ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BJP ಸಮಾವೇಶಕ್ಕೆ ಶ್ರೀನಿವಾಸಪ್ರಸಾದ್‌ ಗೈರು: ಫಲಿಸಿದ CM ಸಿದ್ದರಾಮಯ್ಯ ತಂತ್ರ!

Published 16 ಏಪ್ರಿಲ್ 2024, 5:29 IST
Last Updated 16 ಏಪ್ರಿಲ್ 2024, 5:29 IST
ಅಕ್ಷರ ಗಾತ್ರ

ಮೈಸೂರು: ಈ ಭಾಗದ ಪ್ರಭಾವಿ ದಲಿತ ನಾಯಕ ಮತ್ತು ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಪಾಲ್ಗೊಂಡಿದ್ದ ಸಮಾವೇಶದಿಂದ ದೂರ ಉಳಿಯುವಂತೆ ನೋಡಿಕೊಳ್ಳುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ‘ರಾಜಕೀಯ ತಂತ್ರ’ ಫಲ ನೀಡಿದೆ.

‘ತಮ್ಮ ಹಾಗೂ ಪ್ರಸಾದ್ ನಡುವೆ ಹಲವು ವರ್ಷಗಳಿಂದ ಇದ್ದ ಮುನಿಸು–ವೈರತ್ವವನ್ನು ಮರೆತು ಸ್ನೇಹದ ಹಸ್ತ ಚಾಚಿದ ಸಿದ್ದರಾಮಯ್ಯ ಅವರ ನಡೆಯು, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸುವಂತೆ ಮಾಡಿದೆ’ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ ಮತ್ತು ವಿವಿಧ ರೀತಿಯ ಚರ್ಚೆಗಳೂ ನಡೆಯುತ್ತಿವೆ.

‘ಮೋದಿ ಭಾಗವಹಿಸುವ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಪ್ರಸಾದ್ ಪಾಲ್ಗೊಂಡರೆ, ಮತದಾರರು, ಅವರ ಬೆಂಬಲಿಗರು, ಅನುಯಾಯಿಗಳು ಮತ್ತು ದಲಿತರಿಗೆ ರವಾನೆಯಾಗುವ ಸಂದೇಶದಿಂದ ತಮಗೆ ಹೊಡೆತ ಬೀಳಬಹುದು’ ಎಂದರಿತು ಎಚ್ಚೆತ್ತುಕೊಂಡು ಸಿದ್ದರಾಮಯ್ಯ ಭೇಟಿಯಾದರು. ಆರೋಗ್ಯ ವಿಚಾರಿಸುವ ನೆಪದಲ್ಲಿ, ಸಮಾವೇಶದ ಮುನ್ನಾದಿನವೇ ಅವರು ಪ್ರಸಾದ್ ಅವರನ್ನು ಭೇಟಿಯಾಗಿ ಉರುಳಿಸಿದ ದಾಳ ಯಶಸ್ಸು ತಂದುಕೊಟ್ಟಿದೆ’ ಎಂದು ಹೇಳಲಾಗುತ್ತಿದೆ.

ಹಲವು ಬಾರಿ ಕೇಳಿಕೊಂಡರೂ: ಸಮಾವೇಶದ ದಿನದಂದೇ ತರಾತುರಿಯಲ್ಲಿ ಬಂದು ತಮ್ಮನ್ನು ಭೇಟಿಯಾಗಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ ಆಹ್ವಾನವನ್ನು ಪ್ರಸಾದ್ ನಯವಾಗಿಯೇ ತಿರಸ್ಕರಿಸಿದ್ದಾರೆ.

ಪ್ರಸಾದ್ ಅವರು ಯಾರಿಗೂ ಬೆಂಬಲ ವ್ಯಕ್ತಪಡಿಸಿಲ್ಲ. ಲಕ್ಷಾಂತರ ಅಭಿಮಾನಿಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಹಾಗೂ ಕುಟುಂಬದ ಕೆಲವರು ವೈಯುಕ್ತಿಕ ಲಾಭಕ್ಕಾಗಿ ಕಾಂಗ್ರೆಸ್‌ಗೆ ಹೋಗಿದ್ದಾರೆಷ್ಟೆ
ಬಿ.ಹರ್ಷವರ್ಧನ್‌, ಮಾಜಿ ಶಾಸಕ, ಪ್ರಸಾದ್ ಅಳಿಯ

‘ಪ್ರಧಾನಿ ಬರುತ್ತಾರೆ, ಒಂದ್ಹೈದು ನಿಮಿಷ ಬಂದು ಹೋಗಿ’ ಎಂದು ಯಡಿಯೂರಪ್ಪ ಅವರು ಹಲವು ಬಾರಿ ಮಾಡಿಕೊಂಡ ಮನವಿಗೆ ಅವರು ಆನಾರೋಗ್ಯದ ಕಾರಣವನ್ನು ಮುಂದು ಮಾಡಿದರು. ಅಲ್ಲಿಗೆ, ಬಿಎಸ್‌ವೈ ಮನವೊಲಿಕೆಯ ಯತ್ನ ವಿಫಲವಾಯಿತು. ಹಾಲಿ ಸಂಸದರಾದ ಅವರು ಬಿಜೆಪಿ ಸಮಾವೇಶದಿಂದ ದೂರ ಉಳಿದಿರುವುದು ಬಿಜೆಪಿಗೆ ಆಘಾತ ನೀಡಿದೆ; ಇದರಿಂದ ನಮಗೆ ಲಾಭವಾಗಬಹುದು ಎನ್ನುವುದು ಕಾಂಗ್ರೆಸ್‌ನವರ ಲೆಕ್ಕಾಚಾರವಾಗಿದೆ.

ಸುಲಭವಾಗಿ ಅರ್ಥಗಾಗುತ್ತದೆ: ‘ಬಿಜೆಪಿಯ ಸ್ಥಳೀಯ ನಾಯಕರು, ಬೃಹತ್‌ ಸಮಾವೇಶ ಆಯೋಜನೆಗೆ ಸಂಬಂಧಿಸಿದಂತೆ ಈ ನಾಯಕನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಅವರ ಅಳಿಯಂದಿರಾದ ಬಿ.ಹರ್ಷವರ್ಧನ್ ಹಾಗೂ ಡಾ.ಮೋಹನ್ ಅವರಲ್ಲಿ ಒಬ್ಬರನ್ನೂ ಪರಿಗಣಿಸಲಿಲ್ಲ. ಬೇರೆಯವರಿಗೆ ಟಿಕೆಟ್‌ ಕೊಡಲಾಯಿತು. ಟಿಕೆಟ್ ಹಂಚಿಕೆ ವಿಷಯದಲ್ಲೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ; ಅಭಿಪ್ರಾಯಕ್ಕೆ ಮನ್ನಣೆ ನೀಡಲಿಲ್ಲ. ಇದು ಪ್ರಸಾದ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಕಡೆಗಣಿಸಿದ್ದು ಮೊದಲಾದ ಕಾರಣದಿಂದಾಗಿಯೇ ಅವರು ಸಮಾವೇಶಕ್ಕೆ ಗೈರು ಹಾಜರಾದರು. ಈ ಮೂಲಕ ಅವರು ರವಾನಿಸಿರುವ ಸಂದೇಶವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು’ ಎಂದು ಅವರ ಬೆಂಬಲಿಗರೊಬ್ಬರು ಹೇಳಿದರು.

ರಾಜಕೀಯದಿಂದ ನಿವೃತ್ತಿಯಾದ ನಂತರ ಹಲವರು ನನ್ನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಯಾವುದಾದರು ಸಮಾವೇಶಕ್ಕೆ ಹೋಗುವುದು ಬಿಡುವುದು ನನಗೆ ಬಿಟ್ಟಿದ್ದಲ್ಲವೇ?.
ವಿ.ಶ್ರೀನಿವಾಸ ಪ್ರಸಾದ್, ಬಿಜೆಪಿ ಸಂಸದ

‘ಒಂದು ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸದೇ ಇದ್ದಿದ್ದರೆ ಪರಿಸ್ಥಿತಿ ಬೇರೆ ಆಗುತ್ತಿತ್ತು. ಅವರ ಮೇಲಿರುವ ಕೋಪದ ಕಾರಣದಿಂದಲೇ, ಬಿಜೆಪಿಯ ಸಮಾವೇಶದಲ್ಲಿ ಕೊಂಚ ಹೊತ್ತು ಪಾಲ್ಗೊಳ್ಳುತ್ತಿದ್ದರೇನೋ? ಆಗ ಅದು, ಪಕ್ಷಕ್ಕೆ ದುಬಾರಿ ಆಗಬಹುದು ಎಂಬುದರ ಲೆಕ್ಕಾಚಾರ ಹಾಕಿಕೊಂಡೇ ಮುಖ್ಯಮಂತ್ರಿಯು ಅವರ ಮನೆಗೇ ಬಂದಿದ್ದರು. ಆಪ್ತರಾದ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರನ್ನು ಚಾಮರಾಜನಗರಲ್ಲಿ ಗೆಲ್ಲಿಸಿಕೊಳ್ಳುವ ತಂತ್ರದ ಭಾಗವೂ ಇದಾಗಿದೆ’ ಎಂದು ವಿಶ್ಲೇಷಿಸಿದರು.

‘ನಾನು ರಾಜಕೀಯದ ಜೊತೆ, ಬಿಜೆಪಿಯಿಂದಲೇ ನಿವೃತ್ತಿಯಾಗಿದ್ದೇನೆ’ ಎಂದು ಪ್ರಸಾದ್ ಪದೇ ಪದೇ ಯಡಿಯೂರಪ್ಪ ಅವರ ಎದುರು ಹೇಳಿಕೊಂಡರು. ಆದರೆ, ಅವರು ಯಾವ ಪಕ್ಷಕ್ಕೂ ನೇರವಾಗಿ ಬೆಂಬಲವನ್ನು ಘೋಷಿಸಿಲ್ಲ ಹಾಗೂ ರಾಜಕೀಯ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರನ್ನು ನಾಯಕರು ಭೇಟಿಯಾಗಿ ಬೆಂಬಲ ಯಾಚಿಸುವುದು ನಿಂತಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT