ಮೈಸೂರು: ಎಂಟು ವರ್ಷದ ನಂತರ ಅರಮನೆ ನಗರಿಯಲ್ಲಿ ನಡೆಯುತ್ತಿರುವ ‘ಐಟಿಎಫ್– ಮೈಸೂರು ಓಪನ್’ ಟೆನಿಸ್ ಟೂರ್ನಿಯಲ್ಲಿ ಮೈಸೂರಿನ ಎಸ್.ಡಿ.ಪ್ರಜ್ವಲ್ ದೇವ್, ಮನೀಷ್ ಗಣೇಶ್ ಹಾಗೂ ಆರ್.ಸೂರಜ್ ಪ್ರಭೋದ್ ಮಿಂಚಿದ್ದಾರೆ.
8–10 ವರ್ಷವಿದ್ದಾಗ ಟೆನಿಸ್ ರಾಕೆಟ್ ಹಿಡಿದು ಬಂದ ಈ ಚಿಣ್ಣರು, ಇಂದು ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ಪೋಷಕರು ಹಾಗೂ ಮೈಸೂರಿನ ಟೆನಿಸ್ ಪ್ರಿಯರ ಕಣ್ಣುಗಳಲ್ಲಿ ಭರವಸೆ ಮೂಡಿಸಿದ್ದಾರೆ.
ಮಹಾರಾಜ ಕಾಲೇಜಿನ ಟೆನಿಸ್ ಅಂಗಳದಲ್ಲಿ 9 ವರ್ಷವಿದ್ದಾಗ ಟೆನಿಸ್ ಆಡಲು ಬಂದ ನಗರದ ಕೃಷ್ಣಮೂರ್ತಿ ಬಡಾವಣೆಯ ಎಸ್.ಡಿ.ಪ್ರಜ್ವಲ್ ದೇವ್, ಮೈಸೂರು ಓಪನ್‌ನಲ್ಲಿ ತಮಗಿಂತ ರ‍್ಯಾಕಿಂಗ್ ಉತ್ತಮವಾಗಿದ್ದ ಘಟಾನುಘಟಿ ಆಟಗಾರರನ್ನು ಮಣಿಸಿ ಇದೀಗ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ತವರಿನ ಅಂಗಳದಲ್ಲಿ ಟ್ರೋಫಿಗೆ ಮುತ್ತಿಕ್ಕುವ ಕನಸು ಅವರದು.
ನಡೆದು ಬಂದ ದಾರಿಯನ್ನು ಭಾವುಕವಾಗಿಯೇ ನೆನೆದ ಪ್ರಜ್ವಲ್, ‘ಪ್ರಜಾವಾಣಿ’ ಜೊತೆ ಪ್ರತಿಷ್ಠಿತ ಮೈಸೂರು ಟೆನಿಸ್ ಕ್ಲಬ್ ಅಂಗಳದಲ್ಲಿ ಅಭ್ಯಾಸ ಮಾಡುತ್ತಿದ್ದ ದಿನಗಳನ್ನು, ಸ್ನೇಹಿತರು ಹಾಗೂ ನೆಚ್ಚಿನ ಕೋಚ್‌ಗಳನ್ನು ಸ್ಮರಿಸಿದರು.
‘ತಾತ ಪ್ರೊ.ಶಿವಲಿಂಗಯ್ಯ ಮಹಾರಾಜ ಕಾಲೇಜಿನಲ್ಲಿ ನಿವೃತ್ತ ಪ್ರಾಂಶುಪಾಲರಾಗಿದ್ದರು. ನನಗೆ 9 ವರ್ಷವಿದ್ದಾಗ ಅವರೊಂದಿಗೆ ಅಲ್ಲಿಗೆ ಟೆನಿಸ್ ಆಡಲು ಹೋಗುತ್ತಿದ್ದೆ. ಆಗ, ಆಡುವ ಖುಷಿಯಷ್ಟೇ ಇತ್ತು. ನಂತರ ಸಾಧನೆ ಮಾಡುವ ಕನಸನ್ನು ಪೋಷಕರು, ಕೋಚ್‌ಗಳಾದ ನಾಗರಾಜ್, ರಘುವೀರ್ ತುಂಬಿದರು. ಬೆಂಗಳೂರಿನಲ್ಲಿರುವ ಮೈಸೂರಿನ ಪ್ರಹ್ಲಾದ ಶ್ರೀನಾಥ್ ಅವರ ಅಕಾಡೆಮಿ, ರೋಹನ್ ಬೋಪಣ್ಣ ಅಕಾಡೆಮಿಯಲ್ಲಿಯೂ ತರಬೇತಿ ಪಡೆದಿದ್ದೇನೆ’ ಎಂದರು.
‘ಸಾಧನೆಗೆ ಮೈಸೂರು ಟೆನಿಸ್ ಕ್ಲಬ್ ಪ್ರೋತ್ಸಾಹ ನೀಡಿದೆ. ಉತ್ತಮ ಆಟಗಾರರು ಇಲ್ಲಿದ್ದಾರೆ. ಬೆಂಗಳೂರಿನಿಂದಲೂ ಅಭ್ಯಾಸ ನಡೆಸಲು ಬರುತ್ತಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಯಾವುದೇ ಸಮಯದಲ್ಲೂ ಅಭ್ಯಾಸ ನಡೆಸಲು ಅವಕಾಶ ನೀಡಿದ್ದಾರೆ. ಟೆನಿಸ್ ನನ್ನ ಉಸಿರು. ಜೊತೆಯಲ್ಲಿ ಜೈನ್ ವಿಶ್ವವಿದ್ಯಾಲಯದಲ್ಲಿ ಬಿಬಿಎ ಓದುತ್ತಿದ್ದೇನೆ’ ಎಂದು 26 ವರ್ಷದ ಪ್ರಜ್ವಲ್ ಹೇಳಿದರು.
‘ಸರ್ವ್ ಮುರಿಯುವುದೆಂದರೆ ಇಷ್ಟ. ಹೀಗಾಗಿ ಫೋರ್‌ಹ್ಯಾಂಡ್ ನನ್ನ ಇಷ್ಟದ ಹೊಡೆತ. ಕೆಲವೊಮ್ಮೆ ಆಟದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಆಗುವುದಿಲ್ಲ. ಅಭ್ಯಾಸ ಇರಬೇಕು. ನಿತ್ಯ 4 ಗಂಟೆ ಟೆನಿಸ್ ಅಭ್ಯಾಸ ಹಾಗೂ 2 ಗಂಟೆ ಫಿಟ್‌ನೆಸ್‌ಗೆ ಮೀಸಲಿಟ್ಟಿದ್ದೇನೆ’ ಎಂದರು.
‘ಐಟಿಎಫ್ ಜ್ಯೂನಿಯರ್ ಬಾಂಗ್ಲಾದೇಶದಲ್ಲಿ ಮೊದಲು ಆಡಿದೆ. ದೆಹಲಿ ಹಾಗೂ ಕೊಲೊಂಬೊದಲ್ಲಿ ನಡೆದ ಐಟಿಎಫ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆದೆ. ಇದುವರೆಗೂ 9 ಡಬಲ್ಸ್ ಫೈನಲ್ ಆಡಿದ್ದೇನೆ. ಈ ಬಾರಿ ಟ್ರೋಫಿ ಗೆಲ್ಲಬೇಕು ಎಂಬುದೇ ಗುರಿ’ ಎಂದು ನಗೆ ಬೀರಿದರು.
‘ನನ್ನ ಸಾಧನೆಯಲ್ಲಿ ತಂದೆ ಎಸ್.ಎನ್.ದೇವರಾಜು (ನಿವೃತ್ತ ಡಿಸಿಎಫ್), ತಾಯಿ ಡಾ.ಎಂ.ಎಸ್.ನಿರ್ಮಲಾ (ಪ್ರಸೂತಿ ತಜ್ಞೆ) ಕೊಡುಗೆ ಇದೆ. ಕೋಚ್ ಅರ್ಜುನ್ ಗೌತಮ್ ಕಳೆದ 3 ವರ್ಷದಿಂದ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.