ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌‘ಟೇಸ್ಟ್‌ ಅಟ್ಲಾಸ್‌’ನಲ್ಲಿ ‘ಮೈಸೂರ್ ಪಾಕ್’!

Published 22 ಜುಲೈ 2023, 5:21 IST
Last Updated 22 ಜುಲೈ 2023, 5:21 IST
ಅಕ್ಷರ ಗಾತ್ರ

ಮೈಸೂರು: ಟ್ರಾವೆಲ್‌ ಆನ್‌ಲೈನ್‌ ಮಾರ್ಗದರ್ಶಿ ‘ಟೇಸ್ಟ್‌ ಅಟ್ಲಾಸ್‌’ ಪ್ರಕಟಿಸಿರುವ ವಿಶ್ವದ ಅತ್ಯುತ್ತಮ ರಸ್ತೆಬದಿ ಸಿಹಿ ತಿನಿಸುಗಳ ಪಟ್ಟಿಯಲ್ಲಿ ‘ಮೈಸೂರ್ ಪಾಕ್’ 14ನೇ ಸ್ಥಾನ ಪಡೆದಿದೆ.

ಮೈಸೂರು ಪಾಕ್‌ ಜೊತೆಗೆ ‘ಕುಲ್ಫಿ’ 18 ಹಾಗೂ ‘ಕುಲ್ಫಿ ಫಲೂದಾ’ 32ನೇ ಸ್ಥಾನ ಪಡೆದಿದೆ. ಮೈಸೂರು ಪಾಕ್‌ ಸ್ಥಾನ ಪಡೆದಿರುವುದಕ್ಕೆ ಕನ್ನಡಿಗರು– ಟ್ವಿಟರ್, ಫೇಸ್‌ಬುಕ್‌ ಸೇರಿದಂತೆ ಜಾಲತಾಣಗಳಲ್ಲಿ ಪಟ್ಟಿಯನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಪ್ರತಿಕ್ರಿಯಿಸಿರುವ ‘ಮೈಸೂರು ಪಾಕ್‌’ ತಿನಿಸನ್ನು ಮೊದಲು ತಯಾರಿಸಿದ ಪಾಕಾಸುರ ಮಾದಪ್ಪ ಅವರ ವಂಶಸ್ಥ ಶಿವಾನಂದ್‌, ‘ಮೈಸೂರು ಹಾಗೂ ಕರ್ನಾಟಕದ ಹೆಮ್ಮೆಯ ತಿನಿಸು ವಿಶ್ವದ ಜನಪ್ರಿಯ ತಿನಿಸುಗಳಲ್ಲಿ ಸ್ಥಾನ ಪಡೆದಿರುವುದು ಸಂತಸ ತಂದಿದೆ’ ಎಂದರು.

‘ಅರಮನೆಯಲ್ಲಿ ಮುತ್ತಾತ ಪಾಕಾಸುರ ಮಾದಪ್ಪ ಬಾಣಸಿಗರಾಗಿದ್ದರು. 1935ರ ಸುಮಾರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ಭೇಟಿಯಾಗಲು ವಿದೇಶದಿಂದ ಧುರೀಣರು ಬಂದಿದ್ದರು. ಅವರಿಗೆ ಈ ತಿನಿಸನ್ನು ನೀಡಿದ್ದರು. ಮಹಾರಾಜರೇ ಮೈಸೂರು ಪಾಕ್‌ ಎಂದು ಹೆಸರಿಟ್ಟರು’ ಎಂದು ಸ್ಮರಿಸಿದರು.

‘ಅಶೋಕ ರಸ್ತೆಯ ಅರಳೀಮರದ ಬಳಿ ಮಾದಪ್ಪ ಅವರು ‘ದೇಶಿಕೇಂದ್ರ ಸ್ವೀಟ್‌ ಸ್ಟಾಲ್‌’ ತೆರೆದರು. ಮೈಸೂರು ಪಾಕ್ ಅಲ್ಲಿಂದಲೇ ಮಾರಾಟವಾಗುತ್ತಿತ್ತು. ಕ್ರಮೇಣ ಜನಪ್ರಿಯತೆ ‍ಪಡೆಯಿತು. 1954ರಲ್ಲಿ ನಮ್ಮ ತಾತ ಬಸವಣ್ಣ ಅವರು ಗುರು ಸ್ವೀಟ್‌ ಮಾರ್ಟ್‌ ಅನ್ನು ಸಯ್ಯಾಜಿರಾವ್‌ ರಸ್ತೆಯ ದೇವರಾಜ ಮಾರುಕಟ್ಟೆಯಲ್ಲಿ ತೆರೆದರು. ಅಂದಿನಿಂದಲೂ ವಹಿವಾಟು ನಡೆದಿದೆ. ಈಗ ಅಂಗಡಿಯ ವಿಸ್ತರಣೆಯೂ ಆಗಿದೆ’ ಎಂದು ತಿಳಿಸಿದರು.  

‘ಮಹಾರಾಜ ಸಂಸ್ಕೃತ ಪಾಠಶಾಲೆ ವೃತ್ತದ ಬಳಿ ಇರುವ ಮನೆಯಲ್ಲಿ ಈಗಲೂ ಮೈಸೂರು ಪಾಕವನ್ನು ತಯಾರಿಸಲಾಗುತ್ತದೆ. ಅಲ್ಲಿಂದಲೇ ನಮ್ಮ ಅಂಗಡಿಗೆ ಪೂರೈಕೆಯಾಗುತ್ತದೆ. ಮನೆ ಮಕ್ಕಳಿಗೆ ಅನ್ನ ನೀಡಿದ ತಿನಿಸು ನಮಗೆ ದೇವರಂತೆ’ ಎಂದು ಶಿವಾನಂದ ಅವರು ಭಾವುಕರಾದರು.

ಡಿ.ಕೆ ಶಿವಕುಮಾರ್‌ ಬಾಲ್ಯದ ನೆನಪು

ಈ ಬಗ್ಗೆ ಟ್ವೀಟ್‌ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ‘ಮೈಸೂರು ಪಾಕ್‌ ಸ್ಥಾನ ಪಡೆದಿರುವುದು ಕನ್ನಡಿಗರ ಹೆಮ್ಮೆ. ನನ್ನ ತಂದೆಯವರು ಹಾಗೂ ಮನೆಗೆ ಬರುತ್ತಿದ್ದ ಸಂಬಂಧಿಕರು ಮೈಸೂರು ಪಾಕ್‌ ತಂದಾಗ ಹಂಚಿ ತಿನ್ನುತ್ತಿದ್ದ ಬಾಲ್ಯದ ನೆನಪುಗಳು ಹಾಗೇ ಇವೆ. ಮೈಸೂರು ಅರಮನೆಯಲ್ಲಿ ಜನ್ಮತಾಳಿದ ಮೈಸೂರು ಪಾಕ್‌ ಇಂದು ಮನೆಮನೆಗಳಿಗೂ ತಲುಪುವುದರ ಹಿಂದೆ ಲಕ್ಷಾಂತರ ಬಾಣಸಿಗರ ಶ್ರಮ ಕೌಶಲ ಅಡಗಿದೆ. ಅವರೆಲ್ಲರಿಗೂ ಇದರ ಶ್ರೇಯಸ್ಸು ಸಲ್ಲಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT