆ ಸೂಚಿಸಬೇಕು. ಹಳೆಯ ಪ್ರಕರಣಗಳಲ್ಲಿ ಶೇ 50:50 ಅನುಪಾತದಂತೆ ನಿವೇಶನ ಹಂಚಿಕೆ ಮಾಡಬಾರದು’ ಎಂದು ಸಮಿತಿಯು ಸ್ಪಷ್ಟವಾಗಿ ವರದಿಯಲ್ಲಿ ಹೇಳಿತ್ತು.

‘ಮುಡಾದಿಂದ ಸ್ವಾಧೀನಪಡಿಸಿಕೊಳ್ಳಲಾದ ಜಮೀನು, ನೀಡಲಾದ ಪರಿಹಾರ, ಭೂಸ್ವಾಧೀನದಿಂದ ಕೈಬಿಟ್ಟ ಪ್ರಕರಣಗಳ ಸಮಗ್ರ ಮಾಹಿತಿಯನ್ನು ಅಧಿಕಾರಿಗಳು ತನಿಖಾ ತಂಡಕ್ಕೆ ನೀಡಿಲ್ಲ. ನಿಯಮಾನುಸಾರ ಭೂಸ್ವಾಧೀನ ನಡೆದಿಲ್ಲ. ಅನುಮತಿ ಇಲ್ಲದೆಯೇ ಅಕ್ಕಪಕ್ಕದ ಜಮೀನುಗಳಲ್ಲಿ ಕಾಮಗಾರಿ, ಸಾಕಷ್ಟು ಬಡಾವಣೆಗಳ ಅಧಿಕೃತ ನಕ್ಷೆ ಹಾಗೂ ಲಭ್ಯ ನಿವೇಶನಗಳ ಮಾಹಿತಿ ನೀಡಿಲ್ಲ. ಬಡಾವಣೆಯಲ್ಲಿನ ಮಧ್ಯಂತರ ಹಾಗೂ ಬಿಡಿ ನಿವೇಶನಗಳನ್ನೇ ಬದಲಿ ನಿವೇಶನಗಳನ್ನಾಗಿ ಹಂಚಲಾಗುತ್ತಿದೆ. ಹಾಗೂ ಸರ್ಕಾರದ ನಿರ್ಧಾರಗಳಿಗೆ ವ್ಯತಿರಿಕ್ತವಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ’ ಎಂದು ಸಮಿತಿಯು ಉಲ್ಲೇಖಿಸಿತ್ತು.

₹ 5 ಲಕ್ಷಕ್ಕೆ ದಟ್ಟಗಳ್ಳಿಯಲ್ಲಿ ನಿವೇಶನ!

‘ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ದಟ್ಟಗಳ್ಳಿಯಲ್ಲಿ 2023ರಲ್ಲಿ ಕೇವಲ ₹5.26 ಲಕ್ಷಕ್ಕೆ 30X40 ಚ.ಅಡಿ ನಿವೇಶನ ಹಾಗೂ ₹14.21 ಲಕ್ಷಕ್ಕೆ 40X60 ಚ.ಅಡಿ ಅಳತೆಯ ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿ, ಅಷ್ಟೇ ತ್ವರಿತಗತಿಯಲ್ಲಿ ನೋಂದಣಿಯನ್ನೂ ಮಾಡಿಕೊಟ್ಟು ಮುಡಾ ಆಯುಕ್ತರು ಸರ್ಕಾರಕ್ಕೆ ಭಾರಿ ನಷ್ಟ ಉಂಟು ಮಾಡಿದ್ದಾರೆ’ ಎಂದು 2024ರ ಫೆ. 5ರಂದು ಮೈಸೂರು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಸರ್ಕಾರದ ಅಡ್ವೋಕೇಟ್‌ ಜನರಲ್‌ ಹಾಗೂ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ಪ್ರಕರಣ ನ್ಯಾಯಾಲಯದಲ್ಲಿ ಇದ್ದಾಗಲೂ ಆಯುಕ್ತರು ಏಕಪಕ್ಷೀಯವಾಗಿ ವರ್ತಿಸಿದ್ದು, ಮುಡಾ ಆಡಳಿತ ಮಂಡಳಿ ಗಮನಕ್ಕೆ ತಂದಿಲ್ಲ. ಸಾಕಷ್ಟು ಅಕ್ರಮ ನಡೆದಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ನಂತರದಲ್ಲೂ ಮುಡಾದ ಅನೇಕ ಅಕ್ರಮಗಳ ಕುರಿತು ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಆದಾರೂ ಸರ್ಕಾರ ಕ್ರಮ ಕೈಗೊಂಡಿಲ್ಲ.

ಸರ್ಕಾರದ ನಿರ್ಲಕ್ಷ್ಯದಿಂದ ಮೈಸೂರಿನ ಮಾನ ಹರಾಜಾಗಿದೆ. ಟಿ.ವಿ. ಮುರಳಿ ಅಧ್ಯಕ್ಷತೆಯ ಸಮಿತಿಯ ವರದಿಯನ್ನು ಒಪ್ಪಿ ಕ್ರಮ ಜರುಗಿಸಿದ್ದರೆ ಅಕ್ರಮಗಳನ್ನು ತಪ್ಪಿಸಬಹುದಿತ್ತು.
–ಗಂಗರಾಜು, ದೂರುದಾರ, ಆರ್‌ಟಿಐ ಕಾರ್ಯಕರ್ತ

ಅಕ್ರಮಕ್ಕೂ ‘ತಜ್ಞರ ತಂಡ’

ಶೇ 50:50 ಅನುಪಾತದಲ್ಲಿ ಬದಲಿ ನಿವೇಶನಗಳ ಹಂಚಿಕೆ ಅಕ್ರಮದಲ್ಲಿ ಮುಡಾದ ಕೆಲವು ಸಿಬ್ಬಂದಿಯೇ ‘ತಜ್ಞರ ತಂಡ’ ಆಗಿ ಕಾರ್ಯ ನಿರ್ವಹಿಸಿದ್ದಾರೆ ಎನ್ನಲಾಗಿದೆ.

‘ಮುಡಾಕ್ಕೆ ಜಮೀನು ಬಿಟ್ಟುಕೊಟ್ಟು, ಇನ್ನೂ ಪರಿಹಾರ ಪಡೆಯದೇ ಇರುವವರನ್ನು ಪತ್ತೆ ಹಚ್ಚುತ್ತಿದ್ದ ತಂಡವು ಮಧ್ಯವರ್ತಿಗಳೊಡನೆ ಸೇರಿ ಒಪ್ಪಂದ ಕುದುರಿಸುತ್ತಿತ್ತು. ನಂತರ ತಾವೇ ಅರ್ಜಿ ಹಾಕಿಸಿ, ಅಗತ್ಯವಾದ ದಾಖಲೆಗಳನ್ನೂ ಮಾಡಿಕೊಟ್ಟು ಪ್ರತಿಷ್ಠಿತ ಬಡಾವಣೆಗಳಲ್ಲಿ ನಿವೇಶನಗಳನ್ನು ಕೊಡಿಸುತ್ತಿತ್ತು. ಅದಕ್ಕೆ ಇಂತಿಷ್ಟು ‘ವಂತಿಗೆ’ ನಿಗದಿ ಮಾಡುತ್ತಿತ್ತು’ ಎಂದು ಮುಡಾದ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

‘ಮುಡಾದಲ್ಲಿ ಕೆಲವರು 20–25 ವರ್ಷದಿಂದ ಆಯಾಕಟ್ಟಿನ ಜಾಗದಲ್ಲೇ ಕೆಲಸ ಮಾಡುತ್ತಿದ್ದಾರೆ. ತಮ್ಮ ಅನುಭವವನ್ನೇ ಅಕ್ರಮಕ್ಕೆ ದಾರಿ ಮಾಡಿಕೊಂಡಿದ್ದಾರೆ’ ಎನ್ನಲಾಗಿದೆ.

ಅಧ್ಯಕ್ಷರ ಮೇಲೆ ‘ಸಿಟ್ಟು’: ಪದಚ್ಯುತಿಗೆ ಚಿಂತನೆ?

ಈಚಿನ ವಿವಾದಗಳ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷ ಕೆ. ಮರಿಗೌಡ ಮೇಲೆ ಮುಖ್ಯಮಂತ್ರಿ ‘ಕುಟುಂಬ’ ಸಿಟ್ಟಾಗಿದ್ದು, ಅವರನ್ನು ಅಧ್ಯಕ್ಷ ಗಾದಿಯಿಂದ ಇಳಿಸಲು ಸಹ ಚಿಂತನೆ ನಡೆದಿದೆ ಎನ್ನಲಾಗಿದೆ.

ಮುಡಾದಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಅಕ್ರಮ ಕುರಿತು ಮರಿಗೌಡ ಈಚೆಗೆ ಪತ್ರ ಬರೆದಿದ್ದರು. ಅದು ವಿರೋಧ ಪಕ್ಷಗಳಿಗೂ ಅಸ್ತ್ರವಾಯಿತು.

ವಿವಾದ ಬೆಳೆಯಲು ಕಾರಣವಾಯಿತು. ಇದೀಗ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪ ಕೇಳಿಬಂದಿರುವುದು ಕಾಂಗ್ರೆಸ್‌ ಪಾಳಯದಲ್ಲಿ ಇರಿಸು–ಮುರಿಸಿಗೆ ಕಾರಣವಾಗಿದೆ.

50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಆಗಿರುವ ಅಕ್ರಮ ಪ್ರಶ್ನಿಸಿದ್ದ ದೂರಿಗೆ ಸ್ಪಂದನೆ ದೊರೆತಿಲ್ಲ. ಹಿಂದಿನ ತಜ್ಞರ ಸಮಿತಿ ವರದಿ ಆಧರಿಸಿ ಕ್ರಮ ಕೈಗೊಳ್ಳಬೇಕಿತ್ತು.
ಪಿ.ಎಸ್. ನಟರಾಜ್‌, ದೂರುದಾರ

ತನಿಖೆ: ವಹಿವಾಟಿಗೆ ನಿರ್ಬಂಧ

ಮುಡಾ ನಿವೇಶನಗಳ ಅಕ್ರಮ ಹಂಚಿಕೆಯ ತನಿಖೆಗಾಗಿ ಸರ್ಕಾರವು ನೇಮಿಸಿರುವ ಆರ್. ವೆಂಕಟಾಚಲಪತಿ ಅಧ್ಯಕ್ಷತೆಯ ಸಮಿತಿಯು ಮುಡಾ ಕಚೇರಿಯಲ್ಲಿ ಗುರುವಾರವೂ ತನಿಖೆ ಮುಂದುವರಿಸಿತು.

2020ರಿಂದ ಈಚೆಗೆ ಒಟ್ಟಾರೆ ಎಷ್ಟು ನಿವೇಶನಗಳು ಹಂಚಿಕೆ ಆಗಿವೆ? ಅದರಲ್ಲಿ ಬದಲಿ ನಿವೇಶನಗಳೆಷ್ಟು? ಭೂ ಸಂತ್ರಸ್ತರ ಹಿನ್ನೆಲೆ ಎಲ್ಲವನ್ನೂ ತಂಡವು ಪರಿಶೀಲಿಸುತ್ತಿದೆ.

ಸದ್ಯ ಮುಡಾ ಕಚೇರಿಯಲ್ಲಿ ಬಹುತೇಕ ಕೆಲಸಗಳಿಗೆ ನಿರ್ಬಂಧ ಹೇರಿದ್ದು, ಹೊಸ ಖಾತೆಗಳ ನೋಂದಣಿ ಸ್ಥಗಿತಗೊಂಡಿದೆ. ಇನ್ನೂ ಮುರ್ನಾಲ್ಕು ದಿನ ನಿರ್ಬಂಧ ಮುಂದುವರಿಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT