ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗಕರ್ಮಿ ನ.ರತ್ನ ಇನ್ನಿಲ್ಲ

Published 19 ಜೂನ್ 2024, 4:22 IST
Last Updated 19 ಜೂನ್ 2024, 4:22 IST
ಅಕ್ಷರ ಗಾತ್ರ

ಮೈಸೂರು: ರಂಗಕರ್ಮಿ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್‌) ಮೊದಲ ನಿರ್ದೇಶಕ ನ.ರತ್ನ (89) ಹೃದಯಾಘಾತದಿಂದ ಬೆಂಗಳೂರಿನಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು.

ಪತ್ನಿ ಲತಾ, ಪುತ್ರ, ಪುತ್ರಿ ಇದ್ದಾರೆ.

ತಮಿಳುನಾಡಿನ ಚಿದಂಬರಂನಲ್ಲಿ ಡಾ.ಎ.ಎಂ.ನಟೇಶ್– ವಿಠ್ಠೋಬಾಯಿ ಅಮ್ಮಾಳ್‌ ದಂಪತಿ ಪುತ್ರರಾಗಿ 1934ರ ಡಿ.12ರಂದು ಜನಿಸಿದ ಅವರು, ಮೈಸೂರು ಹಾಗೂ ಅಮೆರಿಕದಲ್ಲಿ ಶಿಕ್ಷಣ ಪಡೆದರು. ವಿಮರ್ಶಕ ಎ.ಕೆ.ರಾಮಾನುಜನ್‌, ಲೇಖಕ ಯು.ಆರ್.ಅನಂತಮೂರ್ತಿ ಅವರ ಒಡನಾಡಿಯಾಗಿದ್ದರು.

ಮಹಾರಾಜ ಕಾಲೇಜಿನಲ್ಲಿ 1950ರಲ್ಲಿ ಎಸ್‌ಎಸ್‌ಎಲ್‌ಸಿ, ಯುವರಾಜ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ (1952), ಮಹಾರಾಜ ಕಾಲೇಜಿನಲ್ಲಿ ಬಿ.ಎ. ಇಂಗ್ಲಿಷ್ ಆನರ್ಸ್ (1955), ಇನ್‌ಸ್ಟಿಟ್ಯೂಟ್‌ ಆಫ್‌ ಎಜುಕೇಶನ್‌ನಲ್ಲಿ ಬಿ.ಇಡಿ ಪದವಿ ಪಡೆದ ನಂತರ ಉನ್ನತ ಶಿಕ್ಷಣಕ್ಕೆ ಅಮೆರಿಕಕ್ಕೆ ತೆರಳಿದ್ದರು. ನ್ಯೂಯಾರ್ಕ್‌ನ ಹಂಟರ್ ವಿಶ್ವವಿದ್ಯಾಲಯ, ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ವಾಕ್‌ ಮತ್ತು ಶ್ರವಣದಲ್ಲಿ ಎಂ.ಎಸ್‌ ಹಾಗೂ ಡಾಕ್ಟರೇಟ್‌ ಪದವಿ ಪಡೆದು, ಅಲ್ಲಿಯೇ ಅಧ್ಯಾಪಕರಾಗಿದ್ದರು.

1966ರಲ್ಲಿ ಆಯಿಷ್‌ ಸ್ಥಾಪನೆಯಾದಾಗ ಮೊದಲ ನಿರ್ದೇಶಕರಾಗಿ ನೇಮಕಗೊಂಡ ಅವರು 1989ರವರೆಗೂ ಸೇವೆ ಸಲ್ಲಿಸಿದರು. 1985–87ರಲ್ಲಿ ಅಲಿ ಯವರ್‌ ಜಂಗ್ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹಿಯರಿಂಗ್ ಹ್ಯಾಂಟಿಕ್ಯಾಪ್ಟ್‌ನ ನಿರ್ದೇಶಕರಾಗಿದ್ದರು.

‘ಸಮತೆಂತೋ’ ರಂಗತಂಡ ಸ್ಥಾಪಿಸಿ ಮೂಲಕ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಎಲ್ಲಿಗೆ ಮತ್ತು ಇತರ ಕತೆಗಳು, ಬೊಂತೆ, ಗೋಡೆ ಬೇಕೆ ಗೋಡೆ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಪುನರ್ಜನ್ಮ, ಭಿನ್ನ ಬೆನಕ,ಬೋಳಾಚಾರಿಗೆ ನಮನ ಮೊದಲಾದ ರೇಡಿಯೊ ನಾಟಕಗಳನ್ನು ರಚಿಸಿದ್ದಾರೆ. 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದೇ ಏಪ್ರಿಲ್‌ನಲ್ಲಿ ಪ್ರದರ್ಶನಗೊಂಡ ‘ಅಯಾನ್‌ ಶಾಂತಿ ಕುಟೀರ’ ನಾಟಕದಲ್ಲೂ ವ್ಹೀಲ್‌ಚೇರ್‌ನಲ್ಲಿ ಕುಳಿತು ಪಾತ್ರ ನಿರ್ವಹಿಸಿದ್ದರು.

2005ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 2013ರಲ್ಲಿ ರಾಜ್ಯೋತ್ಸವ, ಎಂ.ಎನ್‌.ರಾಯ್‌ ಪ್ರಶಸ್ತಿ, ಬಿ.ವಿ. ಕಾರಂತ ಪ್ರಶಸ್ತಿ, ಹೆಲನ್ ಕೆಲರ್‌ ಪ್ರಶಸ್ತಿ ದೊರೆತಿವೆ.

ಸರಸ್ವತಿಪುರಂನ ಜೋಡಿ ರಸ್ತೆಯಲ್ಲಿರುವ ನಿವಾಸ ’ಮಹಾಮನೆ’ಯಲ್ಲಿ ಮಧ್ಯಾಹ್ನ 1ಗಂಟೆಗೆ ಪಾರ್ಥೀವ ಶರೀರದ ಅಂತಿಮ ದರ್ಶನವಿದ್ದು, ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT