ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮತ್ತೆರಡು ಆಸ್ಪತ್ರೆ ಸೇವೆಗೆ ಲಭ್ಯ

ಟ್ರಾಮಾಕೇರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭ ಇಂದಿನಿಂದ
Last Updated 5 ಫೆಬ್ರುವರಿ 2023, 13:36 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಧೀನದಲ್ಲಿರುವ ಪಿಕೆಟಿಬಿ ಮತ್ತು ಸಿ.ಡಿ. ಆಸ್ಪತ್ರೆಯ ಆವರಣದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗವನ್ನು ಹಾಗೂ ಟ್ರಾಮಾಕೇರ್ ಸೆಂಟರ್‌ನಲ್ಲಿ ಒಳರೋಗಿ ವಿಭಾಗ ಮತ್ತು ಶಸ್ತ್ರಚಿಕಿತ್ಸೆ ಸೇವೆ ಫೆ.6ರಿಂದ ಪ್ರಾರಂಭಗೊಳ್ಳಲಿದೆ. ಇದರೊಂದಿಗೆ ನಗರ ಹಾಗೂ ಜಿಲ್ಲೆಯ ಜನರಿಗೆ ಮತ್ತೆರಡು ಆಸ್ಪತ್ರೆಗಳು ಸೇವೆಗೆ ದೊರೆತಂತಾಗಲಿದೆ.

ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗಿ ಎರಡು ವರ್ಷದ ಬಳಿಕ ಕಾರ್ಯಾರಂಭ ಮಾಡುತ್ತಿದೆ. ಇದರಿಂದ, ದೊಡ್ಡಾಸ್ಪತ್ರೆ ಎಂದೇ ಖ್ಯಾತವಾಗಿರುವ ಕೆ.ಆರ್‌.ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

‘₹134 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಕಿರಣ ಶಾಸ್ತ್ರ ವಿಭಾಗ, ನರವೈದ್ಯವಿಜ್ಞಾನ, ಪ್ಲಾಸ್ಟಿಕ್‌ ಸರ್ಜರಿ, ಮೂಳೆಚಿಕಿತ್ಸೆ, ಯುರಾಲಜಿ, ಕ್ಯಾನ್ಸರ್‌ ಚಿಕಿತ್ಸಾ ವಿಭಾಗಗಳನ್ನು ಸೇರಿ 9 ವಿಭಾಗಗಳನ್ನು ಹೊಂದಿರುವ ಆಸ್ಪತ್ರೆಯು 250 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಹಂತ ಹಂತವಾಗಿ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ವಿಭಾಗಗಳಿಗೆ ವಿಸ್ತರಿಸಲು ಕ್ರಮ ವಹಿಸಲಾಗುವುದು’ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಎಂಎಂಸಿಆರ್‌ಐ) ನಿರ್ದೇಶಕಿ ಡಾ.ದಾಕ್ಷಾಯಿಣಿ ತಿಳಿಸಿದ್ದಾರೆ.

‘₹30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಟ್ರಾಮಾ ಕೇರ್‌ 135 ಹಾಸಿಗೆಯ ಸಾಮರ್ಥ್ಯದ್ದಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಭಾಗಗಳಲ್ಲಿ ಅಪಘಾತಕ್ಕೆ ಒಳಗಾದವರಿಗೆ ತ್ವರಿತವಾಗಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಕೇಂದ್ರ ಆರಂಭಿಸಲಾಗಿದೆ. ಹೆಚ್ಚುವರಿಯಾಗಿ 200 ಹಾಸಿಗೆಗಳನ್ನು ಹಾಕಲು ಕೂಡ ಅವಕಾಶವಿದೆ. ಮುಂದಿನ ದಿನಗಳಲ್ಲಿ ವಿಸ್ತರಣೆಯಾಗಲಿದೆ’ ಎಂದು ಮಾಹಿತಿ ನೀಡಿದರು.

‘ಈಗ ನಮ್ಮಲ್ಲಿರುವ ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಹಲವರನ್ನು ಅಲ್ಲಿಗೆ ನೇಮಿಸಲಾಗಿದೆ. ಇತರ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಹೊಸ ಸಲಕರಣೆಗಳನ್ನೂ ತರಿಸಲಾಗುತ್ತಿದೆ. ನೂತನ ಸಿಬ್ಬಂದಿಯನ್ನು ನೇಮಿಸಲು ಶೀಘ್ರವೇ ಕ್ರಮ ವಹಿಸಲಾಗುವುದು. ಹಂತ ಹಂತವಾಗಿ ಸಂಪೂರ್ಣ ಕಾರ್ಯಾಚರಣೆಗೆ ನೂತನ ಆಸ್ಪತ್ರೆಗಳು ಸಜ್ಜಾಗಲಿವೆ. ಕೆ.ಆರ್‌. ಆಸ್ಪತ್ರೆಯ ನವೀಕರಣಕ್ಕೆ ₹89 ಕೋಟಿ ಹಣ ಬಿಡುಗಡೆಯಾಗಿದ್ದು, ಅಲ್ಲಿಗೆ ಬರುವ ರೋಗಿಗಳಿಗೆ ತೊಂದರೆ ಆಗದಂತೆ ಹೊಸ ಆಸ್ಪತ್ರೆಗೆ ಕಳುಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT