ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರ ಅಮಾನತಿಗೆ ಒತ್ತಾಯ

Last Updated 23 ಸೆಪ್ಟೆಂಬರ್ 2022, 9:57 IST
ಅಕ್ಷರ ಗಾತ್ರ

ಮೈಸೂರು: ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಯನ ವಿಭಾಗದ 9 ವಿದ್ಯಾರ್ಥಿಗಳ ಹಾಜರಾತಿಯು ಶೇ 75ಕ್ಕಿಂತ ಕಡಿಮೆ ಇದ್ದರೂ ಪರೀಕ್ಷೆಗೆ ಅವಕಾಶ ನೀಡುವಂತೆ ಕೋರಿರುವ ಆ ವಿಭಾಗದ ಅಧ್ಯಕ್ಷ(ಮುಖ್ಯಸ್ಥ)ರನ್ನು ಅಮಾನತುಗೊಳಿಸುವಂತೆ ಶಿಕ್ಷಣ ಮಂಡಳಿ ಸದಸ್ಯರು ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ನಡೆದ 2ನೇ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗಿದ್ದ ವಿಷಯ ಪ್ರಸ್ತಾಪಿಸಿದ ಸದಸ್ಯರು, ‘ಹಾಜರಾತಿ ವಿಷಯದಲ್ಲಿ ವಿಭಾಗದವರ ಲೋಪ ಎದ್ದು ಕಾಣುತ್ತಿದೆ. ಗೈರು ಹಾಜರಾದವರಿಗೆ ಅವಕಾಶ ಕೊಡುತ್ತಾ ಹೋದರೆ ಗುಣಮಟ್ಟ ಏನಾಗಬಹುದು? ಆದ್ದರಿಂದ, ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಪಟ್ಟು ಹಿಡಿದರು. ‘ಇಲ್ಲದಿದ್ದರೆ ಎಲ್ಲ ವಿಭಾಗದವರೂ ಕೊನೆ ಕ್ಷಣದಲ್ಲಿ ತಮಗೆ ಬೇಕಾದವರಿಗೆ ಪರೀಕ್ಷೆಗೆ ಅವಕಾಶ ಕೊಡಿಸುತ್ತಾರೆ’ ಎಂದರು.

ಈ ವಿಷಯದಲ್ಲಿ ಪತ್ರಿಕೋದ್ಯಮ ವಿಭಾಗವು ಲೋಪ ಎಸಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ವಿಚಾರಣೆಗೆ ಸಮಿತಿ:

ಇದಕ್ಕೆ ಪ್ರತಿಕ್ರಿಯಿಸಿದ ಕುಲ‍ಪತಿ ಪ್ರೊ.ಜಿ.ಹೇಮಂತ್‌ಕುಮಾರ್, ‘ಇದಕ್ಕೊಂದು ಸಮಿತಿ ರಚಿಸಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಮರುಕಳಿಸದಂತೆ ನೋಡಿಕೊಳ್ಳುವಂತೆ ಎಲ್ಲ ವಿಭಾಗಗಳಿಗೂ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಯೋಜನೆ, ಉಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿಯ ಸ್ಥಾಪನೆ ಸಂಬಂಧ ಕರಡು ಅಧಿನಿಯಮಕ್ಕೆ ಅನುಮೋದನೆ ನೀಡಲಾಯಿತು. ಇದಕ್ಕೆ ರಾಜ್ಯಪಾಲರ ಅನುಮೋದನೆ ಕಲ್ಪಿಸಲು ಕೋರಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕುಲಪತಿ ಹೇಮಂತ್‌ಕುಮಾರ್ ತಿಳಿಸಿದರು.

ವಿವಿಧ ನಿಕಾಯಗಳು, ಎನ್‌ಇ‍ಪಿ ಪ್ರಕಾರ 3 ಹಾಗೂ 4ನೇ ಸೆಮಿಸ್ಟರ್‌ಗೆ ರೂಪಿಸಿರುವ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಸಭೆಯು ಅನುಮೋದನೆ ನೀಡಿತು.

ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾಯಂಗೆ ಸರ್ಕಾರಕ್ಕೆ ಕಳುಹಿಸುವುದಕ್ಕೆ ಅನುಮೋದನೆ ಪಡೆಯಲಾಯಿತು. ವೇತನವನ್ನು ಯುಜಿಸಿಯೇ ನೇರವಾಗಿ ಪಾವತಿಸುವುದರಿಂದ ವಿ.ವಿಗೆ ಆರ್ಥಿಕ ಹೊರೆ ಆಗುವುದಿಲ್ಲ ಎಂದು ಕುಲಪತಿ ಸ್ಪಷ್ಟಪಡಿಸಿದರು.

ಗಂಗೋತ್ರಿಯಲ್ಲೇ ಪದವಿ ಕೋರ್ಸ್‌:

‘ನೆರೆಯ ಜಿಲ್ಲೆಗಳಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯಗಳು ಆರಂಭಗೊಳ್ಳುತ್ತಿರುವುದರಿಂದಾಗಿ, ಮಾನಸ ಗಂಗೋತ್ರಿಯಲ್ಲಿ ಪದವಿ ಕೋರ್ಸ್‌ಗಳನ್ನು ಆರಂಭಿಸುವಂತೆ 12 ವಿಭಾಗಗಳಿಗೆ ಈಗಾಗಲೇ ಸೂಚಿಸಲಾಗಿದೆ’ ಎಂದು ಕುಲಪತಿ ತಿಳಿಸಿದರು.

2018–19ನೇ ಸಾಲಿನ ಲೆಕ್ಕಪರಿಶೋಧನಾ ವರದಿಯ ಅನುಪಾಲನಾ ವರದಿಯನ್ನು ತರಾತುರಿಯಲ್ಲಿ ಮಂಡಿಸಿದ್ದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ ಕಂಡುಬಂದ ಆಕ್ಷೇಪಗಳಿಗೆ ವಿವರಣೆ ಕೊಡುವುದು ಸಹಜ ಪ್ರಕ್ರಿಯೆ. ಹೀಗಾಗಿ, ಅನುಮೋದಿಸುವಂತೆ ಹಣಕಾಸು ಅಧಿಕಾರಿ ಡಾ.ಸಂಗೀತಾ ಗಜಾನನ ಭಟ್ ಕೋರಿದರು. ಆದರೆ, ಪರಿಶೀಲನೆಗೆ ಸಮಯ ಬೇಕೆಂಬ ಸದಸ್ಯರ ಸಲಹೆ ಮೇರೆಗೆ, ವಿಷಯವನ್ನು ಮುಂದಿನ ಸಭೆಗೆ ಮಂಡಿಸಲು ತೀರ್ಮಾನಿಸಲಾಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT