ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಶಾಲಾ ಮಕ್ಕಳಿಗೆ ‘ಪೂರಕ ಪೌಷ್ಟಿಕ’ ಆಹಾರ

ಮೊಟ್ಟೆ ತಿನ್ನಿಸಿ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ
Published : 26 ಸೆಪ್ಟೆಂಬರ್ 2024, 3:59 IST
Last Updated : 26 ಸೆಪ್ಟೆಂಬರ್ 2024, 3:59 IST
ಫಾಲೋ ಮಾಡಿ
Comments

ಮೈಸೂರು: ಶಾಲೆಗಳಲ್ಲಿ ಮಕ್ಕಳಿಗೆ ವಾರದಲ್ಲಿ 6 ದಿನಗಳು ‘ಪೂರಕ ಪೌಷ್ಟಿಕ ಆಹಾರ’ ಒದಗಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಇಲ್ಲಿನ ಮಹಾರಾಜ ಪಿಯು ಕಾಲೇಜು ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ‘ಬೇಯಿಸಿದ ಮೊಟ್ಟೆ’ ವಿತರಿಸುವ ಮೂಲಕ ಬುಧವಾರ ಸಾಂಕೇತಿಕವಾಗಿ ಚಾಲನೆ ನೀಡಿದರು.

2024–25ನೇ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ಬೇಯಿಸಿದ ಮೊಟ್ಟೆ, ಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸುವ ಕಾರ್ಯಕ್ರಮವಿದು.

ಈ ವೇಳೆ ಮಾತನಾಡಿದ ಸಚಿವರು, ‘ಏನನ್ನು ತಿನ್ನಬೇಕು; ತಿನ್ನಬಾರದು ಎಂಬುದನ್ನು ನಿರ್ಧರಿಸುವುದು ಅವರವರಿಗೆ ಬಿಟ್ಟಿದ್ದು. ಮೊಟ್ಟೆ ತಿನ್ನಬೇಡಿ ಎಂದು ಮಕ್ಕಳಿಗೆ ಹೇಳಿಕೊಡುವುದು ಸಂವಿಧಾನಕ್ಕೆ ವಿರುದ್ಧವಾದುದು. ಯಾರ ಹಕ್ಕನ್ನೂ ಕಸಿದುಕೊಳ್ಳಲು ಸಂವಿಧಾನದಲ್ಲಿ ಅವಕಾಶವಿಲ್ಲ’ ಎಂದು ತಿಳಿಸಿದರು.

‘ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕ ಕೊಡಲಾಗುತ್ತಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ 2 ದಿನದ ಬದಲಿಗೆ 6 ದಿನಗಳವರೆಗೆ ಪೂರಕ ಪೌಷ್ಟಿಕ ಆಹಾರ ಕೊಡಲಾಗುತ್ತದೆ. ಬೆಳೆಯುವ ಹಂತದಲ್ಲಿ ಪೌಷ್ಟಿಕ ಆಹಾರ ಸಿಗಲೆಂಬುದು ನಮ್ಮ ಸರ್ಕಾರದ ಉದ್ದೇಶ’ ಎಂದು ಹೇಳಿದರು.

ಶೇ 84ರಷ್ಟು ಮಕ್ಕಳಿಂದ ಮೊಟ್ಟೆ ಸೇವನೆ: ‘ಶೇ 100ರಷ್ಟು ರಾಜ್ಯದ ಪಾಲಿನ ಅನುದಾನದಿಂದ ವಿತರಿಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗೆ ಘಟಕ ವೆಚ್ಚವಾಗಿ ₹6 ನಿಗದಿಪಡಿಸಲಾಗಿದೆ. ಜಿಲ್ಲೆಗೆ ಒಟ್ಟು 1,83,380 ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ದೊರೆಯಲಿದೆ. ಸರ್ಕಾರ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇದಕ್ಕಾಗಿ ₹26.40 ಕೋಟಿ ವೆಚ್ಚವಾಗಲಿದೆ. ಶೇ 84.29ರಷ್ಟು ವಿದ್ಯಾರ್ಥಿಗಳು ಮೊಟ್ಟೆ, ಶೇ 8.88ರಷ್ಟು ಮಕ್ಕಳು ಬಾಳೆಹಣ್ಣು, ಶೇ 6.81ರಷ್ಟು ವಿದ್ಯಾರ್ಥಿಗಳು ಶೇಂಗಾ ಚಿಕ್ಕಿ ಸೇವಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ತಮ್ಮ ಬಾಲ್ಯವನ್ನು ನೆನೆದ ಸಚಿವರು, ‘ನಾನು ಓದುತ್ತಿದ್ದಾಗ ಜೋಳದ ಹಿಟ್ಟು, ತಂಗಳು ಸಾರು ಕೂಡ ಇರುತ್ತಿರಲಿಲ್ಲ’ ಎಂದು ಹೇಳಿದರು. ‘ಯಾರೊಬ್ಬರೂ ಹಸಿವಿನಿಂದ ಜೀವನ ಸಾಗಿಸಬಾರದು ಎನ್ನುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಆದ್ದರಿಂದ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ಮಧ್ಯಾಹ್ನದ ಬಿಸಿಯೂಟ, ಲೇಖನ ಸಾಮಗ್ರಿ, ಪಠ್ಯಪುಸ್ತಕ, ಸಮವಸ್ತ್ರ, ಶೂ–ಸಾಕ್ಸ್‌ ಮೊದಲಾದವುಗಳನ್ನು ನೀಡಲಾಗುತ್ತಿದೆ. ನಮಗೆ ಈಗಿನಷ್ಟು ಸೌಲಭ್ಯಗಳು ಸಿಗುತ್ತಿರಲಿಲ್ಲ’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿದರು. ಇದೇ ವೇಳೆ, ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡಲಾಯಿತು.

ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆ ನೀಡಲಾದ ಮೊಟ್ಟೆ ಮತ್ತು ಬಾಳೆ ಹಣ್ಣನ್ನು ಮಕ್ಕಳು ಖುಷಿಯಿಂದ ಸೇವಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಮೀರಾ, ಡಿಡಿಪಿಐ ಎಸ್.ಟಿ. ಜವರೇಗೌಡ, ಡಯಟ್ ಪ್ರಾಂಶುಪಾಲ ನಾಗರಾಜಯ್ಯ, ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್ ಯೋಜನೆಯ (ಜಿಲ್ಲಾ ಪಂಚಾಯಿತಿ) ಶಿಕ್ಷಣಾಧಿಕಾರಿ ಕೃಷ್ಣ ಪಾಲ್ಗೊಂಡಿದ್ದರು.

ಶಾಲಾ ಶಿಕ್ಷಣ ಇಲಾಖೆಯ ಯೋಜನೆ ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಸಹಯೋಗ ವಾರದಲ್ಲಿ 6 ದಿನ ವಿತರಣೆ

ಮಕ್ಕಳು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು
ಡಾ.ಎಚ್.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಸರ್ಕಾರವು 1ರಿಂದ 10ನೇ ತರಗತಿ ಮಕ್ಕಳಿಗೆ ನೀಡುತ್ತಿರುವ ಪೂರಕ ಪೌಷ್ಟಿಕ ಆಹಾರವನ್ನು ಪಿಯುಸಿವರೆಗೂ ವಿಸ್ತರಿಸಬೇಕು
ಸಿ.ಎನ್. ಮಂಜೇಗೌಡ ವಿಧಾನಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT