ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾ ರೈಲು ದುರಂತದಲ್ಲಿ ತೊಂದರೆಗೆ ಸಿಲುಕಿದ್ದ ಕ್ರೀಡಾಪಟುಗಳು ವಾಪಸ್

Published 5 ಜೂನ್ 2023, 7:17 IST
Last Updated 5 ಜೂನ್ 2023, 7:17 IST
ಅಕ್ಷರ ಗಾತ್ರ

ಹುಣಸೂರು: ಒಡಿಶಾ ರೈಲು ದುರಂತದಿಂದಾಗಿ ತೊಂದರೆಗೆ ಸಿಲುಕಿದ್ದ ವಾಲಿಬಾಲ್ ಆಟಗಾರರು ತಾಯ್ನಾಡಿಗೆ ವಾಪಸ್ ಬಂದಿದ್ದು, ತಮ್ಮನ್ನು ಕರೆ ತರಲು ಸರ್ಕಾರಕ್ಕೆ ಮಾಹಿತಿ ನೀಡಿ ಸಂಕಷ್ಟಕ್ಕೆ ಸ್ಪಂದಿಸಿದ ಹುಣಸೂರಿನ ಮುಖಂಡ ಎಚ್.ಪಿ.ಮಂಜುನಾಥ್ ಅವರ ಮೈಸೂರಿನ ನಿವಾಸಕ್ಕೆ ಭಾನುವಾರ ವಾಲಿಬಾಲ್ ಕ್ರೀಡಾಪಟುಗಳು ತೆರಳಿ ಅಭಿನಂದನೆ ಸಲ್ಲಿಸಿದರು.

ಒಡಿಶಾ ರೈಲು ದುರಂತದಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ನ್ಯಾಷನಲ್ ವಾಲಿಬಾಲ್ ಚಾಂಪಿಯನ್ ಶಿಪ್‌ಗೆ ತೆರಳಿದ್ದ ಕರ್ನಾಟಕದ 16 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ತಂಡದ ಆಟಗಾರರು ಹಾಗೂ ಕೋಚ್‌ಗಳು ಹೌರಾದಿಂದ ಬೆಂಗಳೂರಿಗೆ ವಾಪಸ್ ಬರಲಾಗದೆ ಪರದಾಡಿದ್ದರು. ಈ ಬಗ್ಗೆ ಮುಖಂಡ ಮಂಜುನಾಥ್ ಕ್ರೀಡಾಪಟುಗಳ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಹಿತಿ ನೀಡಿದ್ದರು.

ಮುಖಂಡ ಎಚ್.ಪಿ.ಮಂಜುನಾಥ್ ಮಾತನಾಡಿ, ‘ನಮ್ಮ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ಕ್ರೀಡಾಪಟುಗಳು ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಸಂಕಷ್ಟದಲ್ಲಿರುವುದನ್ನು ಗಮನಕ್ಕೆ ಬಂದ ಕೂಡಲೇ ನಾನು ದೂರವಾಣಿ ಮೂಲಕ ಕ್ರೀಡಾಪಟುಗಳಿಗೆ ಆತ್ಮಸ್ಥೈರ್ಯ ತುಂಬಿದ್ದೆ. ಬಸ್ ಮೂಲಕ ಪ್ರಯಾಣ ಬೆಳೆಸಿ, ಅದಕ್ಕೆ ತಗಲುವ ಖರ್ಚು ವೆಚ್ಚ ಭರಿಸುತ್ತೇನೆ ಎಂದು ತಿಳಿಸಿ, ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯನವರು ಕೂಡಲೇ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರನ್ನು ಕಳುಹಿಸಿ ವಿಮಾನದ ಮೂಲಕ ಕ್ರೀಡಾಪಟುಗಳನ್ನು ತಾಯ್ನಾಡಿಗೆ ಕರೆತಂದರು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ ಎಂದರು.

ಕೋಚ್ ಮಮತಾ ಶೆಟ್ಟಿ ಮಾತನಾಡಿ, ‘ದೇವರ ದಯೆಯಿಂದ ಪಾರಾಗಿದ್ದೇವೆ. ಚಾಂಪಿಯನ್ ಶಿಪ್ ಮುಗಿಸಿ ಬಾಲಕ ಹಾಗೂ ಬಾಲಕಿಯರ ಎರಡು ತಂಡಗಳು ಬೆಂಗಳೂರಿಗೆ ಆಗಮಿಸುತ್ತಿದ್ದೆವು. ಬಾಲಕರ ತಂಡಕ್ಕೆ ಯಶವಂತಪುರ ಹೌರಾ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಲಾಗಿತ್ತು. ಆದರೆ ಬಾಲಕಿಯರ ತಂಡಕ್ಕೆ ಕಾಯ್ದಿರಿಸಿದ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್ ಪ್ರೆಸ್‌ನಲ್ಲಿ ಚೆನೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬರುವ ತೀರ್ಮಾನ ಮಾಡಿದ್ದೇವು. ಆದರೆ ಕೊನೆಯ ಕ್ಷಣದಲ್ಲಿ ಎರಡು ತಂಡಗಳು ಒಂದೇ ರೈಲಿನಲ್ಲಿ ಹೋಗೋಣ ಎಂದು ನಿರ್ಧಾರ ಮಾಡಿದೆವು. ಇದರಿಂದ ನಾವು ಕೋರ್ ಮಂಡಲ್ ರೈಲಿನಲ್ಲಿ ಪ್ರಯಾಣ ಮಾಡಲಿಲ್ಲ. ಹೀಗಾಗಿ ಅದೃಷ್ಟವಶಾತ್ ಬದುಕಿದೆವು’ ಎಂದು ಘಟನೆಯ ಬಗ್ಗೆ ಮಾಹಿತಿ ನೀಡಿದರು.

ಮುಖ್ಯಮಂತ್ರಿಗಳಿಗೆ ಧನ್ಯವಾದ ರಾಜ್ಯಕ್ಕೆ ಆಗಮಿಸಲು ಪರಿತಪಿಸುತ್ತಿದ್ದ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ತಂಡಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೆರವಾಗಿ ತಂಡವು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಆಗಲು ಸಹಕರಿಸಿದ್ದರು. ತಮ್ಮ ನೆರವಿಗೆ ಧಾವಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಮಿಕ ಸಚಿವ ಲಾಡ್ ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಿ ಸಹಕರಿಸಿದ ಹುಣಸೂರಿನ ಮುಖಂಡ ಎಚ್.ಪಿ.ಮಂಜುನಾಥ್ ಹಾಗೂ ಅಧಿಕಾರಿಗಳಿಗೆ ಕ್ರೀಡಾಪಟುಗಳು ಧನ್ಯವಾದ ಅರ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT