ಮೈಸೂರು: ಚಿರತೆ ಸೆರೆಗೆ ಕ್ರಮ –ಮುಖ್ಯಮಂತ್ರಿ
ಮೈಸೂರು: ‘ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಿಲ್ಲೆಯ ಸುತ್ತೂರಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಭಾನುವಾರ ಆಗಮಿಸಿದ ವೇಳೆ ಹೆಲಿಪ್ಯಾಡ್‌ನಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಆ ತಾಲ್ಲೂಕಿನಲ್ಲಿ ಚಿರತೆ ದಾಳಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಶನಿವಾರ ಬಾಲಕನ ಮೇಲೆ ದಾಳಿ ನಡೆಸಿದೆ. ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ದೇಹ ಭಾನುವಾರ ದೊರೆತಿದೆ. ಚಿರತೆಯು ಈ ಹಿಂದೆಯೂ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಬಾರಿ ದಾಳಿ ಮಾಡಿದೆ. ಅಲ್ಲೆಲ್ಲವೂ ವಿಶೇಷ ಪಡೆಗಳಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದೇನೆ’ ಎಂದರು.
‘ಆ ಭಾಗದ ಜನರಲ್ಲಿ ಜಾಗೃತಿ ಮೂಡಿಸಬೇಕು, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಕಾವಲುಗಾರರನ್ನಾಗಿ ನಿಯೋಜಿಸಬೇಕೆಂದು ತಿಳಿಸಿದ್ದೇನೆ. ಮತ್ತೆ ಹೆಚ್ಚಿನ ಬಲಿ ಕೊಡಲಾಗುವುದಿಲ್ಲ. ಅದೇ ತಾಲ್ಲೂಕಿನಲ್ಲಿ ಇತ್ತೀಚೆಗೆ ಚಿರತೆಯೊಂದನ್ನು ಸೆರೆ ಹಿಡಿಯಲಾಗಿತ್ತು. ಈಗ ದಾಳಿ ಮಾಡಿರುವ ಚಿರತೆಯನ್ನೂ ಆದಷ್ಟು ಬೇಗ ಸೆರೆ ಹಿಡಿಯಲಾಗುವುದು’ ಎಂದು ತಿಳಿಸಿದರು.
‘ಪರಿಹಾರ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಕೂಡಲೇ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.