ಮೈಸೂರು: ‘ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ‘ಆತ್ಮನಿರ್ಭರ್ ನಿಧಿ’ಯ (ಪಿಎಂ ಸ್ವನಿಧಿ) ವಿಶೇಷ ಕಿರುಸಾಲ ಅನುಮೋದನೆ ಲಭಿಸಿದ್ದರೂ ಸಾಲ ವಿತರಿಸದೆ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದ್ದರೆ ಕೂಡಲೇ ಬ್ಯಾಂಕ್‌ಗಳು ವಿಲೇವಾರಿ ಮಾಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ‘ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್’ ಆಯೋಜಿಸಿದ್ದ ಜಿಲ್ಲಾ ಬ್ಯಾಂಕ್‌ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಮಾರ್ಚ್ 31ರೊಳಗೆ ಪಿಎಂ ಸ್ವನಿಧಿ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳ ಉದ್ದೇಶಿತ ಗುರಿಯನ್ನು ಪೂರ್ಣಗೊಳಿಸಬೇಕು’ ಎಂದರು.
‘2023–24ನೇ ಸಾಲಿನಲ್ಲಿ ವಾರ್ಷಿಕ ಸಾಲ ಯೋಜನೆಯಡಿ ಕೃಷಿ, ಭೂ ಅಭಿವೃದ್ಧಿ, ತೋಟಗಾರಿಕೆ, ಹೈನುಗಾರಿಕೆ ಸೇರಿದಂತೆ ಪ್ರಾಥಮಿಕ ಆದ್ಯತಾ ವಲಯಕ್ಕೆ ₹ 1,501 ಕೋಟಿ ಸಾಲ ಹಾಗೂ ಕಿರು ಕೈಗಾರಿಕೆ, ಪ್ರವಾಸೋದ್ಯಮ, ರಫ್ತು ಸೇರಿದಂತೆ ಆದ್ಯತೇತರ ವಲಯಕ್ಕೆ ₹ 259 ಕೋಟಿ ಸಾಲ ನೀಡಿಕೆ ಗುರಿ ಹಾಕಿಕೊಳ್ಳಲಾಗಿದೆ. ಕಾರ್ಯಕ್ರಮಗಳ ಅನುಷ್ಠಾನಕ್ಕೆ ಎಲ್ಲ ಬ್ಯಾಂಕ್‌ಗಳು ಮುಂದಾಗಬೇಕು’ ಎಂದು ಸಲಹೆ
ನೀಡಿದರು.
‘ಬ್ಯಾಂಕ್‌ಗಳಲ್ಲಿ ಕ್ಲೇಮು ಮಾಡದ ಹಣ ವಾರಸುದಾರರಿಗೆ ತಲುಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನೀತಿಯನ್ನು ಪಾಲಿಸಬೇಕು. ಹೂಡಿಕೆದಾರರು, ಠೇವಣಿದಾರರು ಹಾಗೂ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವವರು ಮೃತಪಟ್ಟ ನಂತರ ಕ್ಲೇಮು ಮಾಡಿಕೊಳ್ಳದೇ ಇರುವ ಅವರ ಹಣವನ್ನು ಉತ್ತರಾಧಿಕಾರಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕು. ಕ್ಲೇಮು ಮಾಡಲು ಅವಕಾಶ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಡಿಜಿಟಲ್ ಬ್ಯಾಕಿಂಗ್, ಆನ್‌ಲೈನ್ ಪಾವತಿ ವ್ಯವಸ್ಥೆ, ಕ್ಯೂಆರ್ ಕೋಡ್ ಪಾವತಿಗೆ ಆದ್ಯತೆಯನ್ನು ಬ್ಯಾಂಕ್‌ಗಳು ನೀಡಬೇಕು. ಗ್ರಾಹಕರಿಗೆ ಮಾತೃಭಾಷೆಯಲ್ಲಿ ಉತ್ತಮ ಸೇವೆ ನೀಡುವ ವ್ಯವಸ್ಥೆ ಮಾಡಬೇಕು’ ಎಂದು ನಿರ್ದೇಶನ ನೀಡಿದರು.
ಹಣ ವರ್ಗಾವಣೆ ಮೇಲೆ ನಿಗಾವಹಿಸಿ: ‘ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯವಹಾರದ ಮೇಲೆ ನಿಗಾ ಇಡಬೇಕು. ನೀತಿ ಸಂಹಿತೆ ಜಾರಿಯಲ್ಲಿ ಸಹಕರಿಸಬೇಕು. ಅನುಮಾನಾಸ್ಪದ ಹಣ ವರ್ಗಾವಣೆ ಕಂಡು ಬಂದಲ್ಲಿ ಜಿಲ್ಲಾಡಳಿತಕ್ಕೆ ಕೂಡಲೇ ಮಾಹಿತಿ ನೀಡಬೇಕು. ಪಾರದರ್ಶಕ ಚುನಾವಣೆ ನಡೆಸಲು ಕರ್ತವ್ಯ ಪಾಲಿಸಬೇಕು’ ಎಂದು ಕವಿತಾ ಹೇಳಿದರು.
‘ಎಲ್ಲ ಬ್ಯಾಂಕ್ ಸಿಬ್ಬಂದಿಯೂ ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ಕೂಡಲೇ ನೋಂದಾಯಿಸಬೇಕು’ ಎಂದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಸವಿತಾ, ಭಾರತೀಯ ಸ್ಟೇಟ್ ಬ್ಯಾಂಕ್‌ನ ಉಪ ವ್ಯವಸ್ಥಾಪಕ ರಾಜೇಶ್ ಕುಮಾರ್ ಚೌಧರಿ, ಭಾರತೀಯ ರಿಸರ್ವ್ ಬ್ಯಾಂಕ್‌ನ ಎಫ್‌ಐಡಿಡಿ ವಿಭಾಗ ವ್ಯವಸ್ಥಾಪಕಿ ಝಡ್ ಜೆ. ಜೀವಿಕಾ, ಮಾರ್ಗದರ್ಶಿ ಬ್ಯಾಂಕ್‌ನ ವ್ಯವಸ್ಥಾಪಕಿ ಪಿ.ಕೆ.ವಿದ್ಯಾ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಶಾಂತವೀರ, ಕುಮಾರಸ್ವಾಮಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.