ಮೈಸೂರು: ‘ಚಾಮರಾಜ ವಿಧಾನಸಭಾ ಕ್ಷೇತ್ರದ 3,279 ಮಂದಿಗೆ ‘ಆಶ್ರಯ’ ಯೋಜನೆಯಡಿ ಒಂದು ವರ್ಷದೊಳಗೆ ನಿವೇಶನ ಕಲ್ಪಿಸುವ ಸಂಕಲ್ಪ ಮಾಡಲಾಗಿದೆ’ ಎಂದು ಶಾಸಕ ಕೆ.ಹರೀಶ್ ಗೌಡ ತಿಳಿಸಿದರು.
ಕ್ಷೇತ್ರದ ಆಶ್ರಯ ಸಮಿತಿಗೆ ಸದಸ್ಯರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಮಹಾನಗರಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆಸಿದ ನಂತರ, ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಅರ್ಜಿದಾರರು ₹ 2 ಸಾವಿರ ಹಣ ಕಟ್ಟಿ 21 ವರ್ಷಗಳಿಂದ ಚಾತಕ ಪಕ್ಷಿಗಳಂತೆ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಮನೆ ಅಥವಾ ನಿವೇಶನ ಕೊಡಲೇಬೇಕು. ಇದಕ್ಕಾಗಿ 3-4 ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು. ಜಾಗ ಇರುವಲ್ಲಿ ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.
‘ಕ್ಷೇತ್ರದಲ್ಲಿ 24 ವರ್ಷಗಳಿಂದ ಒಂದೇ ಒಂದು ನಿವೇಶನ ಅಥವಾ ಮನೆಯನ್ನೂ ಕೊಟ್ಟಿಲ್ಲ’ ಎಂದು ದೂರಿದರು. ‘ಹಿಂದಿನ ಶಾಸಕರು ಏನು ಮಾಡಿದರು ಎಂಬದನ್ನು ಮಾತನಾಡಲು ಹೋಗುವುದಿಲ್ಲ. ಆದರೆ, ಅರ್ಜಿದಾರರ ಕ್ಷಮೆ ಕೇಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
ನಮ್ಮಲ್ಲಿ ಜಾಗವಿಲ್ಲ: ‘ನನ್ನ ಕ್ಷೇತ್ರದಲ್ಲೆಲ್ಲೂ ಸರ್ಕಾರಿ ಭೂಮಿ ಲಭ್ಯವಿಲ್ಲ. ಹೀಗಾಗಿ ಎಲ್ಲೆಲ್ಲಿ ಲಭ್ಯ ಇದೆಯೋ ಅಲ್ಲಿ ನಿವೇಶನ ಕೊಡಲಾಗುವುದು. ಗೋಮಾಳ ಮೊದಲಾದ ಭೂಮಿ ಹುಡುಕಲಾಗುವುದು. ಸದ್ಯ ಹಂಚ್ಯಾದಲ್ಲಿ 24.09 ಎಕರೆ ಜಾಗ ಗುರುತಿಸಲಾಗಿದೆ. ಅಲ್ಲಿ 20X30 ಚ.ಅಡಿ ನಿವೇಶನ ಅಭಿವೃದ್ಧಿಪಡಿಸಿದರೆ 850 ಮಂದಿಗೆ ಕೊಡಬಹುದಾಗಿದೆ. ಶ್ರೀರಾಂಪುರದಲ್ಲಿ 36 ಎಕರೆ, ಶ್ಯಾದನಹಳ್ಳಿಯಲ್ಲಿ 10 ಎಕರೆ, ಬಂಡಿಪಾಳ್ಯದಲ್ಲಿ 6.28 ಎಕರೆಯನ್ನು ಗುರುತಿಸಲಾಗಿದೆ. ಅಲ್ಲಿ ನಿವೇಶನ ಅಥವಾ ಗುಂಪು ಮನೆ ಯೋಜನೆಯಲ್ಲಿ ಸೂರು ಒದಗಿಸಲು ಕ್ರಮ ವಹಿಸಲಾಗುವುದು’ ಎಂದು ಹೇಳಿದರು.
‘ತಿಂಗಳಲ್ಲಿ ಪ್ರಕ್ರಿಯೆ ಶುರುವಾಗಲಿದೆ. ಅರ್ಜಿದಾರರು ಪಾಲಿಕೆ ಕಚೇರಿಗೆ ಬಂದು ಆಶ್ರಯ ವಸತಿ ಯೋಜನೆ ವಿಭಾಗದಲ್ಲಿ, ಹಣ ಕಟ್ಟಿರುವ ಮಾಹಿತಿಯನ್ನು ಹಾಗೂ ದಾಖಲೆಗಳನ್ನು ಕೊಡಬೇಕು. ನಿವೇಶನ ಹಂಚಿಕೆ ಮಾಡುವಾಗ, ಹಿಂದೆ ಅರ್ಜಿ ಸಲ್ಲಿಸಿದ್ದವರಿಗೆ ಆದ್ಯತೆ ಕೊಡಲಾಗುವುದು’ ಎಂದರು.
‘ಬೋಗಾದಿ ವರ್ತುಲ ರಸ್ತೆ ಬಳಿ ಕಾಂತರಾಜ ಅರಸು ರಸ್ತೆಗಾಗಿ ಭೂಸ್ವಾಧೀನವಾದಾಗ ಮನೆ ಹಾಗೂ ನಿವೇಶನ ಕಳೆದುಕೊಂಡವರಿಗೆ ಮನೆ ಹಾಗೂ ನಿವೇಶನ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.
ಬಾಕಿ ಇದ್ದರೆ ನೋಟಿಸ್ ಕೊಡಿ: ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ನಗರಪಾಲಿಕೆಗೆ ಸೇರಿದ ಜಾಗ ಎಲ್ಲೆಲ್ಲಿ ಲಭ್ಯ ಇದೆಯೋ ಆ ಮಾಹಿತಿ ಕೊಡಬೇಕು. ಮಾಲ್‌ಗಳವರು ತೆರಿಗೆಯನ್ನು ಯಾವಾಗಿನಿಂದ ಪಾವತಿಸಿಲ್ಲ, ಬಾಡಿಗೆಗೆ ಪಡೆದಿದ್ದರೆ ಬಾಡಿಗೆಯನ್ನು ಯಾವಾಗಿನಿಂದ ನೀಡಿಲ್ಲ ಎಂಬುದರ ಮಾಹಿತಿಯನ್ನು 2–3 ದಿನಗಳಲ್ಲಿ ಕೊಡಬೇಕು. ತೆರಿಗೆ ಹಾಗೂ ಬಾಡಿಗೆಯನ್ನು ಸಮರ್ಪಕವಾಗಿ ಕಟ್ಟಿಸಿಕೊಂಡರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದಾಗಿದೆ. ಮಾಲ್‌ಗಳು ಸೇರಿದಂತೆ ಯಾರ‌್ಯಾರು ಬಾಕಿ ಉಳಿಸಿಕೊಂಡಿದ್ದಾರೆಯೋ ಅವರಿಗೆ ಮೊದಲು ನೋಟಿಸ್ ಜಾರಿಗೊಳಿಸಬೇಕು’ ಎಂದು ತಾಕೀತು ಮಾಡಿದರು.
ಕ್ಷೇತ್ರದ ಆಶ್ರಯ ಸಮಿತಿ ಸದಸ್ಯರಾದ ಮಂಜುನಾಥ್, ಅನಂತ ನಾರಾಯಣ್, ರಾಣಿ ಸಿದ್ದಪ್ಪಾಜಿ ಹಾಗೂ ಇಬ್ರಾಹಿಂ, ನಗರಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ಪಾಲ್ಗೊಂಡಿದ್ದರು.
‘ಲ್ಯಾನ್ಸ್‌ಡೌನ್ ಕಟ್ಟಡ ಕೆಡವಲೇಬೇಕು’
‘ಲ್ಯಾನ್ಸ್‌ಡೌನ್ ಕಟ್ಟಡವನ್ನು ಕೆಡವಿ ಹೊಸದಾಗಿ ಕಟ್ಟುವ ಕುರಿತು ಚರ್ಚೆಯಾಗಿದೆ. ಇನ್ನೂ ಯಾವುದೂ ಅಂತಿಮವಾಗಿಲ್ಲ. ಆ ಕಟ್ಟಡ ತೀವ್ರ ಶಿಥಿಲವಾಗಿರುವುದರಿಂದ ಕೆಡವಿಯೇ ಕಟ್ಟಬೇಕು. ಇದನ್ನು ತಜ್ಞರು ಕೂಡ ಹೇಳಿದ್ದಾರೆ. ಅದನ್ನು ಇಂದಲ್ಲ ನಾಳೆ ಕೆಡವಲೇಬೇಕಾಗುತ್ತದೆ’ ಎಂದು ಹರೀಶ್ ಗೌಡ ಪ್ರತಿಕ್ರಿಯಿಸಿದರು.
‘ನನ್ನನ್ನು ಯಾರೂ ಸಂಪರ್ಕಿಸಿಲ್ಲ’
ಆಪರೇಷನ್ ಕಮಲ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಹರೀಶ್ ಗೌಡ ‘ಬಿಜೆಪಿಯ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ನಮ್ಮ ಪಕ್ಷದ ಒಬ್ಬ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿಯವರಿಗೆ ಆಪರೇಷನ್ ಕಮಲದ ಮನಸ್ಥಿತಿ ಇದೆ. ಆದರೆ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದೇವೆ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಸಿದ್ದರಾಮಯ್ಯ ಅವರ ಜತೆಗಿದ್ದೇವೆ. ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ನಮ್ಮನ್ನು ಮುಟ್ಟಲಾಗುವುದಿಲ್ಲ’ ಎಂದು ಹೇಳಿದರು.
‘ಮುಡಾದಲ್ಲಿ ಅಕ್ರಮ ನಡೆದಿರುವುದು ನಿಜ’
‘ಮುಡಾದಲ್ಲಿ ಭ್ರಷ್ಟಾಚಾರ ನಡೆದಿರುವುದು ಶೇಕಡ ಸಾವಿರದಷ್ಟು ನಿಜ. ಆದರೆ ಅದಕ್ಕೆ ಸಿದ್ದರಾಮಯ್ಯ ಅವರು ಕಾರಣವಲ್ಲ. ಅವರ ಪತ್ನಿಗೆ ಭೂ ಪರಿಹಾರವಾಗಿ ಮುಡಾದಿಂದ ನಿವೇಶನ ನೀಡಿರುವುದಲ್ಲಿ ಯಾವುದೇ ಅಕ್ರಮ ಆಗಿಲ್ಲ. ಮುಖ್ಯಮಂತ್ರಿಯ ಪಾತ್ರವೇನೂ ಇಲ್ಲ’ ಎಂದು ಕೆ.ಹರೀಶಗೌಡ ಪ್ರತಿಕ್ರಿಯಿಸಿದರು. ‘ನಾನೂ ಮಾಹಿತಿ ಕಲೆ ಹಾಕುತ್ತಿದ್ದೇನೆ. ಇತರ ಭ್ರಷ್ಟಾಚಾರಗಳ ಬಗ್ಗೆಯೂ ದಾಖಲೆ ಪಡೆದು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ನಾನು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ನನ್ನ ವಿರುದ್ಧದ ಆರೋಪ ಸಾಬೀತಾದರೆ ರಾಜೀನಾಮೆ ಕೊಡುತ್ತೇನೆ’ ಎಂದು ತಿಳಿಸಿದರು. ‘ಈಗ ಆಪಾದನೆ ಮಾಡುತ್ತಿರುವವರೇ ಮುಡಾದಲ್ಲಿ ಸಾಕಷ್ಟು ಕರ್ಮಕಾಂಡವನ್ನು ಮಾಡಿದ್ದಾರೆ. ಲೋಕಾಯುಕ್ತಕ್ಕೂ ದೂರು ಕೊಡುವೆ ತನಿಖಾ ಆಯೋಗಕ್ಕೂ ಮಾಹಿತಿ ಸಲ್ಲಿಸಲಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.