ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯುತ್ತಿವೆ ಮೈಸೂರ ಜೌಗುಗಳು

ವಿನಾಶದತ್ತ ಜಲ ಸಂಸ್ಕೃತಿ; ನಿದ್ರಿಸುತ್ತಿರುವ ಪಾಲಿಕೆ, ಮುಡಾ, ಜಿಲ್ಲಾಡಳಿತ
Published 2 ಫೆಬ್ರುವರಿ 2024, 5:34 IST
Last Updated 2 ಫೆಬ್ರುವರಿ 2024, 5:34 IST
ಅಕ್ಷರ ಗಾತ್ರ

ಮೈಸೂರು: ಎರಡು ವರ್ಷದ ಹಿಂದೆ ಉಸಿರಾಡುತ್ತಿದ್ದ ಚಾಮುಂಡಿ ಬೆಟ್ಟದ ತಪ್ಪಲಿನ ತಿಪ್ಪಯ್ಯನ ಕೆರೆಯೀಗ ವಿಷಮಯವಾಗಿದೆ. ಬಾನಾಡಿಗಳು ಮಾಯವಾಗಿವೆ. ಹಾವಸೆ, ಶೈವಲ ಬೆಳೆದಿವೆ.

ಪಾರಂಪರಿಕ ನಗರಿಯಲ್ಲಿನ ಜಲ ಸಂಸ್ಕೃತಿಯ ನಾಶ ಹಾಗೂ ಉಳಿಸುವ ಬಗ್ಗೆ ‘ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ’ಯು (ಇಎಂಪಿಆರ್‌ಐ) ಹಲವು ವರ್ಷಗಳ ಹಿಂದೆಯೇ ವರದಿ (ಮೈಸೂರು-ನಂಜನಗೂಡು ಯೋಜನಾ ಪ್ರದೇಶದಲ್ಲಿ ಜಲಮೂಲಗಳ ಸುಸ್ಥಿರ ಸಂರಕ್ಷಣೆಗೆ ಕಾರ್ಯತಂತ್ರ) ಸಿದ್ಧಪಡಿಸಿ, ಪಾಲಿಕೆ ಹಾಗೂ ಮುಡಾಕ್ಕೆ ನೀಡಿದ್ದರೂ ಪ್ರಯೋಜನವಾಗಿಲ್ಲ.

‘ಭವಿಷ್ಯದಲ್ಲಿ ಮೈಸೂರು ನಗರವು ನಂಜನಗೂಡನ್ನೂ ಒಳಗೊಂಡಂತೆ 276 ಚದರ ಕಿ.ಮೀ ವ್ಯಾಪಿಸಲಿದೆ. 106 ಕೆರೆ–ಕಟ್ಟೆ–ಕುಂಟೆಗಳು ಈ ಪ್ರದೇಶದಲ್ಲಿದ್ದು, ಅವುಗಳಲ್ಲಿ 37 ಮಾಯವಾಗಿವೆ. 69 ಜಲಮೂಲಗಳಷ್ಟೇ ಉಳಿದಿವೆ’ ಎನ್ನುತ್ತದೆ ವರದಿ. 

ಮೈಸೂರು ನಗರ ಹಾಗೂ ಸುತ್ತಮುತ್ತ 28 ಕೆರೆ, 31 ಕಟ್ಟೆ, 14 ಕುಂಟೆ, ನಂಜನಗೂಡಿನಲ್ಲಿ 14 ಕೆರೆ, 7 ಕಟ್ಟೆ, 13 ಕುಂಟೆಗಳಿವೆ. 69 ಜಲಮೂಲಗಳಲ್ಲಿ 35 ನೀರಿನ ಒಡಲುಗಳು ವರ್ಷ ಪೂರ್ತಿ ತುಂಬಿದ್ದರೆ, ಉಳಿದವು ಮಳೆಗಾಲದಲ್ಲಿ ತುಂಬಿರುತ್ತವೆ.

ಕಟ್ಟಡ ತ್ಯಾಜ್ಯ: ಕೆರೆಗಳ ಜೊತೆಗೆ 3 ಎಕರೆ ವಿಸ್ತೀರ್ಣದ ಕಟ್ಟೆಗಳು, 1 ಎಕರೆ ವಿಸ್ತೀರ್ಣದ ಕುಂಟೆಗಳು ತೀವ್ರ ಅಪಾಯದಲ್ಲಿವೆ. ಚಾಮುಂಡಿ ಬೆಟ್ಟದ ಸುತ್ತಲಿನ ಜಲಮೂಲಗಳು, ರಿಂಗ್‌ ರಸ್ತೆಯ ಹೊಂದಿಕೊಂಡಂತಿದ್ದ ಹಳ್ಳ, ಜೌಗುಗಳಲ್ಲಿ ಕಟ್ಟಡ ತ್ಯಾಜ್ಯ ತುಂಬುತ್ತಿದೆ.

ಮಳೆನೀರು– ಚರಂಡಿ ನೀರು ಬೇರ್ಪಡಿಸದೇ ಸರಿಯಾದ ನಿರ್ವಹಣೆ ಮಾಡದಿರುವ ಪಾಲಿಕೆ ಇದುವರೆಗೂ ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕ ತೆರೆದಿಲ್ಲ. ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳೂ ತ್ಯಾಜ್ಯ ವಿಲೇವಾರಿ ಬಗ್ಗೆ ನಿರ್ಲಕ್ಷ್ಯ ವಹಿಸಿವೆ.

‘ತಿಪ್ಪಯ್ಯನ ಕೆರೆ ಮೇಲಿದ್ದ ಸಾತಿ ಕೆರೆಯನ್ನೇ ಮುಚ್ಚಲಾಗುತ್ತಿದೆ. ಎಲ್ಲ ಕೆರೆಗಳಿಗೂ ಚರಂಡಿ ನೀರು ಸೇರುತ್ತಿದೆ. ರಾಜಕಾಲುವೆಗಳು ಒತ್ತುವರಿಯಾಗಿವೆ. ಕುಕ್ಕರಹಳ್ಳಿ ಕೆರೆಗೆ ಮಹಾ ರಾಜಕಾಲುವೆಯಾಗಿದ್ದ ಪಾರಂಪರಿಕ ಪೂರ್ಣಯ್ಯ ನಾಲೆಯನ್ನೇ ಇಲ್ಲವಾಗಿಸಲಾಗುತ್ತಿದೆ. ಇದೇ ಪರಿಸ್ಥಿತಿ ಎಲ್ಲ ಕೆರೆಗಳಿಗೂ ಬರುತ್ತಿದೆ’ ಎನ್ನುತ್ತಾರೆ ಜಲತಜ್ಞ ಯು.ಎನ್‌.ರವಿಕುಮಾರ್. 

‘ಜಯನಗರದಲ್ಲಿದ್ದ 25 ಎಕರೆಯ ಮಳಲವಾಡಿ ಕೆರೆ ಮಾಯವಾಗಿದೆ. ರಾಜಕಾಲುವೆಗಳು ಹಾಗೂ ಬಫರ್‌ ವಲಯಗಳು ಕಾಂಕ್ರಿಟ್‌ ಮೋರಿಗಳಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೆರೆಗಳನ್ನು ರಕ್ಷಿಸಿ ಸುಸ್ಥಿರವಾಗಿಡುವ ಉಸ್ತುವಾರಿ ಯಾರದ್ದೆಂಬ ಪ್ರಶ್ನೆ ಆಡಳಿತ ವ್ಯವಸ್ಥೆಗಿದೆ. ಒಂದು ಕಾಲದಲ್ಲಿ ನೀರಾವರಿಗೆ ಬಳಸುತ್ತಿದ್ದ ಕೆರೆಗಳನ್ನು ಇದೀಗ ಅಂತರ್ಜಲ ಮರುಪೂರಣ ಹಾಗೂ ಪ್ರವಾಹ ತಡೆಗೆ ಹಾಗೂ ನಗರದ ಜೀವ ವೈವಿಧ್ಯ ಉಳಿವಿನ ತಾಣವಾಗಿ ಉಳಿಸಿಕೊಳ್ಳಬೇಕಿದೆ’ ಎಂದರು.

ಎರಡು ವರ್ಷದ ಹಿಂದೆ ಸ್ವಚ್ಛ ನೀರಿನಿಂದ ತುಂಬಿದ್ದ ತಿಪ್ಪಯ್ಯನ ಕೆರೆ
ಎರಡು ವರ್ಷದ ಹಿಂದೆ ಸ್ವಚ್ಛ ನೀರಿನಿಂದ ತುಂಬಿದ್ದ ತಿಪ್ಪಯ್ಯನ ಕೆರೆ

ಅರಣ್ಯ ನಾಶಕ್ಕಿಂತಲೂ ಮೂರು ಪಟ್ಟು ವೇಗದಲ್ಲಿ ಕೆರೆ ಕಟ್ಟೆ ಕುಂಟೆಗಳು ನಾಶವಾಗುತ್ತಿವೆ. ಮಕ್ಕಳ ಪರಿಸರದ ಕಿಟಕಿಗಳಾದ ಈ ಜಲಮೂಲ ಉಳಿಸಬೇಕು

-ಯು.ಎನ್‌.ರವಿಕುಮಾರ್ ಪರಿಸರ ತಜ್ಞ

ಚರಂಡಿ ನೀರಿನ ತೊಟ್ಟಿಗಳು’

‘ಕನ್ನಡಿಗರು ಮತ್ತೊಂದು ಕೆರೆಯನ್ನು ನಿರ್ಮಿಸಲಾಗದಂತೆ ಕೆರೆಯ ಜಾಲವನ್ನು ಕಟ್ಟಿಸಿದ್ದರೆಂದು ಬ್ರಿಟನ್‌ನ ಸಿವಿಲ್‌ ಎಂಜಿನಿಯರ್‌ ಸ್ಯಾಂಕಿ 1870ರಲ್ಲಿಯೇ ಹೇಳಿದ್ದರು. ಈಗ ಕೆರೆಗಳು ಚರಂಡಿ ನೀರಿನ ತೊಟ್ಟಿಗಳಾಗುತ್ತಿವೆ’ ಎಂದು ಪರಿಸರ ತಜ್ಞ ಕೆ.ಮನು ಕಳವಳ ವ್ಯಕ್ತಪಡಿಸಿದರು. ‘ಐವತ್ತು ವರ್ಷದ ಹಿಂದೆ ಮೈಸೂರಿನ ಪ್ರತಿ ಮನೆಯಲ್ಲೂ 3 ಅಡಿ 4 ಅಡಿ ಅಗಲದ ಬಾವಿಗಳಿದ್ದವು. ಅಂತರ್ಜಲ ಮಟ್ಟ ಚೆನ್ನಾಗಿತ್ತು. ಅದಕ್ಕೆ ಕಾರಣ ಕೆರೆಗಳು. ದೊಡ್ಡಕೆರೆ ಸುಬ್ಬರಾಯನಕೆರೆ ಜೀವರಾಯನಕಟ್ಟೆ ಮಡಿವಾಳ ಕೆರೆ ಸೇರಿದಂತೆ ನಗರದ 18 ಕೆರೆಗಳು ಅಳಿದಿವೆ’ ಎಂದರು.     ‘70ರ ದಶಕದಲ್ಲಿ ಡಾ.ಮೇವಾ ಸಿಂಗ್ ಉಲ್ಲಾಸ್‌ ಕಾರಂತ್ ಡಾ.ಮಂಜ್ರೇಕರ್‌ ಅವರ ಹೋರಾಟದಿಂದ ಕುಕ್ಕರಹಳ್ಳಿ ಲಿಂಗಾಂಬುಧಿ ಕಾರಂಜಿ ಉಳಿದಿವೆ. ಅವುಗಳ ರಕ್ಷಣೆ ಹಾಗೂ ಸುಸ್ಥಿರ ನಿರ್ವಹಣೆ ಸವಾಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT